ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೋಭಾ ಮುಕ್ತ ಕಾಲ ಸನ್ನಿಹಿತ – ಕಾಂಗ್ರೆಸ್

Spread the love

ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೋಭಾ ಮುಕ್ತ ಕಾಲ ಸನ್ನಿಹಿತ – ಕಾಂಗ್ರೆಸ್

ಉಡುಪಿ: ಇಂದಿರಾ ಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಇಂದಿಗೂ ಬಲಿಷ್ಠವಾಗಿದೆ. ನಿರ್ದಿಷ್ಟ ಮತದಾರರನ್ನು ಹೊಂದಿರುವ ಈ ಕ್ಷೇತ್ರ ಎಂದಿಗೂ ಕಾಂಗ್ರೆಸ್ ಮುಕ್ತವಾಗಲಾರದು. ಈ ಹಿನ್ನಲೆಯಲ್ಲಿ ಶೋಭಾ ಕರಂದ್ಲಾಜೆಯವರು ಈ ಹಗಲುಗನಸನ್ನು ಶಾಶ್ವತವಾಗಿ ಬಿಡುವುದು ಒಳಿತು. ಮೈತ್ರಿ ಧರ್ಮದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆ.ಡಿ.ಎಸ್.ಗೆ ನೀಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿಎಸ್. ಪಕ್ಷಗಳು 20:8 ಅನುಪಾತದಂತೆ ಸೀಟುಗಳನ್ನು ಹಂಚಿಕೊಂಡಿವೆ. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಪಕ್ಷಗಳು ಒಡಂಬಡಿಕೆಯೊಂದಿಗೆ 20:20 ರಂತೆ ಹೊಂದಾಣಿಕೆ ಮಾಡಿಕೊಂಡಿರುವಾಗ ಶಿವ ಸೇನೆಯು ಸ್ಪರ್ಧಿಸುವ 20 ಕ್ಷೇತ್ರಗಳಲ್ಲಿ ಬಿಜೆಪಿ ಮುಕ್ತವಾಗಿದೆ ಎಂದು ಶೋಭಾರವರು ಘೋಷಿಸುವರೇ ? ನಿರ್ದಿಷ್ಟವಾದ ಕಾರ್ಯಕರ್ತರುಗಳನ್ನು ಹೊಂದಿರುವ ಯಾವುದೇ ಪಕ್ಷಗಳು ಮುಕ್ತವಾಗಲು ಸಾಧ್ಯವಿಲ್ಲ. ಜನತೆಗೆ ತಪ್ಪು ಸಂದೇಶವನ್ನು ನೀಡುವ ಇಂತಹ ಹೇಳಿಕೆಗಳು ಶೋಭಾರವರಿಗೆ ಶೋಭೆ ತರಲಾರದು.

ಕೇಂದ್ರ ಸರಕಾರದ ಅವಧಿ ಮುಗಿಯುದರೊಳಗೆ ಒಂದೊಂದೇ ಹಗರಣಗಳು ಮುನ್ನಲೆಗೆ ಬರುತ್ತಿರುವಾಗ ಅಧಿಕಾರವನ್ನು ಸವಿಯುತ್ತಿರುವ ವ್ಯಕ್ತಿಗಳು ಆಗರ್ಭ ಶ್ರೀಮಂತರಾಗುತ್ತಿರುವಾಗ ಸಚಿವಾಲಯದ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವಾಗ ಕೇಂದ್ರವು ತನ್ನ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ ಎನ್ನುವ ಶೋಭಾರವರ ಹೇಳಿಕೆಯೇ ಹಾಸ್ಯಾಸ್ಪದ. ಬಿಜೆಪಿಯ ಆಡಳಿತಾವಧಿಯಲ್ಲಿ ದೇಶದ ಮೇಲೆ ಉಗ್ರರ ದಾಳಿ ನಿರಂತರವಾಗಿ ನಡೆದು ಅತ್ಯಧಿಕ ಸೈನಿಕರು ಉಗ್ರರಿಂದ ಹತರಾಗಿದ್ದಾರೆ. ಶೋಭಾರವರ ಹೇಳಿಕೆಯಂತೆ ಕೇಂದ್ರ ಸರಕಾರ ಸೈನಿಕರಿಗೆ ಶಕ್ತಿ ತುಂಬಿದ್ದೇ ಹೌದಾದರೆ ಸೈನಿಕರ ಸಾವು ಹೇಗೆ ಸಾಧ್ಯವಾಯಿತು? ಇದು ಕೇಂದ್ರ ಸರಕಾರದ ಭದ್ರತಾ ವೈಫಲ್ಯವನ್ನು ಮರೆಮಾಚುವ ಪ್ರಯತ್ನವಾಗಿದೆ.

ಚೀನಾ ಹಾಗೂ ಪಾಕಿಸ್ತಾನ ದೇಶಗಳನ್ನು ಹಿಂದಿನಿಂದಲೂ ಭಾರತ ದೇಶದ ವೈರಿ ದೇಶಗಳಾಗಿ ಪರಿಗಣಿಸಲಾಗಿತ್ತು. ಯು.ಪಿ.ಎ. ಸರಕಾರದ ಅವಧಿಯಲ್ಲಿಯೂ ಮನಮೋಹನ ಸಿಂಗ್‍ರವರು ಪ್ರಧಾನಿಯಾಗಿರುವುದನ್ನು ಆ ದೇಶಗಳು ಸಹಿಸಿರಲಿಲ್ಲ. ಹಾಗೆಯೇ ಆ ಅವಧಿಯಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿಯು ಯು.ಪಿ.ಎ. ಸರಕಾರವನ್ನು ವಿರೋಧಿಸಿರುವುದು ಇತಿಹಾಸ.

ಶೋಭಾರವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷದೊಳಗೇ ಬೃಹತ್ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಗೋಬ್ಯಾಕ್ ಶೋಭಾ ಚಳುವಳಿ ಪ್ರಾರಂಭಗೊಂಡಿದೆ. ಕೆಲವು ಶಾಸಕರು ಕೂಡ ಇವರ ಸ್ಪರ್ಧೆಯನ್ನು ವಿರೋಧಿಸುತ್ತಿದ್ದಾರೆ. ಹಾಗಾಗಿ ಅವರೇ ಜಿಲ್ಲೆಯಲ್ಲಿ ಮುಕ್ತರಾಗುವ ಕಾಲ ಸನ್ನಿಹಿತವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love