ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರದಿಂದ ರೈತರಿಗೆ ‘ನೇಣು ಭಾಗ್ಯ’- ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

Spread the love

ಉಡುಪಿ: ರಾಜ್ಯದ ಕಾಂಗ್ರೆಸ್ ಸರಕಾರ ಜನತೆಗೆ ಇದುವರೆಗೆ ಎಲ್ಲಾ ಭಾಗ್ಯಗಳನ್ನು ಕರುಣಿಸಿದ್ದು, ಮುಂದೆ ಹೊಸದಾಗಿ ನೇಣು ಭಾಗ್ಯವನ್ನು ಕರುಣಿಸುವುದು ಉತ್ತಮ ಎಂದು ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದರು.

bjpudupithangadagiprotest 27-06-2014 16-56-43 bjpudupithangadagiprotest 27-06-2014 16-30-23 bjpudupithangadagiprotest 27-06-2014 16-43-01

ಅವರು ಶನಿವಾರ ಜಿಲ್ಲಾ ಬಿಜೆಪಿ ವತಿಯಿಂದ ಸಚಿವ ಶಿವರಾಜ್ ತಂಗಡಗಿ ವಿರುದ್ದ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಮಾಯಕ ವ್ಯಕ್ತಿಗಳು ಸತ್ಯ ಹೇಳಿದ ಕಾರಣಕ್ಕೆ ಕೊಲೆಯಾಗುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ರಾಜ್ಯದ ಒರ್ವ ಜವಾಬ್ದಾರಿಯುತ ಸಚಿವನಾಗಿ ಕೆಲಸ ಮಾಡಬೇಕಾಗಿದ್ದ ಶಿವರಾಜ್ ತಂಗಡಗಿ ತನ್ನ ಜಿಲ್ಲೆಯ ಒರ್ವ ವಿದ್ಯಾರ್ಥಿ ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತಾಗಿ ದನಿ ಎತ್ತಿದ್ದ ಎನ್ನುವ ಕಾರಣಕ್ಕೆ ಸಚಿವರ ಬೆಂಬಲಿಗರು ಸೇರಿ ಆತನನ್ನು ಕೊಲೆ ಮಾಡಿದ್ದಾರೆ. ಇದರಲ್ಲಿ ಸಚಿವ ಶಿವರಾಜ್ ತಂಗಡಗಿ ನೇರ ಭಾಗಿಯಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂಗಡಗಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿದ್ದ ಸರಕಾರ ಕೆಎಫ್‍ಡಿ ಹಾಗೂ ಪಿಎಫ್ ಐ ಸಂಘಟನೆಗಳ ಮೇಲೆ ಇದ್ದ 248 ಪ್ರಕರಣಗಳನ್ನು ಹಿಂಪಡೆದು ಪರೋಕ್ಷವಾಗಿ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿದ್ದಾರೆ ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡಲಿದ್ದು ಕೂಡಲೇ ಸರಕಾರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದರು.

ವರ್ಷವಿಡಿ ಕಬ್ಬು ಬೆಳೆದ ರೈತರು ತಮ್ಮ ಬಾಕಿ ಪಾವತಿಗಾಗಿ ದಂಬಾಲು ಬಿದ್ದು ಕೇಳಿಕೊಂಡರೂ ಹಣ ಬಿಡುಗಡೆ ಮಾಡದ ಸರಕಾರ ಬೆಳಗಾವಿ ಅಧಿವೇಶನ ಹತ್ತಿರ ಬರುವ ವೇಳೆಯಲ್ಲಿ ರೈತರ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ಗೊದಾಮಿನಲ್ಲಿರುವ ಸಕ್ಕರೆಯನ್ನು ಹರಾಜು ಹಾಕಿ ಬಾಕಿ ಪಾವತಿಸುವುದಾಗಿ ಸುಳ್ಳು ಹೇಳುತ್ತಿದ್ದ ದಿನನಿತ್ಯ ರೈತರು ತಾವು ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದೆ ವಿಷಸೇವಿಸಿ, ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ವರಗೆ ಸರಕಾರ ರಾಜ್ಯದ ಜನಗರಿಗೆ ವಿವಿಧ ಭಾಗ್ಯಗಳನ್ನು ಕರುಣಿಸಿದೆ ಅದಕ್ಕೆ ಹೊಸ ಸೇರ್ಪಡೆಯಾಗಿ ನೇಣುಭಾಗ್ಯ ಅಥವಾ ವಿಷಭಾಗ್ಯವನ್ನು ನೀಡಲಿ ಎಂದರು.

ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲತೆಯನ್ನು ಕಂಡಿದ್ದು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮಾತನಾಡಿ ರಾಜ್ಯದ ಕಾಂಗ್ರೆಸ್ ಸರಕಾರದ ವಿವಿಧ ಸಚಿವರು ಆರೋಪಗಳನ್ನು ಎದುರಿಸುತ್ತಿದ್ದು, ಶೀವರಾಜ್ ತಂಗಡಗಿ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರೆ, ಗೃಹ ಸಚಿವ ಜಾರ್ಜ್ ಭಾರತದ ಧ್ವಜವನ್ನು ಸುಟ್ಟ ಕೆ ಎಫ್ ಡಿಯಂತ ಸಂಘಟನೆಯ ಮೇಲಿನ ಕೇಸುಗಳನ್ನು ವಾಪಾಸು ಪಡೆದಿದ್ದಾರೆ. ಅಲ್ಲದೆ ರಾಜ್ಯ ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರು ವಕ್ಫ್ ಆಸ್ತಿಯನ್ನು ತಮ್ಮ ಸಂಬಂಧಿಕರಿಗೆ ನೀಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಇಂತಹ ಗಂಭೀರ ಆರೋಪವನ್ನು ಎದುರಿಸುತ್ತಿರುವ ಮೂವರು ಸಚಿವರನ್ನು ಸಿದ್ದರಾಮಯ್ಯ ತಮ್ಮ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದರು.

ಮಾಜಿ ಜಿಲ್ಲಾಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ, ಗಿತಾಂಜಲಿ ಸುವರ್ಣ, ರಂಜಿತ್ ಸಾಲ್ಯನ್, ಶೀಲಾ ಕೆ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ, ರಾಘವೇಂದ್ರ ಉಪ್ಪೂರು, ದೇವದಾಸ್ ಹೆಬ್ಬಾರ್ ಇನ್ನಿತರರು ಉಪಸ್ಥಿತರಿದ್ದರು.


Spread the love