ಉಗ್ರರ ನೆಲೆಯ ಮೇಲಿನ  ನಿರ್ದಿಷ್ಟ ದಾಳಿಗೂ ಸಾಕ್ಷ್ಯ ಕೇಳುತ್ತಿರುವುದು ವಿಪರ್ಯಾಸ: ಸಂಸದೆ ಮೀನಾಕ್ಷಿ ಲೇಖಿ

Spread the love

ಉಗ್ರರ ನೆಲೆಯ ಮೇಲಿನ  ನಿರ್ದಿಷ್ಟ ದಾಳಿಗೂ ಸಾಕ್ಷ್ಯ ಕೇಳುತ್ತಿರುವುದು ವಿಪರ್ಯಾಸ: ಸಂಸದೆ ಮೀನಾಕ್ಷಿ ಲೇಖಿ

ಉಡುಪಿ: ‘1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಕಣ್ಮರೆಯಾದ 54 ವೀರಯೋಧರನ್ನು ಇಂದಿಗೂ ಮರಳಿ ಕರೆತರಲಾಗಲಿಲ್ಲ. ಆದರೆ, ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್‌ ವಿಷಯದಲ್ಲಿ ಹಾಗಾಗಲಿಲ್ಲ. ಭಾರತ ಬದಲಾಗಿರುವ ಸಂಕೇತ’ ಎಂದು ಸಂಸದೆ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಹೇಳಿದರು.

ಮಲ್ಪೆಯ ಕಡಲ ತೀರದಲ್ಲಿ ಭಾನುವಾರ ನಮೋ ಭಾರತ್ ಸಂಘಟನೆ ಹಮ್ಮಿಕೊಂಡಿದ್ದ ಪಾಂಚಜನ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೈಶ್‌, ಲಷ್ಕರ್ ಎ ತೊಯ್ಬಾನಂತಹ ಭಯೋತ್ಪಾದಕ ಸಂಘಟನೆಗಳು ದೇಶದಲ್ಲಿ ಸಾಲು ಸಾಲು ಭಯೋತ್ಪಾದಕ ಕೃತ್ಯಗಳನ್ನು ನಡೆಸಿದವು. ಸಂಸತ್ ಮೇಲೆ ದಾಳಿ, ಮುಂಬೈ ಮಾರಣಹೋಮದಂತಹ ವಿಧ್ವಂಸಕ ಕೃತ್ಯಗಳನ್ನು ಎಸಗಿದವು. ಇಂತಹ ದೃಷ್ಕೃತ್ಯಗಳಿಗೆ ಹಿಂದಿನ ಸರ್ಕಾರ ಪ್ರತ್ಯುತ್ತರ ನೀಡಲಿಲ್ಲ. ಆದರೆ, ಉರಿ, ಪುಲ್ವಾಮದಂತಹ ಉಗ್ರರ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಭಾರತದ ಸೇನೆ ಸರ್ಜಿಕಲ್‌ ದಾಳಿ ನಡೆಸಿದರೆ ಕೆಲವರು ಸಾಕ್ಷ್ಯ ಕೇಳುತ್ತಿದ್ದಾರೆ. ಬಾಲಾಕೋಟ್‌ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದ್ದಕ್ಕೂ ಸಾಕ್ಷ್ಯ ಎಲ್ಲಿ ಎನ್ನುತ್ತಿದ್ದಾರೆ. ಖುದ್ದು ಜೈಶ್‌ ಉಗ್ರ ಮಸೂದ್ ಅಜರ್ ಸಹೋದರ ಬಾಲಾಕೋಟ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾನೆ. ಜೈಶ್ ಸಂಘಟನೆಯೇ ದಾಳಿಯನ್ನು ಒಪ್ಪಿಕೊಂಡಿರುವಾಗ ದೇಶದೊಳಗಿನ ಕೆಲವರು ಸಾಕ್ಷ್ಯ ಕೇಳುತ್ತಿರುವುದು ವಿಪರ್ಯಾಸ ಎಂದು ವ್ಯಂಗ್ಯವಾಡಿದರು.

ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರ ಎಂದು ಬೀಗುತ್ತಿರುವ ಪಾಕಿಸ್ತಾನ ಹಿಂದಿನ ಆಟಗಳನ್ನೆಲ್ಲ ಬಿಟ್ಟುಬಿಡಬೇಕು. ಉಗ್ರರನ್ನು ಪೋಷಿಸುವುದನ್ನು ನಿಲ್ಲಿಸಬೇಕು. ಭಾರತ ಬದಲಾಗಿದೆ, ಕಾರ್ಯತಂತ್ರಗಳು ಬದಲಾಗಿವೆ. ಉಗ್ರರನ್ನು ಪಾಕಿಸ್ತಾನ ಕೊಲ್ಲದಿದ್ದರೆ ಭಾರತವೇ ಕೊಲ್ಲಲಿದೆ ಎಂದು ಎಚ್ಚರಿಕೆ ನೀಡಿದರು. ಭಾರತ ಯಾವ ರಾಷ್ಟ್ರದ ವಿರುದ್ಧ ಯುದ್ಧ ಮಾಡುವ ಉದ್ದೇಶವಿಲ್ಲ; ಆದರೆ, ಕಾಲು ಕರೆದು ಬಂದರೆ ಬಿಡುವುದಿಲ್ಲ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ ಎಂದು ಮೀನಾಕ್ಷಿ ಲೇಖಿ ಹೇಳಿದರು.

ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶದ ತುಂಬೆಲ್ಲ ಸುಳ್ಳುಗಳನ್ನು ಹರಡಲಾಗುತ್ತಿದೆ. ಪುಲ್ವಾಮ ದಾಳಿಗೂ ಮುಂದಿನ ಲೋಕಸಭಾ ಚುನಾವಣೆಗೂ ನಂಟು ಕಲ್ಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಸಮರ್ಥ ನಾಯಕರೇ ಇಲ್ಲ. ರಸ್ತೆ ನಿರ್ಮಾಣ, ರೈಲ್ವೆ ಅಭಿವೃ‌ದ್ಧಿ, ಮಹಿಳಾ ಸಬಲೀಕರಣ, ಉಜ್ವಲ ಯೋಜನೆ, ಮೂಲಸೌಕರ್ಯಗಳ ಅಭಿವೃದ್ಧಿಯ ಮೂಲಕ ಬಿಜೆಪಿ ಭಾರತದ ಪ್ರತಿಯೊಬ್ಬರನ್ನೂ ತಲುಪುತ್ತಿದ್ದಾರೆ ಎಂದರು.

ಶ್ರೀಕಾಂತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ಸೀತಾರಾಂ ಭಟ್‌, ಚೇತನ್ ಆಜಾದ್, ಶಶಾಂಕ್ ಶಿವತ್ತಾಯ ಇದ್ದರು.


Spread the love