ಚುನಾವಣಾ ಸಿಬ್ಬಂದಿಗೆ ಪಂಚಾಯತ್ ಮೂಲಕ ಊಟದ ವ್ಯವಸ್ಥೆ- ಹೆಪ್ಸಿಬಾ ರಾಣಿ ಕೊರ್ಲಪಾಟಿ

Spread the love

ಚುನಾವಣಾ ಸಿಬ್ಬಂದಿಗೆ ಪಂಚಾಯತ್ ಮೂಲಕ ಊಟದ ವ್ಯವಸ್ಥೆ- ಹೆಪ್ಸಿಬಾ ರಾಣಿ ಕೊರ್ಲಪಾಟಿ

ಉಡುಪಿ: ಏಪ್ರಿಲ್ 18 ರಂದು ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸಮೀಪದ ಪಂಚಾಯತ್ ನಲ್ಲಿ ಊಟ ಸಿದ್ದಪಡಿಸಿ , ಕರ್ತವ್ಯ ನಿರತ ಮತಗಟ್ಟೆಗಳಿಗೆ ಸರಬರಾಜು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಅವರು ಭಾನುವಾರ ಸೈಂಟ್ ಸಿಸಿಲಿ ಶಾಲೆಯಲ್ಲಿ , ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದರು.

ಸುಗಮ ಚುನಾವಣೆಗಾಗಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಪ್ರತಿಯೊಬ್ಬ ಅಧಿಕಾರಿ ಮತ್ತು ಎಲ್ಲಾ ಸಿಬ್ಬಂದಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ಚುನಾವಣ ಸಿಬ್ಬಂದಿಗೆ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಲು ಯಾವುದೇ ತೊಂದರೆಯಾಗದಂತೆ ಎಲ್ಲಾ ಸೂಕ್ತ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ, ಸಿಬ್ಬಂದಿಗೆ ಊಟದ ವ್ಯವಸ್ಥೆಗಾಗಿ ಸಮೀಪದ ಪಂಚಾಯತ್ ನ್ನು ನೋಡಲ್ ಕೇಂದ್ರವನ್ನಾಗಿಸಿ, ಅಲ್ಲಿ ಊಟ ತಯಾರಿಸಿ, ಸಮೀಪದ ಎಲ್ಲಾ ಮತಗಟ್ಟೆಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೂಕ್ತ ಸೌಲಭ್ಯಗಳನ್ನು ಸಿಬ್ಬಂದಿಗಳಿಗೆ ಒದಗಿಸಲಾಗುವುದು ಎಂದು ಡಿಸಿ ಹೇಳಿದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗೆ ಮಸ್ಟರಿಂಗ್ ಕೇಂದ್ರಕ್ಕೆ ಬರಲು ಮತ್ತು ಡಿಮಸ್ಟರಿಂಗ್ ನಂತರ ತೆರಳು ಸೂಕ್ತ ವಾಹನ ವ್ಯವಸ್ಥೆ ಮಾಡಲಾಗುವುದು, ಡಿಮಸ್ಟರಿಂಗ್ ಸಮಯದಲ್ಲಿ ಮತಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ ಎಲ್ಲಾ ಸಿಬ್ಬಂದಿ ಹಾಜರಿ ಕಡ್ಡಾಯವಾಗಿದ್ದು, ಡಿಮಸ್ಟರಿಂಗ್ ಸಮಯದಲ್ಲಿ ಹಾಜರಾತಿ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಮತ ಚಲಾಯಿಸಲು ಎಪಿಕ್ ಕಾರ್ಡ್ ಪರಿಗಣಿಸುವಂತೆ ಮತ್ತು ಎಪಿಕ್ ಕಾರ್ಡ್ ಇಲ್ಲವಾದಲ್ಲಿ ಚುನಾವಣಾ ಆಯೋಗ ಸೂಚಿಸಿರುವ ಅಗತ್ಯ ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ನೀಡಿ, ಯಾವುದೇ ಕಾರಣಕ್ಕೂ ವೋಟರ್ ಸ್ಲಿಪ್ ಅನ್ನು ಮತದಾನಕ್ಕೆ ದಾಖಲೆ ಎಂದು ಪರಿಗಣಿಸಬೇಡಿ ಎಂದು ತರಬೇತಿ ನಿರತ ಸಿಬ್ಬಂದಿಗೆ ಡಿಸಿ ಹೇಳಿದರು.

ಕೆಲವು ಕಡೆಗಳಲ್ಲಿ ಮುಚ್ಚಿದ್ದ ಶಾಲೆಗಳನ್ನು ಚುನಾವಣಾ ಮತಗಟ್ಟೆಗಾಗಿ ಮತ್ತೆ ತೆರಿದಿದ್ದು, ಇಂತಹ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳು ಇರುವ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ತಾವು ಜಿಲ್ಲೆಯಲ್ಲಿ ಇದುವರೆಗೆ 100 ಕ್ಕೂ ಅಧಿಕ ಮತಗಟ್ಟೆ ಇರುವ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದು ಅಗತ್ಯವಿರುವ ದುರಸ್ತಿಗೆ ಸೂಚಿಸಲಾಗಿದೆ ಎಂದರು.

ಮತಗಟ್ಟೆಗಳಲ್ಲಿ ಮತ ಚಲಾವಣೆಯ ಗೋಪ್ಯತೆಯನ್ನು ಕಾಪಾಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮತಯಂತ್ರದ ಬಳಿ ಮತದಾರರನ್ನು ಬಿಟ್ಟು ಇತರೆ ಯಾರಿಗೂ ಅವಕಾಶ ನೀಡಬೇಡಿ , ಮತಗಟ್ಟೆಯಲ್ಲಿ ಯಾವುದೇ ಸಮಸ್ಯೆಯಿದ್ದಲ್ಲಿ ಕೂಡಲೇ ಸೆಕ್ಟರ್ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ಮತಗಟ್ಡೆಗೆ ಗಣ್ಯ ವ್ಯಕ್ತಿಗಳು ಮತದಾನಕ್ಕೆ ಬಂದರು ಎಂದು ನಿಯಮಗಳನ್ನು ಉಲ್ಲಂಘಿಸಬೇಡಿ, ಅಂಗವಿಕಲ ಮತದಾರರಿಗೆ ಸೂಕ್ತ ನೆರವು ನೀಡುವಂತೆ ಡಿಸಿ ತಿಳಿಸಿದರು.

ಉಡುಪಿ ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜು ಮತ್ತಿತರರು ಉಪಸ್ಥಿತರಿದ್ದರು.


Spread the love