ಕರಾವಳಿಯಲ್ಲಿ ಸಂಘಪರಿವಾರ ನಡೆಸಿದ ಹತ್ಯೆಗಳ ತನಿಖೆ ಎನ್‍ಐಎಗೆ ವಹಿಸಿ ; ಪಿಎಫ್ಐ

Spread the love

ಕರಾವಳಿಯಲ್ಲಿ ಸಂಘಪರಿವಾರ ನಡೆಸಿದ ಹತ್ಯೆಗಳ ತನಿಖೆ ಎನ್‍ಐಎಗೆ ವಹಿಸಿ ; ಪಿಎಫ್ಐ

ಮಂಗಳೂರು: ಕರಾವಳಿಯಲ್ಲಿ ಗಲಭೆ, ಹಿಂಸಾಚಾರ, ಹತ್ಯೆ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಈ ಎಲ್ಲಾ ಘಟನೆಗಳ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಗೆ ವಹಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲರವರು ಆಗ್ರಹಿಸಿದ್ದಾರೆ.

ಕಳೆದ ಒಂದು ದಶಕದಿಂದ ಕರಾವಳಿಯಲ್ಲಿ 20 ಮುಸ್ಲಿಮರು, 13 ಹಿಂದೂಗಳು ಸೇರಿದಂತೆ ಒಟ್ಟು 33 ಹತ್ಯೆ ಪ್ರಕರಣಗಳು ನಡೆದಿವೆ. ಇದರಲ್ಲಿ ಸಂಘಪರಿವಾರದ ವಿರುದ್ಧ ಮಾತನಾಡುವ ಮತ್ತು ಅದರ ಅಜೆಂಡಾವನ್ನು ಬಹಿರಂಗವಾಗಿ ತೆರೆದಿಡುತ್ತಿದ್ದವರನ್ನು ಮುಖ್ಯವಾಗಿ ಗುರಿಪಡಿಸಲಾಗಿದೆ. ಮೌಲಾನಾ ಅಬ್ದುಲ್ ಗಫೂರ್ ಮದನಿ, ಮಾನವ ಹಕ್ಕು ಹೋರಾಟಗಾರ ನ್ಯಾಯವಾದಿ ನೌಶಾದ್ ಖಾಸಿಂಜಿ, ಆರ್‍ಟಿಐ ಹೋರಾಟಗಾರ ವಿನಾಯಕ ಬಾಳಿಗಾ, ಜನಪ್ರತಿನಿಧಿಗಳಾಗಿದ್ದ ಎಂ.ಡಿ.ಜಬ್ಬಾರ್, ಅಬ್ದುಲ್ ರಹಿಮಾನ್ ಸಂಗಬೆಟ್ಟು ಹಾಗೂ ಜಲೀಲ್ ಕರೋಪಾಡಿ, ಅರ್ಚಕ ಕಷ್ಣಯ್ಯ ಪಾಟಾಳಿ, ಡಿವೈಎಫ್‍ಐ ಕಾರ್ಯಕರ್ತರಾದ ಭಾಸ್ಕರ್ ಕುಂಬ್ಳೆ ಮತ್ತು ಶ್ರೀನಿವಾಸ ಬಜಾಲ್ ಮೊದಲಾದವರು ಸಂಘಪರಿವಾರದಿಂದ ಹತ್ಯೆಗೀಡಾದವರಲ್ಲಿ ಪ್ರಮುಖರಾಗಿದ್ದಾರೆ. ಇದರಲ್ಲಿ ಹಿಂದುತ್ವ ಭಯೋತ್ಪಾದಕ ಸಂಘಟನೆಯಾದ ಅಭಿನವ್ ಭಾರತ್, ಸನಾತನ ಸಂಸ್ಥೆಗೆ ಸಂಬಂಧ ಹೊಂದಿದೆಯೇ ಎಂದು ಬಲವಾಗಿ ಸಂಶಯಿಸಬೇಕಾಗುತ್ತದೆ. ಯಾಕೆಂದರೆ ವಿಚಾರವಾದಿಗಳಾದ ದಾಭೋಲ್ಕರ್, ಪನ್ಸಾರೆ, ಡಾ.ಎಂ.ಎಂ.ಕಲ್ಬುರ್ಗಿಯವರ ಹತ್ಯೆಯಲ್ಲಿ ಈ ಸಂಘಟನೆಗಳ ನಂಟನ್ನು ತನಿಖಾ ದಳವು ಬಲವಾಗಿ ಶಂಕಿಸಿತ್ತು. ಪನ್ಸಾರೆ ಹತ್ಯೆ ಆರೋಪಿಗಳೂ ಕೂಡ ಸನಾತನ ಸಂಸ್ಥೆಯ ಕಾರ್ಯಕರ್ತರು ಎಂಬುದು ಈಗಾಗಲೇ ತನಿಖೆಯಿಂದ ಬಹಿರಂಗಪಟ್ಟಿದೆ. ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪುತ್ತೂರಿನ ಜಯಪ್ರಕಾಶ್ ಎಂಬಾತನ ಮಾಹಿತಿಗೆ ಎನ್‍ಐಎ ನಗದು ಬಹುಮಾನವನ್ನೂ ಘೋಷಿಸಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ನಾಯಕರು ಮತ್ತು ಸಂಘಪರಿವಾರದ ವಿರುದ್ಧ ಧ್ವನಿ ಎತ್ತುವವರನ್ನು ಗುರಿಯಾಗಿಸಿ ಕರಾವಳಿಯಲ್ಲಿ ಹತ್ಯೆ ನಡೆಯುತ್ತಿದ್ದು, ಈ ಹತ್ಯಾ ಪ್ರಕರಣಗಳ ಹಿಂದೆ ದೇಶದ ವಿವಿಧಡೆ ಬಾಂಬ್ ಸ್ಫೋಟದಂತಹ ಭಯೋತ್ಪಾದನಾ ಕತ್ಯಗಳಲ್ಲಿ ಭಾಗಿಯಾಗಿರುವ ಆರೆಸ್ಸೆಸ್, ಅಭಿನವ್ ಭಾರತ್ ಹಾಗೂ ಸನಾತನ ಸಂಸ್ಥೆಯ ಕೈವಾಡವಿರುವ ಬಗ್ಗೆ ಬಲವಾದ ಶಂಕೆ ಮೂಡುತ್ತಿದೆ.

ಕಳೆದೆರಡು ದಶಕಗಳಲ್ಲಿ ದ.ಕ.ಜಿಲ್ಲೆ ಅದರಲ್ಲೂ ಬೆಳ್ತಂಗಡಿ ತಾಲೂಕಿನಲ್ಲಿ ಮಹಿಳೆಯರ ಮೇಲಿನ ಹಿಂಸಾ ಪ್ರಕರಣಗಳು ನಾಗರಿಕ ಸಮಾಜ ಬೆಚ್ಚಿ ಬೀಳುವಷ್ಟು ಮಿತಿಮೀರಿವೆ. 2016ರಲ್ಲಿ ವಿ.ಎಸ್.ಉಗ್ರಪ್ಪನವರ ನೇತತ್ವದಲ್ಲಿ ರಚಿಸಲಾದ ಮಕ್ಕಳ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿಯು ಕೇವಲ ಬೆಳ್ತಂಗಡಿಯಲ್ಲಿಯೇ 500 ಅಸಹಜ ಸಾವು ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ ಬಹುಪಾಲು ಮಹಿಳೆಯರೇ ಆಗಿದ್ದಾರೆ ಎಂದು ಕಳೆದ ವರ್ಷದ ಪ್ರಾರಂಭದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾಹಿತಿ ನೀಡಿತ್ತು. ಅಲ್ಲದೇ, ಈ ಪ್ರಕರಣಗಳ ತನಿಖೆಗಾಗಿ ವಿಶೇಷ ತಂಡವನ್ನು ಕಳುಹಿಸಬೇಕೆಂದು ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿತ್ತು. ಜನರನ್ನು ಆತಂಕಕ್ಕೆ ದೂಡುತ್ತಿರುವ ಈ ಅಸಹಜ ಸಾವಿನ ಪ್ರಕರಣಗಳನ್ನು ಎನ್‍ಐಎ ತನಿಖೆಗೊಳಪಡಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ.

70ರ ದಶಕದಲ್ಲಿ ಜನಸಂಘವು ಕಾಂಗ್ರೆಸ್ ನೇತಾರ ಕೆ.ಎಂ.ಇಸ್ಮಾಯೀಲ್ ಕಲ್ಲಡ್ಕರನ್ನು ಸಂಚಿನಿಂದ ಕೊಲ್ಲುವ ಮೂಲಕ ಕರಾವಳಿಯಲ್ಲಿ ಹತ್ಯಾ ರಾಜಕೀಯಕ್ಕೆ ಮುನ್ನುಡಿ ಬರೆಯಿತು. ಕಳೆದ ಎರಡೂವರೆ ದಶಕಗಳಲ್ಲಿ ರಾಜಕೀಯ ಶಕ್ತಿಯನ್ನು ಪಡೆದುಕೊಳ್ಳಲು ಸಂಘಪರಿವಾರವು ದಕ್ಷಿಣ ಕನ್ನಡದ ಶೂದ್ರ ಸಮುದಾಯದ ಯುವಕರನ್ನು ಬಳಸಿಕೊಂಡು ಹಲವು ಕೋಮುಗಲಭೆಗಳನ್ನು ಸಷ್ಟಿಸಿ ಮುಸ್ಲಿಮ್ ಸಮುದಾಯದ ಜೀವ, ಸೊತ್ತು, ಮಾನ ಹಾನಿಗೆ ಕಾರಣವಾಗಿದೆ. ಆದ್ದರಿಂದ ಕರಾವಳಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ರಾಜಕೀಯವನ್ನು ಕೊನೆಗಾಣಿಸಲು ಈ ಮೇಲೆ ತಿಳಿಸಿದ ಎಲ್ಲಾ ಹತ್ಯೆ ಪ್ರಕರಣಗಳನ್ನೂ ಎನ್‍ಐಎ ತನಿಖೆಗೆ ವಹಿಸಬೇಕೆಂದು ಪಾಪ್ಯುಲರ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲರವರು ಒತ್ತಾಯಿಸಿದ್ದಾರೆ.


Spread the love