ಎನ್.ಆರ್.ಸಿ ವಿರೋಧಿ ಕಾರ್ಯಕ್ರಮ ಉದ್ಘಾಟನೆಗೆ ಹಾಜಬ್ಬರಿಗೆ ಆಹ್ವಾನ ಸರಿಯಲ್ಲ – ಅನ್ಸಾರ್ ಅಹ್ಮದ್

Spread the love

ಎನ್.ಆರ್.ಸಿ ವಿರೋಧಿ ಕಾರ್ಯಕ್ರಮ ಉದ್ಘಾಟನೆಗೆ ಹಾಜಬ್ಬರಿಗೆ ಆಹ್ವಾನ ಸರಿಯಲ್ಲ – ಅನ್ಸಾರ್ ಅಹ್ಮದ್

ಉಡುಪಿ: ಕರ್ನಾಟಕ ಮುಸ್ಲಿಂ ಜಮಾತ್ ಇದರ ವತಿಯಿಂದ ಫೆಬ್ರವರಿ 20 ರಂದು ಉಡುಪಿಯ ಲಿಗಾಡೋ ಹೋಟೆಲ್ ನಲ್ಲಿ ಆಯೋಜಿಸಲಾಗಿರುವ ದ್ವೇಷ ಬಿಟ್ಟು ದೇಶ ಕಟ್ಟು ಎನ್ನುವ ಧ್ಯೇಯ ವಾಕ್ಯದಡಿ ಪ್ರಜಾ ಭಾರತ ಎನ್.ಆರ್.ಸಿ ವಿರೋಧಿಸಿ ಕರೆ ನೀಡುವ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರಿಂದ ಉದ್ಘಾಟಿಸುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎನ್.ಆರ್.ಸಿ ಯಂತಹ ವಿವಾದಾತ್ಮಕ ಪೌರತ್ವ ಸಂಬಂಧಿತ ಕಾಯ್ದೆಯನ್ನು ವಿರೋಧಿಸುವುದು ಕೂಡ ಮುಖ್ಯ ಉದ್ದೇಶವಾಗಿರುತ್ತದೆ.

ಕಾರ್ಯಕ್ರಮ ದ್ವೇಷದಿಂದ ದೇಶವನ್ನು ಒಡೆಯುತ್ತಿರುವ ಒಂದು ವರ್ಗದ ವಿರುದ್ಧ ವಾಗಿದ್ದು ಅಂತಹ ವರ್ಗವನ್ನು ವಿರೋಧಿಸುವುದು ಸಂಘಟಕರ ಹಾಗೂ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ.

ಕಾರ್ಯಕ್ರಮವನ್ನು ಉದ್ಘಾಟಿಸಲು ಈ ಕಾರ್ಯಕ್ರಮದ ವಿಷಯಕ್ಕೆ ಎಳ್ಳಷ್ಟು ಸಂಬಂಧವಿಲ್ಲದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ರವರನ್ನು ಆಹ್ವಾನಿಸಿ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರನ್ನು ಮುದ್ರಿಸಿರುವುದು ಸರಿಯಲ್ಲ.

ಹರೇಕಳ ಹಾಜಬ್ಬ ರವರು ಇಡೀ ರಾಷ್ಟ್ರವೇ ಗೌರವಿಸುವಂತಹ ಒಬ್ಬ ವ್ಯಕ್ತಿಯಾಗಿದ್ದು ಅವರನ್ನು ಪ್ರತಿಯೊಂದು ವರ್ಗವೂ ಜಾತಿ ಮತ ಭೇದ ಮರೆತು ಅವರ ಕೆಲಸವನ್ನು ಕೊಂಡಾಡುತ್ತಿದೆ.

ಇಂದು ದೇಶದ ಪ್ರತಿಯೊಬ್ಬರ ಮನೆ ಮಾತಾಗಿರುವ ಹರೇಕಳ ಹಾಜಬ್ಬ ರವರು ಇಂತಹ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಒಂದು ವರ್ಗ ಅವರನ್ನು ತಿರಸ್ಕರಿಸುವ ಸಾಧ್ಯತೆ ಇದೆ.

ದ್ವೇಷ ಬಿಟ್ಟು ದೇಶ ಕಟ್ಟು ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವ ಆಯೋಜಕರು ಮುಂದೊಂದು ದಿನ ಹರೇಕಳ ಹಾಜಬ್ಬ ರವರನ್ನು ದ್ವೇಷಿಸುವ ಒಂದು ವರ್ಗವನ್ನು ಹುಟ್ಟು ಹಾಕಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ

ಇಂತಹ ಮಹಾನ್ ವ್ಯಕ್ತಿಯನ್ನು ಸಂಘಟಕರು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಖಂಡನೀಯ. ಸಂಘಟಕರು ಹರೇಕಳ ಹಾಜಬ್ಬ ರವರಿಂದ ಕಾರ್ಯಕ್ರಮವನ್ನು ಉದ್ಘಾಟಿಸುವ ವಿಚಾರವನ್ನು ಕೂಡಲೇ ಕೈಬಿಡಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಆಗ್ರಹಿಸಿದ್ದಾರೆ.


Spread the love