ಎಲ್ಲಾ ಮೀನುಗಾರಿಕಾ ದೋಣಿಗಳ ಸಕ್ರಮಕ್ಕೆ ಕ್ರಮ- ಪ್ರಮೋದ್ ಮಧ್ವರಾಜ್

Spread the love

ಎಲ್ಲಾ ಮೀನುಗಾರಿಕಾ ದೋಣಿಗಳ ಸಕ್ರಮಕ್ಕೆ ಕ್ರಮ- ಪ್ರಮೋದ್ ಮಧ್ವರಾಜ್

ಉಡುಪಿ: ಜಿಲ್ಲೆಯಲ್ಲಿನ ಎಲ್ಲಾ ಮೀನುಗಾರಿಕಾ ದೋಣಿಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯದ ಮೀನುಗಾರಿಕಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಶುಕ್ರವಾರ, ಮಲ್ಪೆ ಬಂದರಿನಲ್ಲಿ ನೂತನ ಮೀನುಗಾರಿಕ ಉಪ ನಿರ್ದೇಶಕರ ಕಚೇರಿ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಗುಜರಾತ್ ಬಿಟ್ಟರೆ ಅತೀ ಹೆಚ್ಚಿನ ಮೀನುಗಾರಿಕಾ ದೋಣಿಗಳಿರುವುದು ಮಲ್ಪೆಯಲ್ಲಿ, ಇಲ್ಲಿನ ಎಲ್ಲಾ ಮೀನುಗಾರಿಕಾ ದೋಣಿಗಳಿಗೆ ಸಾಧ್ಯತ ಪತ್ರಗಳನ್ನು ವಿತರಿಸಿ, ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಮೀನುಗಾರರಿಗೆ ಸರಿಯಾದ ಡೀಸೆಲ್ ಸಬ್ಸಿಡಿ ದೊರೆಯಲಿದೆ ಹಾಗೂ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ವತಿಯಿಂದ ದಾಖಲೆಗಳ ಪರಿಶೀಲನೆ ವೇಳೆ ಎದುರಿಸಬಹುದಾದ ಕಾನೂನು ತೊಡಕುಗಳು ನಿವಾರಣೆಯಾಗಲಿದೆ, ಮೀನುಗಾರರಿಗೆ ಜನವರಿಯಿಂದ ಮಾರ್ಚ್ ವರೆಗೆ ಬಾಕಿ ಇರುವ ಡೀಸೆಲ್ ಸಬ್ಸಿಡಿಯನ್ನು ಏಪ್ರಿಲ್ ಅಂತ್ಯದೊಳಗೆ ಅವರವರ ಖಾತೆಗಳಿಗೆ ಜಮೆ ಮಾಡಲಾಗುವುದು, ಏಪ್ರಿಲ್ ಮಾಹೆಯಿಂದ ಬಾಕಿ ಉಳಿಯುವ ಸಬ್ಸಿಡಿಯನ್ನು ಕಾಲಕಾಲಕ್ಕ ಸರಿಯಾಗಿ ನೀಡಲಾಗುವುದು, ಡೀಸೆಲ್ ಸಬ್ಸಿಡಿಗಾಗಿ ಈ ವರ್ಷ ಬಜೆಟ್ ನಲ್ಲಿ 157 ಕೋಟಿ ಗಳನ್ನು ಮೀಸಲಿಡಲಾಗಿದೆ, ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು 2 ಲಕ್ಷದಿಂದ 5 ಲಕ್ಷ ರೂ ಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ 20 ವರ್ಷಗಳ ಬೇಡಿಕೆಯಾದ ಉಪ ನಿರ್ದೇಶಕರ ಕಚೇರಿಯನ್ನು ಇಂದು ಉದ್ಘಾಟಿಸಲಾಗಿದೆ, ಇದರಿಂದ ಇಲ್ಲಿನ ಮೀನುಗಾರರು , ಮೀನುಗಾರಿಕೆಗೆ ಸಂಬಂದಪಟ್ಟ ಕೆಲಸಗಳಿಗೆ ಮಂಗಳೂರಿಗೆ ತೆರಳಬೇಕಾದುದು ತಪ್ಪಿದೆ ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಸಂಕಷ್ಠ ಪರಿಹಾರ ನಿಧಿಯ ಚೆಕ್ ಮತ್ತು ಸಾಧ್ಯತಾ ಪತ್ರಗಳನ್ನು ಸಚಿವರು ವಿತರಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ತಾ.ಪಂ.ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ.ಕಿದಿಯೂರು, ಸತೀಶ್ ಅಮಿನ್ ಪಡುಕೆರೆ, ಮಂಗಳೂರು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಹೇಶ್ ಕುಮಾರ್, ಉಡುಪಿ ಮೀನುಗಾರಿಕ ಇಲಾಖೆಯ ಜಂಟಿ ನಿರ್ದೇಶಕ ಗಣಪತಿ ಭಟ್ ಉಪಸ್ಥಿತರಿದ್ದರು.
ಉಡುಪಿ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಿ.ಪಾಶ್ರ್ವನಾಥ್ ಸ್ವಾಗತಿಸಿ, ವಂದಿಸಿದರು.


Spread the love