ಇಲ್ಲಸಲ್ಲದ ಹೇಳಿಕೆ ನೀಡುವ ಸಿಎಂ ಕುಮಾರಸ್ವಾಮಿಗೆ ತಲೆ ತಿರುಗಿದೆ – ಯಡ್ಯೂರಪ್ಪ

Spread the love

ಇಲ್ಲಸಲ್ಲದ ಹೇಳಿಕೆ ನೀಡುವ ಸಿಎಂ ಕುಮಾರಸ್ವಾಮಿಗೆ ತಲೆ ತಿರುಗಿದೆ – ಯಡ್ಯೂರಪ್ಪ

ಕುಂದಾಪುರ: ನನ್ನ ವಿರುದ್ದದ ಕೇಸು ತಾಕತ್ತಿದ್ದರೆ ರೀ ಓಪನ್ ಮಾಡಲಿ. ಮಾಡುವುದಿದ್ದರೆ 23ರ ಮೊದಲು ಮಾಡಲಿ. ಮೇ 23 ರ ಬಳಿಕ ಕುಮಾರಸ್ವಾಮಿ ಮನೆಗೆ ಹೋಗ್ತಾರೆ. ಆಮೇಲೆ ಕೇಸು ನಾವು ಓಪನ್ ಮಾಡಿಸುತ್ತೇವೆ ಎಂದು ಕುಮಾರಸ್ವಾಮಿ ವಿರುದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದ್ದಾರೆ.

ಚುನಾವಣೆ ನಂತರ ಯಡಿಯೂರಪ್ಪನವರ ಕೇಸು ರೀ ಓಪನ್ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಭಾನುವಾರ ನೆಂಪುವಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ, ತಾಕತ್ತು ಮುಖ್ಯಮಂತ್ರಿಯವರಿಗಿಲ್ಲ. ಈ ಹಿಂದೆ ಎಲ್ಲವನ್ನೂ ಎದುರಿಸಿದ್ದೇನೆ, ಮುಂದೆಯೂ ಎದುರಿಸುತ್ತೇನೆ ಎಂಬ ಛಲ ಇದೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಎಸ್ವೈ, ಮೋದಿಯವರ ಬಗ್ಗೆ ಕುಮಾರಸ್ವಾಮಿಯವರಿಗೆ ಏಕೆ ಚಿಂತೆ. ರಾಜ್ಯದಲ್ಲಿ ಅಪ್ಪ ಮಕ್ಕಳ ಅಲೆ ಇದೆಯಾ. ಅಪ್ಪ, ಮಕ್ಕಳ ಅಲೆ ಎಲ್ಲಿದೆ ಎಂದು ಮೊದಲು ಹೇಳಲಿ ಎಂದರು.

ಮಂಡ್ಯದಲ್ಲಿ ಸಚಿವ ಪುಟ್ಟರಾಜು ಬಳಿ ಹಣಕ್ಕಾಗಿ ಬೇಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಮಂಡ್ಯದಲ್ಲಿ ದುಡ್ಡಿನ ಮೇಲೆ ಚುನಾವಣೆ ನಡೆಯುತ್ತಿದೆ. ಮಂಡ್ಯ -ಮೈಸೂರು ತುಮಕೂರಲ್ಲಿ ಹಣದ ಹೊಳೆ ಹರಿಯುತ್ತಿದ್ದು, ಕುಮಾರಸ್ವಾಮಿ, ದೇವೇಗೌಡರ ಹಣದ ರಾಜಕೀಯದ ಸ್ಯಾಂಪಲ್ ಇದು. ಭ್ರಷ್ಟಾಚಾರ ರಾಜ್ಯದಲ್ಲಿ ಮುಗಿಲು ಮುಟ್ಟಿದೆ. ಅಜ್ಜ- ಮೊಮ್ಮಕ್ಕಳು ಸೋಲುವುದು ಖಚಿತ ಎಂದು ಯಡಿಯೂರಪ್ಪ ದೇವೇಗೌಡರ ಕುಟುಂಬ ರಾಜಕೀಯದ ವಿರುದ್ದ ಹರಿಹಾಯ್ದರು.

ಚುನಾವಣೆಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಸೋಲುತ್ತಾರೆ, ಕೋಲಾರ ಜಿಲ್ಲೆಯನ್ನು ನಾವು ಗೆಲ್ಲುತ್ತೇವೆ, ದೇವರ ದಯೆ ಇದ್ರೆ ಮಾಜಿ ಪ್ರಧಾನಿ ದೇವೇಗೌಡ ಮನೆಗೆ ಹೋಗ್ತಾರೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ಬಿಜೆಪಿ ದೇಶದಲ್ಲಿ 300 ಸೀಟು, ಕರ್ನಾಟಕದಲ್ಲಿ 22 ಸ್ಥಾನ ಗೆಲ್ಲುತ್ತದೆ ಎಂದರು.

ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡಿತ್ತು, ಆದ್ರೆ ಪ್ರಧಾನಿ ಮೋದಿ ದೇಶವನ್ನು ಸದೃಢ ಮಾಡಿದ್ದಾರೆ, ರಾಹುಲ್ ಗಾಂಧಿ ಒಬ್ಬ ಬಚ್ಚಾ,ರಾಹುಲ್ ಹುಡುಗಾಟಿಕೆ ಮಾತು ಆಡುತ್ತಾನೆ ಅಂತಾ ಗುಡುಗಿದ ಬಿಎಸ್ ವೈ ಮಂಡ್ಯದಲ್ಲಿ ಸುಮಲತಾಗೆ ಅವಮಾನ ಮಾಡುತ್ತಿದ್ದಾರೆ, ಆದ್ರೆ ನಾವು ಸುಮಲತಾಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ ಎಂದರು.

ಸಿ.ಎಂ ಕುಮಾರಸ್ವಾಮಿ ಕರಾವಳಿ ಜನರಿಗೆ ಬುದ್ದಿಯಿಲ್ಲ ಅಂತಾರೆ, ರಾಹುಲ್ ಗಾಂಧಿಯ ಕೃಪೆಯಿಂದ ಸಿಎಂ ಆದೆ ಅಂತಾರೆ, ಪುಲ್ವಾಮಾ ಘಟನೆ ಗೊತ್ತಿತ್ತು ಅಂತ ಹೇಳ್ತಾರೆ, ಸಿಎಂ ಕುಮಾರಸ್ವಾಮಿಗೆ ತಲೆ ತಿರುಗಿರಬೇಕು ಅದಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಕಿಡಿಕಾರಿದ್ರು. ಕುಮಾರಸ್ವಾಮಿ ಲಜ್ಜೆಗೆಟ್ಟ ಬೇಜವಾಬ್ದಾರಿ ಸಿಎಂ,ಇವರ ಹೇಳಿಕೆಯಿಂದ ಕರ್ನಾಟಕ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ,ಇಂತಹ ತುಘಲಕ್ ದರ್ಬಾರ್ ಸಿಎಂ ನಮಗೆ ಬೇಡ ಎಂದರು


Spread the love