ಕರ್ನಾಟಕ ರಾಜ್ಯ ಮಕ್ಕಳ ಸುರಕ್ಷತಾ ನೀತಿ 2016

Spread the love

ಕರ್ನಾಟಕ ರಾಜ್ಯ ಮಕ್ಕಳ ಸುರಕ್ಷತಾ ನೀತಿ 2016
ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಮಕ್ಕಳ ಸುರಕ್ಷತೆಗಾಗಿ ಕರ್ನಾಟಕ ಸರಕಾರವು “ಕರ್ನಾಟಕ ಮಕ್ಕಳ ಸುರಕ್ಷತಾ ನೀತಿ 2016” ನ್ನು ಜಾರಿಗೆ ತಂದಿರುತ್ತದೆ. ರಾಜ್ಯದಲ್ಲಿನ ಪ್ರತಿ ಮಗುವು ಸುರಕ್ಷಿತ, ರಕ್ಷಣಾತ್ಮಕ ಮತ್ತು ಸಶಕ್ತ ಪರಿಸರದಲ್ಲಿ ಬೆಳೆಯುವುದರೊಂದಿಗೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಮಗುವು ತನ್ನ ಸಾಮಥ್ರ್ಯವನ್ನು ತಲುಪಲು ಇದು ಅವಕಾಶಗಳನ್ನು ಒದಗಿಸುತ್ತದೆ. ರಾಜ್ಯದಲ್ಲಿನ 18 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಎಲ್ಲಾ ಬಗೆಯ ದುರುಪಯೋಗ, ನಿರ್ಲಕ್ಷ್ಯ ಮತ್ತು ಶೋಷಣೆಯಿಂದ ರಕ್ಷಣೆ ಮತ್ತು ಸುರಕ್ಷತೆಯನ್ನು ನೀಡುತ್ತಿದೆ. ಮಕ್ಕಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕಕ್ಕೆ ಬರುವ ಎಲ್ಲಾ ಸರ್ಕಾರಿ ಇಲಾಖೆಗಳು, ಸಿಬ್ಬಂದಿ, ಸಂಸ್ಥೆಗಳು, ಶಾಸನಬದ್ದ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಈ ನೀತಿಯು ಶಿಕ್ಷಣ ಸಂಸ್ಥೆಗಳು ಮತ್ತು ಮಕ್ಕಳಿಗಾಗಿ ಇರುವ ಇತರ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.
ಶೈಕ್ಷಣಿಕ ಸಂಸ್ಥೆಯು ಯಾವುದೇ ಹೆಸರಿನಿಂದ ಕರೆಯಲ್ಪಡುವ ಅಂದರೆ, ಪೂರ್ವಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಸೆಕೆಂಡರಿ, ಹೈಯರ್ ಸೆಕೆಂಡರಿ ಶಾಲೆಗಳು, ಆಪರೆಂಟೀಸ್ ತರಬೇತಿ ಕೇಂದ್ರಗಳು, ಔದ್ಯೋಗಿಕ ಕೌಶಲ್ಯ ತರಬೇತಿ ಕೇಂದ್ರಗಳು ಮತ್ತು ಅದಕ್ಕೆ ಹೊಂದಿಕೆಯಾಗಿರುವ ಎಲ್ಲಾ ಪ್ರದೇಶ, ಅದು ಪ್ರತ್ಯೇಕವಾಗಿ ನಿರ್ವಹಿಸುತ್ತಿರುವ ಅಥವಾ ಇತರೆ ಚಟುವಟಿಕೆಗಳಡಿ 2.5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಒಳಗೊಂಡಿರುತ್ತದೆ.. ಶಿಕ್ಷಣವನ್ನು ನೀಡುತ್ತಿರುವ ಯಾವುದೇ ಸಂಸ್ಥೆ ಅಥವಾ ಪದವಿಗಿಂತ ಕೆಳ ಹಂತದಲ್ಲಿ ತರಬೇತಿಯನ್ನು ನೀಡುತ್ತಿರುವ ಟ್ಯುಟೋರಿಯಲ್‍ಗಳನ್ನು ಒಳಗೊಂಡಿರುವುದು ಸಹ ಶಿಕ್ಷಣ ಸಂಸ್ಥೆ ಎಂದೆನಿಸುತ್ತದೆ. ಯಾವುದೇ ರಾಜ್ಯ /ಕೇಂದ್ರ/ ಶೈಕ್ಷಣಿಕ ಮಂಡಳಿ ಅಥವಾ ಕೆಳಗೆ ತಿಳಿಸಿರುವ ಸೂಕ್ತ ಪ್ರಾಧಿಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಸಂಸ್ಥೆಗಳು ಇದರಡಿ ಸೇರಿರುತ್ತವೆ.

ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಯು ಮಕ್ಕಳ ರಕ್ಷಣಾ ನೀತಿಯನ್ನು ಸಿದ್ಧಪಡಿಸುವುದು. ಶೈಕ್ಷಣಿಕ ಸಂಸ್ಥೆಗಳ ಎಲ್ಲ ಭಾಗೀದಾರರೊಂದಿಗೆ ಪೋಷಕರು, ಮಕ್ಕಳು ಮತ್ತು ನೀತಿಯಡಿ ಒಳಗೊಳ್ಳುವ ಎಲ್ಲರಿಗೂ ನೀತಿಯನ್ನು ಅನುಸೂಚಿಸುವುದು. ಶಿಕ್ಷಣ ಸಂಸ್ಥೆಯ ನೌಕರರು ತಮ್ಮ ಶಿಕ್ಷಣ ಸಂಸ್ಥೆ ರೂಪಿಸಿರುವ ಮಕ್ಕಳ ರಕ್ಷಣಾ ನೀತಿಯನ್ನುಓದಿ ಅರ್ಥಮಾಡಿಕೊಂಡು ಮತ್ತು ನೀತಿಸಂಹಿತೆಯಲ್ಲಿ ತಿಳಿಸಿರುವಂತೆ ಅನುಸರಿಸಲು ಒಪ್ಪಿರುವುದಾಗಿ ಹಾಗೂ ಮಕ್ಕಳ ರಕ್ಷಣೆ ಸುರಕ್ಷತೆ, ಮತ್ತು ಯೋಗಕ್ಷೇಮದ ಬಗ್ಗೆ ತನ್ನ ಬದ್ಧತೆ ಮತ್ತು ಜವಾಬ್ದಾರಿಗಳ ಅರಿವಿರುವುದಾಗಿ, ಶಿಕ್ಷಣ ಸಂಸ್ಥೆಯ ಒಳಗೆ ಮತ್ತು ಹೊರಗೆ ವೃತ್ತಿಪರ ನೈತಿಕತೆಗೆ ಬದ್ಧನಾಗಿರುವುದಾಗಿ ಘೋಷಿಸಿ ಸಹಿ ಮಾಡುವುದು. ಇದರ ಪ್ರತಿಯನ್ನು ಕಛೇರಿ ಕಡತದಲ್ಲಿ ನಿರ್ವಹಿಸಬೇಕು
ಪ್ರತಿಯೊಂದು ಶಿಕ್ಷಣ ಸಂಸ್ಥೆಯು ತನ್ನ ಸಂಸ್ಥೆಯ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ರಚಿಸಬೇಕಾಗಿರುತ್ತದೆ. ಒಬ್ಬರು ಶಿಕ್ಷಕರನ್ನು ಮಕ್ಕಳ ರಕ್ಷಣಾಧಿಕಾರಿಯನ್ನಾಗಿ ಗೊತ್ತುಪಡಿಸಬೇಕು. ಇನ್ನೊಬ್ಬರು ಶಿಕ್ಷಕರು, ಇಬ್ಬರು ಪೋಷಕರು (ಒಬ್ಬ ಮಹಿಳೆ) ಶಾಲಾ ನಿರ್ವಹಣ ಸಮಿತಿಯ ಒಬ್ಬ ಸದಸ್ಯರು, 8ನೇ ತರಗತಿ ಅಥವಾ ಅದಕ್ಕಿಂತ ಉನ್ನತ ತರಗತಿಯ ಒಬ್ಬ ವಿಧ್ಯಾರ್ಥಿ ಮತ್ತು ವಿಧ್ಯÁರ್ಥಿನಿಯನ್ನು ಇದು ಒಳಗೊಂಡಿರುತ್ತದೆ. ಪ್ರತಿ ತಿಂಗಳಿಗೊಮ್ಮೆ ಮತ್ತು ಸುರಕ್ಷತೆಯ ಉಲ್ಲಂಘಣೆಯಾದಾಗ ಸಮಿತಿಯು ಸಭೆ ನಡೆಸಬೇಕು. ಸಮಿತಿಯ ಅವಧಿಯು 2 ಶೈಕ್ಷಣಿಕ ವರ್ಷಗಳಾಗಿರುತ್ತದೆ.
ಪ್ರತಿಯೊಂದು ಶಿಕ್ಷಣ ಸಂಸ್ಥೆಯು ತಮ್ಮ ಸಂಸ್ಥೆಯ ಮಕ್ಕಳು ತಮ್ಮ ಸಲಹೆ ಅಥವಾ ದೂರುಗಳನ್ನು ಗೌಪ್ಯತೆಯಿಂದ ನೀಡಲು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಕ್ಕಳಿಗೆ ಸುಲಭವಾಗಿ ಸಿಗುವಂತಹ ಸ್ಥಳದಲ್ಲಿ ಪಾರದರ್ಶಕವಾಗಿರುವ ಮತ್ತು ಒಡೆದು ಹೋಗದಂತಹ ಸಲಹಾ ಪೆಟ್ಟಿಗೆಯನ್ನು ಇರಿಸಬೇಕು. ಇದಕ್ಕೆ 2 ಬೀಗದ ಕೈ ಇರಬೇಕಾಗಿದ್ದು 1 ಕೀಲಿಯು ಮಕ್ಕಳ ರಕ್ಷಣಾಧಿಕಾರಿಗಳ ಬಳಿಯಲ್ಲಿಯೂ ಇನ್ನೊಂದು ವಿಧ್ಯಾರ್ಥಿಗಳ ಪ್ರತಿನಿಧಿಯ ಬಳಿಯಲ್ಲಿಯೂ ಇರಬೇಕು. ಕನಿಷ್ಠ ವಾರಕ್ಕೊಮ್ಮೆ ಇದನ್ನು ತೆರೆದು ಮಕ್ಕಳ ಕಲ್ಯಾಣ ಸಮಿತಿಯು ಅದರಲ್ಲಿರಬಹುದಾದ ದೂರುಗಳಿಗೆ ಸ್ಪಂದಿಸುವುದಲ್ಲದೆ ಇದನ್ನು ಪುಸ್ತಕದಲ್ಲಿ ನಿರ್ವಹಿಸಬೇಕು.
ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲಿ ಆಪ್ತಸಮಾಲೋಚಕರ ಸೇವೆಯನ್ನು ಒದಗಿಸಲು ಅನಾನುಕೂಲವಾದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಒದಗಿಸುವುದು. ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಅಥವಾ ಗುತ್ತಿಗೆ ಸಿಬ್ಬಂದಿಗಳು, ಮಕ್ಕಳ ಅಥವಾ ಅವರ ಪೋಷಕರು/ಪಾಲಕರಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹೊಂದಿದ್ದು, ಸದರಿ ಮಹಿತಿಯನ್ನು ಅಧಿಕೃತ ಮತ್ತು ಅರ್ಹರೊಂದಿಗೆ ಮಾತ್ರ ಹಂಚಿಕೊಳ್ಳುವುದು.

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್‍ಗಳನ್ನು ರಚಿಸಲು ಮಕ್ಕಳಿಗೆ ಸಹಕರಿಸುವುದರಿಂದ ಮಕ್ಕಳು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳು, ವರದಿ ಮಾಡುವ ವಿಧಾನಗಳು ಹಾಗೂ ಕಾಳಜಿಯ ವಿಷಯಗಳ ಜೊತೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಸುರಕ್ಷತೆಯಡಿ ಪೋಷಕರನ್ನು ತೊಡಗಿಸಿಕೊಳ್ಳುವಿಕೆಯ ಕುರಿತು ಚರ್ಚಿಸಬೇಕು.
ಸಿಬ್ಬಂದಿಗಳ ಔಪಚಾರಿಕ ಮೌಲ್ಯಮಾಪನ ಮತ್ತು ಮೇಲ್ವಿಚಾರಣೆಯಲ್ಲಿ ಮಗುವಿನ ಸುರಕ್ಷತೆಯ ವಿಷಯಗಳು ನಿಯಮಿತವಾಗಿ ಒಳಗೊಂಡಿರುವುದನ್ನು ಶಾಲಾ ಮುಖ್ಯಸ್ಥರು ಖಾತರಿಪಡಿಸಿಕೊಳ್ಳಬೇಕು.
ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯ ಕುರಿತು ಮಕ್ಕಳು, ಪೋಷಕರು ಮತ್ತು ಪಾಲಕರಿಗೆ ಅರಿವು, ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆ ಕಾರ್ಯಕ್ರಮಗಳನ್ನು ಸಂಘಟಿಸಬೇಕು. ಶಿಕ್ಷಣ ಸಂಸ್ಥೆಯ ಆಡಳಿವು ಸಾಮಥ್ರ್ಯಾಭಿವೃದ್ದಿ ಕಾರ್ಯಕ್ರಮಗಳನ್ನು ಆಡಳಿತ ಮಂಡಳಿ, ಭೋದಕ ಮತ್ತು ಭೋದಕೇತರ ಸಿಬ್ಬಂದಿ, ಗುತ್ತಿಗೆ ಸಿಬ್ಬಂದಿ, ಪೋಷಕರು ಮತ್ತು ಕಾನೂನು ಸಮ್ಮತ ಪಾಲಕರಿಗೆ ಹಾಗೂ ಎಲ್ಲಾ ವಯಸ್ಕ ಭಾಗೀದಾರರಿಗೆ ಮಾಹಿತಿಯನ್ನು ನೀಡಬೇಕು

ಮಕ್ಕಳನ್ನು ಮನೆಯಿಂದ ಶಾಲೆಗೆ ಮತ್ತು ಶಾಲೆಯಿಂದ ಮನೆಗೆ ಕರೆದೊಯ್ಯುವ ವಿವಿಧ ಬಗೆಯ ಒಪ್ಪಂದದ ವಾಹನಗಳಾದ ಮೋಟಾರು ಕ್ಯಾಬ್/ ಮ್ಯಾಕ್ಸಿ ಕ್ಯಾಬ್/ ಓಮಿನಿ ಬಸ್‍ಗಳು ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಸುರಕ್ಷಾ ನೀತಿಯು ವಿವರವಾಗಿ ತಿಳಿಸಿರುತ್ತದೆ

ಮಕ್ಕಳ ರಕ್ಷಣಾ ಸೇವೆಗಳ ಸಂಪರ್ಕ ವಿವರಗಳ ವಿನಿಮಯವು ಅತ್ಯವರ್ಶಯವಾಗಿದ್ದು ಮಕ್ಕಳ ಸಹಾಯವಾಣಿ, ಪೊಲೀಸ್ ಠಾಣೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ಥಳೀಯ ಆಸ್ಪತ್ರೆ, ಸ್ಥಳೀಯ ಬಾಲ್ಯವಿವಾಹ ನಿಷೇಧ ಅದಿಕಾರಿ ಮುಂತಾದ ಸೇವೆಗಳ ದೂರವಾಣಿ ಸಂಪರ್ಕ ಸಂಖ್ಯೆಗಳನ್ನು ಸಂಸ್ಥೆಯಲ್ಲಿ ಪ್ರದರ್ಶಿಸುವುದು.
ಮಕ್ಕಳ ಮೇಲೆ ಯಾವುದೇ ರೀತಿಯ ಹಲ್ಲೆ ಸಂಭವಿಸಿದಾಗ ಹಾಗೂ ಮಕ್ಕಳ ಸುರಕ್ಷತೆಯ ಉಲ್ಲಂಘನೆಯಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸುರಕ್ಷತಾ ನೀತಿಯು ಸವಿವರವಾಗಿ ತಿಳಿಸುತ್ತದೆ. ಹಾಗೂ ವರದಿ ಮಾಡುವ ನಿಗದಿತ ನಮೂನೆಯನ್ನು ನೀಡಿರುತ್ತದೆ.
ಸೂಕ್ತ ಪ್ರಾಧಿಕಾರದಿಂದ ನಿಗದಿಪಡಿಸಿರುವ ಮಾರ್ಗಸೂಚಿಗಳನ್ವಯ ಶಾಲಾ ನಿರ್ವಹಣಾ ಸಮಿತಿ ಅಥವಾ ಪೋಷಕ-ಶಿಕ್ಷಕರ ಸಂಘವನ್ನು ರಚಿಸಬೇಕು .ಮಕ್ಕಳ ರಕ್ಷಣೆಗೆ ಎಲ್ಲಾ ರಕ್ಷಣಾ ಮತ್ತು ಸುರಕ್ಷತಾ ಅಂಶಗಳು, ಎಲ್ಲಾ ಸಿಬ್ಬಂದಿಗಳ ನಡವಳಿಕೆ ಮತ್ತು ಮನೋಭಾವ, ವಿದ್ಯಾರ್ಥಿಗಳು ಮತ್ತು ಪೋಷಕರ ಸುರಕ್ಷತಾ ಅಂಶಗಳ ಬಗ್ಗೆ ಚರ್ಚಿಸಲು ಶಾಲಾ ನಿರ್ವಹಣಾ ಸಮಿತಿ ಅಥವಾ ಪೋಷಕ ಶಿಕ್ಷಕರ ಸಂಘಗಳು ನಿಯಮಿತವಾಗಿ ಸಭೆಗಳನ್ನು ನಡೆಸಬೇಕು.
ಹಲ್ಲೆಗೆ ಒಳಗಾದ ಮಗುವನ್ನು ಪೋಷಕರು/ಪಾಲಕರು ಶಾಲೆಯಿಂದ ಬಿಡಿಸಿ ಮತ್ತೊಂದು ಶಾಲೆಗೆ ಪುನರ್ ಪ್ರವೇಶ ಪಡೆಯಲು ಇಚ್ಛಿಸಿ ವರ್ಗಾವಣೆ ಮನವಿಯನ್ನು ಸಲ್ಲಿಸಿದ್ದಲ್ಲಿ, ಶಿಕ್ಷಣಸಂಸ್ಥೆಯ ಮುಖ್ಯಸ್ಥರು ಒಂದು ತಿಂಗಳೊಳಗೆ ವರ್ಗಾವಣೆ ಪತ್ರ ನೀಡಬೇಕು ಮತ್ತು ಶಾಲಾ ಶುಲ್ಕವನ್ನು ಮರುಪಾವತಿಸಬೇಕು. ಕ್ಷೇತ್ರ ಶಿಕ್ಷಣ ಅಧಿಕಾರಿ ಮತ್ತು ಸಂಬಂಧಿಸಿದ ಇತರೆ ಪ್ರಾಧಿಕಾರಗಳು ಮತ್ತೊಂದು ಶೈಕ್ಷಣಿಕ ಸಂಸ್ಥೆಯಲ್ಲಿ ಪುನರ್‍ಪ್ರವೇಶ ಪಡೆಯಲು ಸಹಕರಿಸುವುದು.
.
ಕಾಯ್ದೆಯ ಕಲಂ 19 ರಲ್ಲಿ ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಬಗ್ಗೆ ಶಿಕ್ಷಣ ಸಂಸ್ಥೆಯಲ್ಲಿನ ವ್ಯಕ್ತಿಗಳೂ ಸೇರಿದಂತೆ ಯಾವುದೇ ವ್ಯಕ್ತಿಗೆ ತಿಳಿದುಬಂದಲ್ಲಿ ಅಥವಾ ಅನುಮಾನ ಹೊಂದಿದ್ದಲ್ಲಿ ಮಾಹಿತಿಯನ್ನು ಕೂಡಲೇ ಮಕ್ಕಳ ವಿಶೇಷ ಪೊಲಿಸ್ ಘಟಕಕ್ಕೆ ಮತ್ತು ಇದರ ಅನುಪಸ್ಥಿತಿಯಲ್ಲಿ ಸಮೀಪದ ಪೊಲೀಸ್ ಠಾಣೆಗೆ ವರದಿ ಮಾಡುವಂತೆ ಕಡ್ಡಾಯಗೊಳಿಸಲಾಗಿದೆ. ಪೊಕ್ಸೋ ಕಾಯ್ದೆಯ ಕಲಂ 21(1) ರಲ್ಲಿ ವಿವರಿಸಿರುವಂತೆ ಮಗುವಿನ ವಿರುದ್ದ ಎಸಗಿರುವ ಯಾವುದೇ ರೀತಿಯ ಲೈಂಗಿಕ ಅಪರಾಧವನ್ನು ವರದಿ ಮಾಡಲು ವಿಫಲವಾದಲ್ಲಿ ಅದಕ್ಕೆ 06 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಇವರೆಡನ್ನೂ ವಿಧಿಸಲಾಗುತ್ತದೆ. ಕಾಯ್ದೆಯ ಕಲಂ 21 (2) ರಲ್ಲಿ ವಿವರಿಸಿರುವಂತೆ ಶಿಕ್ಷಣ ಸಂಸ್ಥೆಯ ಪ್ರಭಾರವನ್ನು ಹೊಂದಿರುವ ಯಾವುದೇ ವ್ಯಕ್ತಿ, ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹೊದ್ಯೋಗಿ ಎಸಗಿರುವ ಅಪರಾಧವು ತಪ್ಪು ಎಂದು ತಿಳಿದಿದ್ದಾಗ್ಯೂ, ಆಯೋಗಕ್ಕೆ ವರದಿ ಮಾಡಲು ವಿಫಲವಾದಲ್ಲಿ, ಅವರಿಗೆ ಒಂದು ವರ್ಷದವರೆಗೂ ವಿಸ್ತರಿಸಬಹುದಾದ ಕಾರಾಗೃಹವಾಸದ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.PಔಅSಔಕಾಯ್ದೆಯ ಕಲಂ 16ರಲ್ಲಿ ವ್ಯಾಖ್ಯಾನಿಸಿರುವಂತೆ, ಯಾವುದೇ ವ್ಯಕ್ತಿ ಮಗುವಿನ ವಿರುದ್ಧ ಯಾವುದೇ ಲೈಂಗಿಕ ಅಪರಾಧವನ್ನು ಎಸಗಲು ಇತರರೊಂದಿಗೆ ಸೇರಿ ಸಂಚು ರೂಪಿಸಿದರೆ, ಉದ್ದೇಶಪೂರ್ವಕವಾಗಿ ಅಂತಹ ಕೃತ್ಯವನ್ನು ಅಪರಾಧ ಎಸಗುವ ಮೂಲಕ ಬೆಂಬಲಿಸಿದರೆ, ಅಂತಹ ವ್ಯಕ್ತಿಯನ್ನು ಕೃತ್ಯಕ್ಕೆ ಪ್ರಚೋದಿಸಿದವನು ಎಂದು ಭಾವಿಸತಕ್ಕದ್ದು ಮತ್ತು ಕಲಂ 17ರನ್ವಯ, ಆ ಅಪರಾಧಕ್ಕೆ ನಿಗಧಿಪಡಿಸಿರುವ ಶಿಕ್ಷೆಯೊಂದಿಗೆ ದಂಡಿಸತಕ್ಕದ್ದು ಮತ್ತು ಕಲಂ 18ರ ಪ್ರಕಾರ ಅಪರಾಧವನ್ನು ಎಸಗುವುದಕ್ಕೆ ಪ್ರಚೋದಿಸಿದಲ್ಲಿ, ಅದೇ ಅಪರಾಧಕ್ಕೆ ನಿಗಧಿಪಡಿಸಿದ ಶಿಕ್ಷೆಯ ಶಿಕ್ಷೆಯನ್ನು ವಿಧಿಸುವುದು.

ಶಿಕ್ಷಣ ಸಂಸ್ಥೆಯ ಮಕ್ಕಳ ರಕ್ಷಣಾ ನೀತಿಯ ಪರಿಣಾಮಕಾರಿ ಮತ್ತು ಯ±ಸ್ವಿ ಅನುಷ್ಠಾನಕ್ಕಾಗಿ ನಿಯಮಿತವಾಗಿ ಮೇಲ್ವಿಚಾರಣೆ ಮತ್ತು ಪರಿಶೀಲನೆ ಮಾಡಲು ಎಲ್ಲಾಹಂತಗಳಲ್ಲಿ ಅಂದರೆ, ಆಂತರಿಕವಾಗಿ ಶಾಲೆಗಳ ಒಳಗೆ ಮತ್ತು ಬಾಹ್ಯವಾಗಿ ಪಂಚಾಯ್ತಿ, ವಾರ್ಡ್, ತಾಲೂಕು, ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು/ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯತಿಯ ಅಧ್ಯಕ್ಷರು, ಶಿಕ್ಷಣ ಸ್ಥಾಯೀ ಸಮಿತಿಯ ಅಧ್ಯಕ್ಷರು, ಪೊಲೀಸ್ ವರಿಷ್ಠಾಧಿಕಾರಿ, ಶಿಕ್ಷಣ ಇಲಾಖೆಯ ಉಪನಿರ್ಧೇಶಕರು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಮಕ್ಕಳ ಸಹಾಯವಾಣಿ, ಬಾಲನ್ಯಾಯ ಮಂಡಳಿಯ ಸದಸ್ಯರು, ವಿವಿದ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸದಸ್ಯರಾಗಿರುತ್ತಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಸಭೆಯನ್ನು ನಿರ್ವಹಿಸುತ್ತದೆ.
.
ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮವು, ಮಗುವಿನ ಮೇಲಿನ ಹಲ್ಲೆಯೂ ಸೇರಿದಂತೆ ಸುರಕ್ಷತೆಯ ಉಲ್ಲಂಘನೆಯನ್ನು ಸಾರ್ವಜನಿಕರ ಗಮನ ಸೆಳೆಯುವಲ್ಲಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯಲ್ಲಿ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸಂವೇದನೆಯುಳ್ಳ ಮಾಧ್ಯಮವು ಅಗೋಚರ ಸಂಬಂಧಿಸಿದಂತೆ ಸಾರ್ವಜನಿಕರಿಗೆ ತಿಳುವಳಿಕೆಯನ್ನು ಮೂಡಿಸುವಲ್ಲಿ ಸಕಾರಾತ್ಮಕ ಕ್ರಮವಹಿಸುತ್ತದೆ. ಆದಾಗ್ಯೂ ದೌರ್ಜನ್ಯದ ನಿರ್ದಿಷ್ಟ ಘಟನೆಗಳನ್ನು ವೈಭವೀಕರಿಸುವ ಮೂಲಕ ಮಕ್ಕಳು, ಕುಟುಂಬ ಮತ್ತು ತನಿಖೆಯ ಒಟ್ಟಾರೆ ಪ್ರಕ್ರಿಯೆ ಹಾಗೂ ರಾಜ್ಯದ ಪ್ರತಿಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಂಬುದನ್ನು ಮುಖ್ಯವಾಗಿ ಗಮನಿಸಬೇಕಾಗಿದೆ. ಬಾಲ ನ್ಯಾಯ (ಮಕ್ಕಳ ಪಾಲನೆ & ರಕ್ಷಣೆ) ಕಾಯ್ದೆ 2000 (ಕಲಂ 21) ಮತ್ತು ಕಾಯ್ದೆ 2012 (ಕಲಂ 23, 24) ರಲ್ಲಿ ವಿವರಿಸಿದಂತೆ ಬಲಿಪಶುವಾಗಿರುವ ಮಗು ಮತ್ತು ಕಾನೂನಿನೊಡನೆ ಸಂಘರ್ಷಕ್ಕೊಳಗಾಗಿರುವ ಮಕ್ಕಳ ರಕ್ಷಣೆಯ ಅವಕಾಶಗಳನ್ನು ಮಾಧ್ಯಮವು ಕಾನೂನು ಬದ್ದವಾಗಿ ಅನುಸರಿಸುವುದು. ಒಂದು ವೇಳೆ ಮಾಧ್ಯಮವು ಸದರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವುಗಳ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುತ್ತದೆ. ಭಾರತೀಯ ಪತ್ರಿಕಾ ಮಂಡಳಿ ಬಿಡುಗಡೆ ಮಾಡಿರುವ ಪತ್ರಿಕೋದ್ಯಮ ನೀತಿ ಸಂಹಿತೆ ಮತ್ತು ಮಾಧ್ಯಮ ನೀತಿ ಸಂಹಿತೆ (ಅನುಬಂಧ -1) ಯಲ್ಲಿ ವಿವರಿಸಿರುವಂತೆ, ಮಗುವಿನ ಕುರಿತು ವರದಿಯನ್ನು ಪ್ರಸಾರ ಮಾಡುವಾಗ ಮಗುವಿನ ಘನತೆ ಮತ್ತು ಹಕ್ಕುಗಳನ್ನು ರಕ್ಷಿಸುವುದನ್ನು ಪ್ರೋತ್ಸಾಹಿಸುತ್ತದೆ.
ಮಕ್ಕಳ ಸುರಕ್ಷತೆಯ ವಿವಿಧ ಆಯಾಮಗಳನ್ನು ಪರಿಗಣಿಸಿ ಸುರಕ್ಷತೆ ಮತ್ತು ರಕ್ಷಣೆಯ ಪ್ರಮುಖ ವಲಯಗಳಾದ ಭೌತಿಕ ಸುರಕ್ಷತೆಯಾದ ಮೂಲಭೂತ ಸೌಕರ್ಯ, ಆರೋಗ್ಯ ಮತ್ತು ಸಾರಿಗೆ, ವೈಯಕ್ತಿಕ ಮತ್ತು ಲೈಂಗಿಕ ಸುರಕ್ಷತೆ, ಸಾಮಾಜಿಕ ಮತ್ತು ಭಾವನಾತ್ಮಕ ಸುರಕ್ಷತೆ ಮತ್ತು ರಕ್ಷಣೆಯ ಕಾರ್ಯವಿಧಾನ ಮತ್ತು ಶಿಷ್ಟಾಚಾರಗಳು, ತುರ್ತು ಸನ್ನದ್ಧತೆ ಮತ್ತು ವಿಪತ್ತು ನಿರ್ವಹಣೆ, ಸೈಬರ್ ಸುರಕ್ಷತೆಗಳನ್ನು ಗಮನಿಸುವ ಬಗ್ಗೆ ಗಮನಿಕೆ ಪಟ್ಟಿಯನ್ನು ಮಕ್ಕಳ ರಕ್ಷಣಾ ನೀತಿಯಲ್ಲಿ ವಿವರಿಸಲಾಗಿದ್ದು, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಇವುಗಳು ಇರುವಂತೆ ಖಾತರಿಪಡಿಸುವುದು.
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016 ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವೆಬ್‍ಸೈಟ್ www.dwcd.kar.gov.in ನಿಂದ ಡೌನ್‍ಲೋಡ್ ಮಾಡಿಕೊಂಡು ಅದರ ಪ್ರತಿಯನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳು ಇಟ್ಟುಕೊಳ್ಳಬೇಕು. ರಕ್ಷಣಾ ನೀತಿಯ ವ್ಯಾಪ್ತಿಯಡಿಯಲ್ಲಿ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ರಕ್ಷಣಾ ನೀತಿಯಲ್ಲಿ ತಿಳಿಸಲಾಗಿರುವ ಪ್ರತಿಯೊಂದು ಅಂಶಗಳನ್ನು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಿ ಮಕ್ಕಳ ಸುರಕ್ಷತೆಯನ್ನು ಕಾಪಾಡಬೇಕು.


Spread the love