ಉಡುಪಿ: ಅಕ್ಟೋಬರ್ 18 ರಿಂದ ಕನ್ನರ್ಪಾಡಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಟ್ಟದ ವೈ.ಸಿ.ಎಸ್/ವೈ.ಎಸ್.ಎಮ್ ಸಮಾವೇಶ

Spread the love

ಉಡುಪಿ: ಯುವ ವಿದ್ಯಾರ್ಥಿ ಸಂಚಲನವು (ವೈ.ಸಿ.ಎಸ್/ವೈ.ಎಸ್.ಎಮ್) ಭಾರತಕ್ಕೆ ಪಾದಾರ್ಪಣೆಗೈದು 50 ಸಂವತ್ಸರಗಳನ್ನು ಪೂರೈಸಿ ಸುವರಣ ಮಹೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಟ್ಟದ ವೈ.ಸಿ.ಎಸ್/ವೈ.ಎಸ್.ಎಮ್ ಸಮಾವೇಶವು ಅಕ್ಟೋಬರ್ 18, ರವಿವಾರದಿಂದ ಅಕ್ಟೋಬರ್ 20ರ ವರೆಗೆ ಉಡುಪಿಯ ಕನ್ನರ್ಪಾಡಿಯಲ್ಲಿನ ಬಾಲಾಜಿ ಲೇಔಟ್‍ನಲ್ಲಿರುವ ಸೈಂಟ್ ಮೇರಿಸ್ ಸಿ.ಬಿ.ಎಸ್.ಸಿ ಶಾಲೆಯಲ್ಲಿ ನಡೆಯುವುದು ಎಂದು ಕರ್ನಾಟಕ ಪ್ರಾಂತೀಯ ವೈ.ಸಿ.ಎಸ್/ವೈ.ಎಸ್.ಎಮ್ ಅಧ್ಯಕ್ಷೆ ಹೆಝೆಲ್ ಮಾರ್ಟಿಸ್ ತಿಳಿಸಿದರು.

YCS_YSM_Udupi_Press meet 14-10-2014 10-48-37 YCS_YSM_Udupi_Press meet 14-10-2014 10-48-49

ಅವರು ಬುಧವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಉಡುಪಿ ಜಿಲ್ಲೆಯ ವೈ.ಸಿ.ಎಸ್/ವೈ.ಎಸ್.ಎಮ್ ಸಮಿತಿಯು ಈ ಸಮಾವೇಶವನ್ನು ಅತಿಥೇಯವಾಗಿ ನಡೆಸುತ್ತಿದೆ. `ಆಧುನಿಕ ಯುಗದಲ್ಲಿ ವಿದ್ಯಾರ್ಥಿ ಶಿಕ್ಷಣ’ ಎಂಬ ವಿಷಯದ ಮೇಲೆ ನಡೆಯುವ ಈ ಸಮಾವೇಶದ ಮೊದಲೆರಡು ದಿನಗಳಲ್ಲಿ ಸುಮಾರು 500 ವಿದ್ಯಾರ್ಥಿಗಳು ಹಾಗೂ ಕೊನೆಯ ದಿನ ನಡೆಯಲಿರುವ ವಿದ್ಯಾರ್ಥಿ ಮೆರವಣಿಗೆಯಲ್ಲಿ ಸುಮಾರು 1500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಅಕ್ಟೋಬರ್ 18ರಂದು ಸಂಜೆ 05.00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯುವುದು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾಕ್ಟರ್ ಅಲೋಶಿಯಸ್ ಪಾವ್ಲ್ ಡಿ’ಸೋಜರವರು ಆಶೀರ್ವಚನ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೊರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು, ಶೀರೂರು ಮಠ ಇವರು ಸಮಾವೇಶವನ್ನು ಉದ್ಘಾಟಿಸಲಿರುವರು.

ಅಕ್ಟೋಬರ್ 19ರಂದು ಸಮಾವೇಶದ ಪ್ರಮುಖ ವಿಷಯದ ಕುರಿತು ವಿಚಾರ ಸಂಕಿರಣ ಹಾಗೂ ಚರ್ಚಾಕೂಟಗಳು ನಡೆಯಲಿವೆ. ಇದರೊಂದಿಗೆ ಪರಿಸರ ಸರಂಕ್ಷಣೆ ಹಾಗೂ ಸಾಮಾಜಿಕ ಸಂಪರ್ಕ ಮಾಧ್ಯಮಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಅಂತರ್-ಧರ್ಮೀಯ ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.

ದಿನಾಂಕ 20ರಂದು ಬೆಳಿಗ್ಗೆ 09.15ಕ್ಕೆ ಸರಿಯಾಗಿ ಉಡುಪಿ ಶೋಕಮಾತ ಇಗರ್ಜಿಯ ವಠಾರದಿಂದ ಸಮಾವೇಶ ನಡೆಯುವ ಸ್ಥಳಕ್ಕೆ ವಿದ್ಯಾರ್ಥಿಗಳ ಹಕ್ಕುಗಳ ಕುರಿತು ಮೆರವಣಿಗಯು ನಡೆಯುವುದು. ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕೆ. ಅಣ್ಣಾಮಲೈಯವರು ಈ ವಿದ್ಯಾರ್ಥಿ ಮೆರವಣಿಗೆಗೆ ಚಾಲನೆ ನೀಡುವರು. 11.15ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾಕ್ಟರ್ ಬರ್ನಾರ್ಡ್ ಮೊರಾಸ್‍ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವರಾದ   ವಿನಯ ಕುಮಾರ್ ಸೊರಕೆ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್‍ರವರು ಆಗಮಿಸಲಿರುವರು. ಅಂದು `ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆ’ಯ ಕುರಿತಂತೆ ವಿದ್ಯಾರ್ಥಿಗಳ ಮನವಿಯನ್ನು ಸಚಿವರ ಮುಕಾಂತರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಉಡುಪಿ ಜಿಲ್ಲಾ ವೈಎಸ್ ಎಮ್ ಅಧ್ಯಕ್ಷ ಸುದರ್ಶನ್ ನಾಯಕ್, ಜಿಲ್ಲಾ ವೈಸಿಎಸ್ ಅಧ್ಯಕ್ಷೆ ಶ್ರುತಿ ನೊರೋನ್ಹಾ, ವೈಸಿಎಸ್ ಮತ್ತು ವೈಎಸ್ ಎಮ್ ಅಂತರಾಷ್ಟ್ರೀಯ ನಿರ್ದೇಶಕ ವಂ ಚಾರ್ಲ್ಸ್ ಮಿನೇಜಸ್, ಜಿಲ್ಲಾ ನಿರ್ದೇಶಕ ವಂ ಎಡ್ವಿನ್ ಡಿ’ಸೋಜಾ ಉಪಸ್ಥಿತರಿದ್ದರು.


Spread the love