ಉಡುಪಿ: ಎಲ್ಲೈಸಿಯ `ನ್ಯೂ ಎಂಡೋಮೆಂಟ್ ಪ್ಲಸ್’ ಯೋಜನೆ ಮಾರುಕಟ್ಟೆಗೆ ಬಿಡುಗಡೆ

Spread the love

ಉಡುಪಿ: ಭಾರತೀಯ ಜೀವವಿಮಾ ನಿಗಮದ ಅಜ್ಜರಕಾಡು ಎಲ್‍ಐಸಿ ಉಡುಪಿ ವಿಭಾಗೀಯ ಕಚೇರಿಯಲ್ಲಿ ಹೊಸ ಯೋಜನೆ `ನ್ಯೂ ಎಂಡೋಮೆಂಟ್ ಪ್ಲಸ್’ನ್ನು ಬುಧವಾರ ಹಿರಿಯ ವಿಭಾಗಾಧಿಕಾರಿ ವಿಶ್ವನಾಥ ಗೌಡ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

LIC

ಬಳಿಕ ಸುದ್ದಿಗೋಷ್ಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 3 ತಿಂಗಳ ವಯೋಮಾನದಿಂದ ತೊಡಗಿ, 50 ವರ್ಷಗಳ ವರೆಗಿನ ವ್ಯಕ್ತಿ ಈ ಪಾಲಿಸಿ ಪಡೆಯಲು ಅರ್ಹನಾಗಿದ್ದಾನೆ. ಪರಿಪಕ್ವತೆಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 60 ವರ್ಷ. ವಾರ್ಷಿಕ ಕನಿಷ್ಠ   ಸಾವಿರ ರೂ. ಪ್ರಥಮ ಪ್ರೀಮಿಯಂ ಹೊಂದಿದ್ದು, ಅರ್ಧವಾರ್ಷಿಕ 13 ಸಾವಿರ, ತ್ರೈಮಾಸಿಕ 8 ಸಾವಿರ ಹಾಗೂ ಮಾಸಿಕ 3 ಸಾವಿರ ರೂ.ಪ್ರೀಮಿಯಂನಲ್ಲಿ ಪಾಲಿಸಿ ಲಭ್ಯ ಎಂದರು.

ವಾರ್ಷಿಕ ಪ್ರೀಮಿಯಂನ 10 ಪಟ್ಟು ಅಥವಾ ಪಾವತಿಸಿದ ಒಟ್ಟು ಪ್ರೀಮಿಯಂನ ಶೇ.105ರ ಪೈಕಿ ಯಾವುದು ಹೆಚ್ಚಿರುವುದೋ ಅದನ್ನು ಮೂಲ ವಿಮಾ ಮೊತ್ತ ಎಂದು ಪರಿಗಣಿಸಲಾಗುತ್ತದೆ ಎಂದರು. ಪರಿಪಕ್ವತೆಯ ದಿನದಂದು ಇರುವ ಫಂಡ್ ಮೌಲ್ಯವನ್ನು ಪರಿಪಕ್ವತೆಯ ಸೌಲಭ್ಯವಾಗಿ ನೀಡಲಾಗುತ್ತದೆ.

ಯೋಜನೆ ಆರಂಭಿಸಿದ ಬಳಿಕ 5 ವರ್ಷದಲ್ಲಿ ಮರುಪಾವತಿ ಸೌಲಭ್ಯವಿದೆ. ಈ ಯೋಜನೆಯಲ್ಲಿ 5 ವರ್ಷ ಲಾಕ್‍ಇನ್ ಅವಧಿ ನಿಗದಿಪಡಿಸಿದ್ದು, ವರ್ಷದಲ್ಲಿ 4ಸಲ ಉಚಿತ ಲಾಕ್‍ಓವರ್ ಸೌಲಭ್ಯ ಕಲ್ಪಿಸಲಾಗಿದೆ. ಅಪಘಾತ ವಿಮಾ ರೈಡರ್ ಸೌಲಭ್ಯ ಪಡೆಯಲಿಚ್ಛಿಸುವವರು ಪ್ರತಿ ಸಾವಿರ ರೂ.ಗಳಿಗೆ 0.40 ರೂ. ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.ವ್ಯಕ್ತಿ ಹೊಂದಿರುವ ಎಲ್ಲ ಪಾಲಿಸಿಗಳನ್ನೂ ಸೇರಿಸಿ ಗರಿಷ್ಠ 1 ಕೋ. ಅಪಘಾತ ವಿಮಾ ಸೌಲಭ್ಯ ನೀಡಲಾಗುತ್ತದೆ. ಹೂಡಿಕೆ ಮೊತ್ತವನ್ನು ಬಾಂಡ್ ಫಂಡ್, ಬ್ಯಾಲೆನ್ಸ್‍ಡ್ ಫಂಡ್, ಸೆಕ್ಯೂರ್ಡ್ ಫಂಡ್ ಮತ್ತು ಗ್ರೋಥ್ ಫಂಡ್ ಎಂಬ 4 ವಿಧದ ಹೂಡಿಕೆಗಳಲ್ಲಿ ತೊಡಗಿರಸಬಹುದು. ತೊಡಗಿಸಿದ ಮೊತ್ತಕ್ಕೆ 80ಸಿ ಸೆಕ್ಷನ್‍ನಡಿ ತೆರಿಗೆ ವಿನಾಯಿತಿ ಸೌಲಭ್ಯ ಹಾಗೂ ಪರಿಪಕ್ವತಾ ಮೊತ್ತ ಸಂಪೂರ್ಣ ಕರಮುಕ್ತವಾಗಿದೆ ಎಂದು ವಿವರಿಸಿದರು.

ಎಲ್‍ಐಸಿ ಉಡುಪಿ ವಿಭಾಗದ ಹಿರಿಯ ವಿಕ್ರಯ ಅಧಿಕಾರಿ ರಾಜೇಶ್ ಮುಧೋಳ್, ವಿಭಾಗೀಯ ಅಧಿಕಾರಿ ಉದಯಕುಮಾರ್ ನವಣಿ, ಮಾರುಕಟ್ಟೆ ಅಧಿಕಾರಿ ನಾರಾಯಣ ಗೌಡ ಉಪಸ್ಥಿತರಿದ್ದರು.


Spread the love