ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಬಳಿ ಗಲಾಟೆ: ದೂರು – ಪ್ರತಿದೂರು ದಾಖಲು, ಓರ್ವನ ಬಂಧನ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ಚಾಲನೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ವಾಗ್ವಾದ ಹಲ್ಲೆಗೆ ತಿರುಗಿದ ಪರಿಣಾಮ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳ ಆಧಾರದ ಮೇಲೆ ಕೇಸ್ ಹಾಗೂ ಕೌಂಟರ್ ಕೇಸ್ ದಾಖಲಾಗಿದ್ದು, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯಂತೆ, ತೆಲಂಗಾಣದ ಹೈದರಾಬಾದ್ ನಿವಾಸಿ ರಂಗರಾವ್ ಅವರು ಕುಟುಂಬದವರೊಂದಿಗೆ ಜೂನ್ 9ರಂದು ಸಂಜೆ ಶ್ರೀಕೃಷ್ಣ ಮಠಕ್ಕೆ ದರ್ಶನಕ್ಕೆ ಬಂದಿದ್ದರು. ಕಾರು ಪಾರ್ಕಿಂಗ್ ಮಾಡಿ ರಸ್ತೆ ದಾಟುತ್ತಿದ್ದ ವೇಳೆ ಸ್ಥಳೀಯ ನಿವಾಸಿ ಸುಪ್ರೀತ್ ಕುಮಾರ್ ಎಂಬವರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ನಿಧಾನವಾಗಿ ವಾಹನ ಚಲಾಯಿಸುವಂತೆ ಹೇಳಿದಾಗ ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾರಿನಲ್ಲಿದ್ದ ಕೋಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯಿಂದ ರಂಗರಾವ್ ಅವರ ತಲೆಗೆ ಗಾಯವಾಗಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 71/2026ರಡಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ, ಉಡುಪಿ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಕುಮಾರ್ ಅವರು ನೀಡಿದ ಪ್ರತಿದೂರಿನಲ್ಲಿ, ತಾನು ಪತ್ನಿ ಹಾಗೂ ಮಗುವಿನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ತೆಲಂಗಾಣ ನೋಂದಣಿ ಸಂಖ್ಯೆಯ ಕಾರು ಅಜಾಗರೂಕತೆಯಿಂದ ಬಂದು ಡಿಕ್ಕಿ ಹೊಡೆಯಲು ಬಂದಿತ್ತೆಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಕಾರಿನಲ್ಲಿದ್ದ ವ್ಯಕ್ತಿಗಳು ಕೆಳಗಿಳಿದು ಫೋಟೋ ಸ್ಟ್ಯಾಂಡ್, ಕುರ್ಚಿ ಹಾಗೂ ಇತರ ವಸ್ತುಗಳಿಂದ ಹಲ್ಲೆ ನಡೆಸಿದ್ದು, ಪತ್ನಿಯ ಮೇಲೆಯೂ ಹಲ್ಲೆ ಮಾಡಿ ಕಾರಿನ ಗಾಜುಗಳನ್ನು ಹಾನಿಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಅಪರಾಧ ಸಂಖ್ಯೆ 72/2026ರಡಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಪ್ರಕರಣಗಳು ಪರಸ್ಪರ ದೂರುಗಳ ಆಧಾರದ ಮೇಲೆ ಕೇಸ್ ಮತ್ತು ಕೌಂಟರ್ ಕೇಸ್ ಆಗಿ ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಆರೋಪಿಯಾಗಿರುವ ಸುಪ್ರೀತ್ ಕುಮಾರ್ (40), ಕೊರಂಗ್ರಪಾಡಿ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗಿದೆ.
ಉಡುಪಿ ನಗರ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.













