ಉಡುಪಿ: ಕೊರೋನಾ ಸೋಂಕಿನಿಂದ ತುಳು ನಿಘಂಟು ತಜ್ಞ ಡಾ. ಯುಪಿ ಉಪಾದ್ಯಾಯ ಮೃತ್ಯು

Spread the love

ಉಡುಪಿ: ಕೊರೋನಾ ಸೋಂಕಿನಿಂದ ತುಳು ನಿಘಂಟು ತಜ್ಞ ಡಾ. ಯುಪಿ ಉಪಾದ್ಯಾಯ ಮೃತ್ಯು

ಉಡುಪಿ: ಕೊರೋನಾ ಮಹಾಮಾರಿಗೆ ತುಳು ನಿಘಂಟು ತಜ್ಞ, ಭಾಷಾ ವಿದ್ವಾಂಸರಾದ ಡಾ. ಯುಪಿ ಉಪಾದ್ಯಾಯ ಬಲಿಯಾಗಿದ್ದು ಜಿಲ್ಲೆಯಲ್ಲಿ ಕೋರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.

ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಅವರಿಗೆ ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ತುಳು ನಿಘಂಟು ಯೋಜನೆಯಡಿಯಲ್ಲಿ ಪ್ರಕಟವಾದ ತುಳು ಭಾಷೆಯ ಆರು ಸಂಪುಟದ ಬೃಹತ್ ನಿಘಂಟು ಸಂಪಾದಕರಾಗಿದ್ದ ಯುಪಿ ಉಪಾದ್ಯಾಯ ಒಟ್ಟಾರೆ 3,440 ಪುಟ, ಒಂದು ಲಕ್ಷ ಶಬ್ಧಗಳ ಬೃಹತ್ ನಿಘಂಟನ್ನು ಪ್ರಕಟಿಸಿದ್ದರು.

ಯುಪಿ ಉಪಾದ್ಯಾಯ ತಮ್ಮ ಪತ್ನಿ ದಿ.ಡಾ. ಸುಶೀಲಾ ಉಪಾದ್ಯಾಯ ಅವರೊಡನೆ ಸೇರಿ ಭಾಷೆ, ಜಾನಪದ, ಸಂಸ್ಕೃತಿ ಕ್ಷೇತ್ರದಲ್ಲಿ ಸಾಕಷ್ಟು ಅದ್ಯಯನ ನಡೆಸಿದ್ದರು. ಭಾಷೆಗಳ ವಿಶೇಷ ಆಸಕ್ತಿಯನ್ನು ಹೊಂದಿದ್ದ ಉಪಾದ್ಯಾಯ ಆಫ್ರಿಕಾ ರಾಷ್ಟ್ರಗಳಿಗೆ ತೆರಳಿ ಅಲ್ಲಿ ಜನಪದ ಭಾಷೆಗಳ ಅದ್ಯಯನ ನಡೆಸಿದ್ದರು.

ಭಾಷಾ ವಿದ್ವಾಂಸ ಯುಪಿ ಉಪಾದ್ಯಾಯ ಅವರ ಭಾಷೆ, ಸಾಹಿತ್ಯ ಸೇವೆ ಪರಿಗಣಿಸಿ ಸೇಡಿಯಾಪು ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿ , ಗೌರವಗಳು ಸಂದಿದೆ.

ಮೃತರು ಅಮೆರಿಕಾದಲ್ಲಿ ನೆಲೆಸಿರುವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.


Spread the love