ಎಲ್.ಕೆ.ಜಿ, ಯು.ಕೆ.ಜಿ ರದ್ದು, ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ-ಕೋಟ ಶ್ರೀನಿವಾಸ ಪೂಜಾರಿ ಆರೋಪ

Spread the love

ಎಲ್.ಕೆ.ಜಿ, ಯು.ಕೆ.ಜಿ ರದ್ದು, ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ-ಕೋಟ ಶ್ರೀನಿವಾಸ ಪೂಜಾರಿ ಆರೋಪ

ಮಂಗಳೂರು : ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಸ್ಥಾಪನೆ ಮಾಡಿ, ಮತ್ತು ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಆಂಗ್ಲ ಭಾಷೆಯನ್ನು ತೆಗೆದುಕೊಳ್ಳಿ ಎಂದು ಆದೇಶಿಸಿರುವ ಸರ್ಕಾರ, ಮತ್ತೊಂದು ಕಡೆ ಖಾಸಗಿ ಶಾಲೆಗಳೊಡನೆ ಶಾಮೀಲಾಗಿ ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿಯನ್ನು ಮುಚ್ಚ ಹೊರಟು, ಒಟ್ಟಾರೆ ಸರ್ಕಾರಿ ಶಾಲೆಯನ್ನು ಮುಚ್ಚುವುದರ ಮೂಲಕ ಬಡವರ ಮಕ್ಕಳು ಅದರಲ್ಲೂ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾಂತರಂತ ಕಡು ಬಡವರ ಮಕ್ಕಳು ಮಾತ್ರ ಇಂಗ್ಲೀಷ್ ಪರಿಜ್ಞಾನ ಹೊಂದದಿರಲು ವ್ಯವಸ್ಥಿತವಾದ ಹುನ್ನಾರ ಸರ್ಕಾರ ನಡೆಸುತ್ತಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿಯವರು ರಾಜ್ಯ ಸರ್ಕಾರದ ಶಿಕ್ಷಣ ನೀತಿಯನ್ನು ಖಂಡಿಸಿ ಆಪಾದಿಸಿದ್ದಾರೆ.

ಶಿಕ್ಷಣ ಸಚಿವ ತನ್ವೀರ್ ಸೇಠ್ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಆಂಗ್ಲ ಭಾಷೆಯ ಪರಿಜ್ಞಾನ ನೀಡುತ್ತೇವೆ, ಖಾಸಗಿ ಶಾಲೆಗೆ ಸಮಾನ ಮಟ್ಟದ ಶಿಕ್ಷಣ ನೀತಿ ನೀಡಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುತ್ತೇವೆ ಎಂದು ಘೋಷಿಸುವುದು ಬಿಟ್ಟರೆ, ಅವರ ನಿಲುವು ಖಾಸಗಿ ಶಾಲೆಗೆ ಪ್ರೋತ್ಸಾಹ ಕೊಡುವಂತಾಗಿದೆ.

ದಕ್ಷಿಣಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನ ಕೆರಂಕಿ ಸರ್ಕಾರಿ ಪ್ರಾಥಮಿಕ ಶಾಲೆಯು ಸೇರಿದಂತೆ 23 ಕ್ಕೂ ಹೆಚ್ಚು ಶಾಲೆಗಳಿಗೆ ನೀಡಿರುವ ಎಲ್.ಕೆ.ಜಿ, ಯು.ಕೆ.ಜಿ ಅನುಮತಿಯನ್ನು ರದ್ದುಗೊಳಿಸಿ, ಮಕ್ಕಳು ಬೀದಿಪಾಲಾಗಿದ್ದಾರೆ. ಬಡವರ ಮಕ್ಕಳು ಇಂಗ್ಲೀಷ್ ಕಲಿಯಬಾರದೆಂಬ ಈ ನೀತಿ ಸಿದ್ದರಾಮಯ್ಯನವರ ಸರ್ಕಾರದ ಸಾಮಾಜಿಕ ನ್ಯಾಯಕ್ಕೆ ಹಿಡಿದ ಕೈಗನ್ನಡಿಯೆಂದು ವ್ಯಂಗ್ಯವಾಡಿದ ಕೋಟಾರವರು ಮಂಗಳೂರು ಜಿಲ್ಲಾಡಳಿತ ಸಂಪೂರ್ಣ ಅಸಹಾಯಕವಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮಧ್ಯ ಪ್ರವೇಶಿಸುತ್ತಿದ್ದು, ಶಿಕ್ಷಣ ಮಂತ್ರಿ ತನ್ವೀರ್ ಸೇಠ್‍ರ ಸಂಪರ್ಕ ಮಾಡ ಹೊರಟರೆ ವಿದೇಶದಲ್ಲಿದ್ದಾರೆಂದು ಸುದ್ದಿ ತಿಳಿಯುತ್ತದೆ.

ಮಂಗಳೂರು ಡಿ.ಡಿ.ಪಿ.ಐಯವರಂತು ದೂರವಾಣಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದು, ಖಾಸಗಿ ಶಾಲೆಯವರ ಜೊತೆ ಕೈ ಜೋಡಿಸಿದ್ದಾರೆಂಬ ಅಪನಂಬಿಕೆ ಬರುತ್ತದೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಕೆರಂಕಿದುರ್ಗ ಫ್ರೆಂಡ್ಸ್ ಮೂಲಕ ಮಾದರಿ ಎನಿಸಿ 600 ಕ್ಕೂ ಮಿಕ್ಕಿ ಮಕ್ಕಳನ್ನು ಹೊಂದಿರುವ ರಾಜ್ಯದ ಏಕೈಕ ಮಾದರಿ ಸರ್ಕಾರಿ ಶಾಲೆ ಇಂದು ಸರ್ಕಾರದ ಕೆಂಗಣ್ಣಿನಿಂದ ಮುಚ್ಚುವಂತಾಗಿದೆ.

ಬಡವರ ಮಕ್ಕಳಿಗೆ ಇಂಗ್ಲೀಷ್ ಕಲಿಯಬೇಡಿ ಎಂದು ಅಪ್ಪಣೆ ಹೊರಡಿಸುವ ರಾಜ್ಯದ ದೀಮಂತ ನಾಯಕರಾದ ಅವರ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಇಂಗ್ಲೀಷ್ ಮಾದ್ಯಮಕ್ಕೆ ಕಳುಹಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಸರ್ಕಾರಿ ಶಾಲೆಯಿಂದ ಕಡುಬಡವರ ಮಕ್ಕಳನ್ನು ದೂರಮಾಡುವ ಈ ಸರ್ಕಾರದ ನೀತಿ ಅತ್ಯಂತ ಖಂಡನೀಯ ಎಂದಿರುವ ಪೂಜಾರಿ, ಶಿಕ್ಷಣ ಮಂತ್ರಿಗಳು ತಕ್ಷಣ ಮಧ್ಯ ಪ್ರವೇಶಿಸಿ ತಡೆಹಿಡಿದು ಎಲ್.ಕೆ.ಜಿ, ಯು.ಕೆ.ಜಿ ಗೆ ಅನುಮತಿ ನೀಡದಿದ್ದರೆ ಮುಂದಿನ ವಿಧಾನ ಮಂಡಲದಲ್ಲಿ ಭಾರತೀಯ ಜನತಾಪಕ್ಷ ಈ ವಿಷಯವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರು ಜಿಲ್ಲೆಯ ಉಸ್ತುವಾರಿ ಮಂತ್ರಿ ಸರ್ಕಾರವೇ ಶಾಲೆಯನ್ನು ಮುಚ್ಚಲು ಯತ್ನಿಸುತ್ತಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿ ಕೋಟಾ ಆಗ್ರಹಿಸಿದ್ದಾರೆ.


Spread the love