ಎಂಆರ್‌ಪಿಎಲ್ ವಿಸ್ತರಣೆಯಲ್ಲಿ ಕೆಐಎಡಿಬಿ ವಂಚನೆ ಉಸ್ತುವಾರಿ ಸಚಿವರಿಗೆ ಮುತ್ತಿಗೆ

Spread the love

ಎಂಆರ್‌ಪಿಎಲ್ ವಿಸ್ತರಣೆಯಲ್ಲಿ ಕೆಐಎಡಿಬಿ ವಂಚನೆ ಉಸ್ತುವಾರಿ ಸಚಿವರಿಗೆ ಮುತ್ತಿಗೆ

ಸುರತ್ಕಲ್ : ಎಂಆರ್‌ಪಿಎಲ್ ಯೋಜನಾ ವಿಸ್ಥರಣೆಗೆ ಸಂಬಂಧಿಸಿ ಕುತ್ತೆತ್ತೂರು, ಪೆರ್ಮುದೆ, ಮತ್ತು ಇತರ ಗ್ರಾಮಗಳ ಕೃಷಿ ಭೂಮಿಯನ್ನು ಸ್ವಾಧೀನತೆ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಕೆಐಎಡಿಬಿ ಅಧಿಕಾರಿಗಳ ಅಕ್ರಮವನ್ನು ಪ್ರತಿಭಟಿಸಿ ವಿಶೇಷ ಭೂಸ್ವಾಧೀನಾಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಂತೃಸ್ತ ಗ್ರಾಮಸ್ತರು ಉಸ್ತುವಾರಿ ಸಚಿವ ದ.ಕ ಜಿಲ್ಲಾ ಯು.ಟಿ.ಖಾದರ್‌ರವರಿಗೆ ಮುತ್ತಿಗೆ ಹಾಕಿ ಆಗ್ರಹಿಸಿದರು.

ದ.ಕ. ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರು ಸ್ವಾಧೀನತೆಯ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಅಕ್ರಮ ಕಂಡು ಬಂದಿದ್ದು, ತನಿಖೆ ನಡೆಸುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದಾರೆ. ಅಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪೂರಕ ದಾಖಲೆಗಳನ್ನು ಸಲ್ಲಿಸಿದ್ದರು ಯಾವುದೇ ತನಿಖೆ ನಡೆದಿರುವುದಿಲ್ಲ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಅವರು ಕಾನೂನು ಪ್ರಕಾರ ತನಿಖೆ ನಡೆಸಿ ತಕ್ಷಣ ವರದಿ ಸಲ್ಲಿಸುವಂತೆ ಮೌಖಿಕ ಆದೇಶ ನೀಡಿದ್ದರು. ಆದರೆ ಈ ಬಗ್ಗೆ ತನಿಖೆ ನಡೆಸುವಲ್ಲಿ ಜಿಲ್ಲಾಡಳಿತವು ನಿರಾಸಕ್ತಿಯನ್ನು ತೋರಿಸುತ್ತಿದ್ದು ಭ್ರಷ್ಟ ಕೆಐಎಡಿಬಿ ಅಧಿಕಾರಿಗಳ ಪರವಾಗಿ ನಿಲುವು ತಳೆದಂತೆ ಕಂಡು ಬರುತ್ತಿದೆ. ಈ ರೀತಿಯ ಕಾನೂನು ಬದ್ಧ ಹೋರಾಟಕ್ಕೆ ಮಾನ್ಯತೆ ಸಿಗದೇ ಇದ್ದರೆ ನಾವು ಯಾವ ರೀತಿ ಪ್ರತಿಭಟನೆಯನ್ನು ಮಾಡಬೇಕು ಎಂದು ನೀಡಲಾದ ಮನವಿಯಲ್ಲಿ ಪ್ರಶ್ನಿಸಲಾಗಿದೆ.

ಪೆರ್ಮುದೆ, ಕುತ್ತೆತ್ತೂರು, ಮತ್ತಿತರ ಗ್ರಾಮಗಳ ಭೂಮಿಯು ಮೂರು ಬೆಳೆ ಬೆಳೆಯುವಷ್ಟು ಫಲವತ್ತಾಗಿದ್ದರೂ ಅದನ್ನು ಒಣ ಭೂಮಿ ಎಂದು ಎಂಆರ್‌ಪಿಎಲ್ ಸಲ್ಲಿಸಿದ ಸುಳ್ಳು ಅರ್ಜಿಯನ್ನು ಒಪ್ಪಿಕೊಂಡು ರೈತರನ್ನು ವಂಚಿಸಲಾಗಿದೆ. ಇದು ಕೃಷಿಯೋಗ್ಯ ಭೂಮಿ ಎಂಬುದಕ್ಕೆ ಇಲ್ಲಿ ನಡೆಯುತ್ತಿದ್ದ ಕೃಷಿಯೇ ಸಾಕ್ಷಿಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ.

ರೈತರಿಗೆ ವಂಚಿಸಿ ಅವರ ಕೊರಳಿಗೆ ಉರುಳು ಹಾಕಲು ಸಿದ್ದರಾದವರ ಪರವಾಗಿ ವರ್ತಿಸುವ ಜನಪ್ರತಿನಿಧಿಗಳು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಲಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ಉಸ್ತುವಾರಿ ಸಚಿವರಿಗೆ ನೀಡಿದ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಮಧುಕರ ಅಮೀನ್, ವಿಲಿಯಂ ಡಿಸೋಜಾ, ಹೇಮಲತಾ ಎಸ್ ಭಟ್ ಸಹಿ ಮಾಡಿದ ಮನವಿಯಲ್ಲಿ ತಿಳಿಸಲಾಗಿದೆ.


Spread the love