ಎಂಡಿಎಂಎ ಮಾದಕದ್ರವ್ಯ ಜಾಲ ಪತ್ತೆ; ಮೂವರ ಸೆರೆ

Spread the love

ಎಂಡಿಎಂಎ ಮಾದಕದ್ರವ್ಯ ಜಾಲ ಪತ್ತೆ; ಮೂವರ ಸೆರೆ

ಮಂಗಳೂರು : ಮನುಷ್ಯನ ಜೀವಕ್ಕೆ ಹಾನಿಕಾರಕ ಮಾದಕದ್ರವ್ಯ (ಎಂಡಿಎಂಎ- ಮಿಥೈಲೆನೆಡಿಯಾಕ್ಷಿ ಮೆಥಾಂಫೆಟಮೈನ್)ವನ್ನು ನಗರದ ಬೀಚ್‌ಗಳಲ್ಲಿ ಮಾರಾಟ ಮಾಡುವ ತಂಡವನ್ನು ಮಂಗಳೂರು ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿ, ಲಕ್ಷಾಂತರ ಮೌಲ್ಯದ ಸೊತ್ತು ಸಹಿತ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಳ್ಳಾಲ ಒಳಪೇಟೆ ನಿವಾಸಿ ಅಬೂಬಕರ್ ಮಿಸ್ಬಾ (24), ಸೋಮೇಶ್ವರ ಪೆರ್ಮನ್ನೂರು ನಿವಾಸಿ ಶಬ್ಬೀರ್ ಅಹಮ್ಮದ್ ಯಾನೆ ಶಬ್ಬೀರ್ (27), ಉಳ್ಳಾಲ ಅಲೇಕಳ ನಿವಾಸಿ ಶಿಹಾಬ್ ಅಬ್ದುಲ್ ರಝಾಕ್ (27) ಬಂಧಿತ ಆರೋಪಿಗಳು.

ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರು ವಿಶೇಷ ಅಪರಾಧ ಪತ್ತೆದಳ ತಂಡವು ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು.

ಮಂಗಳೂರು ಮೂಲದ ಮೂವರು ಆರೋಪಿಗಳು ಮುಂಬೈಗೆ ತೆರಳಿ ಅಲ್ಲಿಂದ ‘ಎಂಡಿಎಂಎ’ ಮಾದಕದ್ರವ್ಯ ಖರೀದಿ ಮಾಡುತ್ತಿದ್ದರು. ಮಾದಕದ್ರವ್ಯವನ್ನು ಮಂಗಳೂರಿಗೆ ಸಾಗಾಟ ಮಾಡಿಕೊಂಡು ವಿದ್ಯಾರ್ಥಿಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಅಲ್ಲದೆ, ಸಾರ್ವಜನಿಕರಿಗೂ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಮಂಗಳೂರು ನಗರ ಮತ್ತು ಉಳ್ಳಾಲ ಪಣಂಬೂರು ಮತ್ತು ಇತರ ಬೀಚ್ ಪರಿಸರದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಮಾದಕದ್ರವ್ಯವನ್ನು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಶುಕ್ರವಾರ ಬೈಕಂಪಾಡಿಯಿಂದ ಕೂರಿಕಟ್ಟ ಕಡೆಗೆ ಹೋಗುವ ಕಾಂಕ್ರಿಟ್ ರಸ್ತೆಯಲ್ಲಿ ಸ್ಕೂಟರ್ ಸಹಿತ ನಿಂತಿದ್ದರು. ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಪೊಲೀಸರು ಸುತ್ತುವರಿದರು. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದರು. ಕೊನೆಯ ಗಳಿಗೆಯಲ್ಲಿ ಪೊಲೀಸರ ವಶಕ್ಕೆ ಸಿಕ್ಕರು. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಬಂಧಿತ ಆರೋಪಿಗಳಿಂದ 80 ಸಾವಿರ ರೂ. ಮೌಲ್ಯದ 16.55 ಗ್ರಾಂ ತೂಕದ ‘ಎಂಡಿಎಂಎ’ ಮಾದಕ ದ್ರವ್ಯ, 25 ಸಾವಿರ ಮೌಲ್ಯದ ಜ್ಯುಪಿಟರ್ ಸ್ಕೂಟರ್, ಎರಡು ಸಾವಿರ ರೂ. ಮೌಲ್ಯದ ನಾಲ್ಕು ಮೊಬೈಲ್‌ಗಳು, 3,200 ರೂ. ನಗದು ವಶಕ್ಕೆ ಪಡೆಸಿದ್ದಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,10,200 ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟಿಲ್ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀನಿವಾಸ ಆರ್. ಗೌಡ ನೇತೃತ್ವದಲ್ಲಿ ಪಣಂಬೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಅಜ್ಮತ್ ಅಲಿ, ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾದ ಪತ್ತೆ ದಳದ ಅಧಿಕಾರಿ ಎಎಸ್ಸೈ ಮುಹಮ್ಮದ್, ಸಿಬ್ಬಂದಿ ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಹಾಗೂ ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕ ಕಬ್ಬಾಳ್‌ರಾಜ್, ಎಎಸ್ಸೈಗಳಾದ ಮೋಹನ್ ಶೆಟ್ಟಿಯಾರ್, ಹರೀಶ್ ಮತ್ತು ಸಿಬ್ಬಂದಿ ಚಂದ್ರಶೇಖರ, ಜಬ್ಬಾರ್, ರಾಜಾ, ಮಣಿ, ಯೋಗೀಶ್, ನೂತನ್ ಹಾಗೂ ವಿಶ್ವ ಪೂಜಾರಿ ಹಾಗೂ ಪಣಂಬೂರು ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.


Spread the love