ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‍ವೆಲ್‍ನನ್ನು ಬಂಧಿಸದಿದ್ದಲ್ಲಿ ಕಲ್ಲಡ್ಕ ಚಲೋ : ಎಸ್‍ಡಿಪಿಐ

Spread the love

ಜುಲೈ 15ರೊಳಗೆ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‍ವೆಲ್‍ನನ್ನು ಬಂಧಿಸದಿದ್ದಲ್ಲಿ ಕಲ್ಲಡ್ಕ ಚಲೋ : ಎಸ್‍ಡಿಪಿಐ

ಮಂಗಳೂರು : ಸರ್ಕಾರ ಮತ್ತು ಜಿಲ್ಲಾಡಳಿತ ಜುಲೈ 15ರೊಳಗಾಗಿ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‍ವೆಲ್‍ನನ್ನು ಬಂಧಿಸಿ ತನಿಖೆಗೊಳಪಡಿಸದಿದ್ದಲ್ಲಿ ಜುಲೈ 15ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು “ಕಲ್ಲಡ್ಕ ಚಲೋ” ಕಾರ್ಯಕ್ರಮದ ರೂಪುರೇಷೆಗಳನ್ನು ಬಹಿರಂಗ ಪಡಿಸುವುದಾಗಿ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಚ್ಚರಿಸಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪಕ್ಷದ ಪದಾಧಿಕಾರಿಗಳು ಜೂನ್ 21 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಲಾಯಿ ನಿವಾಸಿ ಮಹಮ್ಮದ್ ಅಶ್ರಫ್ ಎಂಬವರನ್ನು ಸಂಘ ಪರಿವಾರದ ದುಷ್ಕರ್ಮಿಗಳು ಬೆಂಜನಪದವಿನ ರಾಮನಗರ ಎಂಬಲ್ಲಿ ಕೋಮುದ್ವೇಷದಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಇವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಮ್ಮುಂಜೆ ವಲಯದ ಅಧ್ಯಕ್ಷರಾಗಿದ್ದರು. ಮಹಮ್ಮದ್ ಅಶ್ರಪ್‍ರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳಾದ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸ್ ಇಲಾಖೆ ಬಂಧಿಸಿ, ಪ್ರಮುಖ ರೂವಾರಿ ಎಂದು ಭರತ್ ಕುಮ್ಡೇಲ್‍ನನ್ನು ಬಂಧಿಸುವುದರೊಂದಿಗೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ. ಪೊಲೀಸ್ ಇಲಾಖೆ ಯಾರದೋ ಒತ್ತಡಕ್ಕೆ ಮಣಿದು 7 ಮಂದಿ ಆರೋಪಿಗಳನ್ನು ಬಂಧಿಸಿ, ಅವರ ಮೇಲೆ ದುರ್ಬಲ ಎಫ್.ಐ.ಆರ್ ರನ್ನು ಮತ್ತು ಹೇಳಿಕೆಗಳನ್ನು ದಾಖಲಿಸಿರುವುದು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ ದಾಖಲೆಗಳಿಂದ ತಿಳಿದು ಬರುತ್ತದೆ. ಸಂಘಪರಿವಾರದ ಕ್ರೌರ್ಯಕ್ಕೆ ಮತ್ತು ಅಶ್ರಫ್ ಕೊಲೆಯ ಮಾಸ್ಟರ್ ಮೈಂಡ್ ಆಗಿ ಕೆಲಸ ನಿರ್ವಹಿಸಿದ್ದು ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‍ವೆಲ್ ಎಂಬುದು ಪೊಲೀಸರಿಗೆ ಪ್ರಭಲವಾಗಿ ಗೊತ್ತಿದ್ದರೂ ರಾಜಕೀಯ ಲೆಕ್ಕಚಾರಕ್ಕೆ ಮಣಿದು ಅವರನ್ನು ರಕ್ಷಿಸುವ ಕೆಲಸಕ್ಕೆ ಪೊಲೀಸರು ಕೈ ಹಾಕಿದ್ದಾರೆನ್ನುವ ಸಂಶಯ ಎದ್ದು ಕಾಣುತ್ತಿದೆ. ಇದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ತೀವ್ರರೀತಿಯ ಹೋರಾಟ ನಡೆಸಲಿದೆ.

ಜಿಲ್ಲೆಯಾದ್ಯಂತ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ಕೂಲಂಕುಷವಾಗಿ ನೋಡಿದರೆ ಎಲ್ಲಾ ಕೊಲೆ ಪಾತಕಗಳು, ಕೋಮು ಗಲಭೆಗಳು, ಚೂರಿ ಇರಿತ ಇದೆಲ್ಲದರ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ಟನ ಶಾಮೀಲಾತಿ ನಿಸ್ಸಂಶಯ. ದಶಕಗಳ ಹಿಂದೆ ನಡೆದ ಕಲ್ಲಡ್ಕದ ಎಮ್.ಕೆ ಇಸ್ಮಾಯಿಲ್ ಕೊಲೆಯ ಆರೋಪಿಯೂ ಕೂಡಾ ಇದೇ ಭಟ್ ಆಗಿದ್ದಾರೆ. ನಂತರ ನಡೆದ ಕಲ್ಲಡ್ಕ ಯೂಸೂಫ್ ಕೊಲೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್‍ನ ಆಪ್ತ ರತ್ನಾಕರ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದು ಆ ನಂತರದ ಹಲವು ಅಹಿತಕರ ಘಟನೆ ಹಾಗೂ ಕೋಮು ಗಲಭೆಗಳ ರೂವಾರಿಯೂ ಕೂಡಾ ಇದೇ ರತ್ನಾಕರ ಶೆಟ್ಟಿಯಾಗಿದ್ದು ಇವನನ್ನು ಬದುಕಿಸುವ ಕೆಲಸಗಳು ಎಗ್ಗಿಲ್ಲದೆ ನಡೆಯುತ್ತಿದೆ. ಬದ್ರುದ್ದೀನ್ ಬ್ರಹ್ಮರಕೊಟ್ಲು ಹಾಗೂ ಹರೀಶ್ ಪೂಜಾರಿಯ ಹತ್ಯೆಗೈದ ಆರೋಪಿಯಾದ ಮಿಥುನ್ ಪೂಜಾರಿ ಇದೇ ಕಲ್ಲಡ್ಕ ಪ್ರಭಾಕರ ಭಟ್ ಗರಡಿಯಲ್ಲಿ ಬೆಳೆದು ಬಂದ ಭಟ್‍ನ ಶಿಷ್ಯನಾಗಿರುತ್ತಾನೆ. ಇವನ ಮೇಲೆ ಹಲವು ಪ್ರಕರಣಗಳಿದ್ದು ಇವನು ರೌಡಿ ಶೀಟರ್ ಆಗಿದ್ದಾನೆ. ಮೇ 25 ರಂದು ಕಲ್ಲಡ್ಕದಲ್ಲಿ ಮುಸ್ಲಿಂ ಯುವಕರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿ ಇದೇ ಮಿಥುನ್ ಪೂಜಾರಿ ಆದರೆ ಇದುವರೆಗೆ ಅವನ ಬಂಧನವಾಗಿಲ್ಲ.

ಬಂಟ್ವಾಳ ರಿಕ್ಷಾಚಾಲಕ ಇಕ್ಬಾಲ್ ಕೊಲೆಯ ಆರೋಪಿಗಳು ಇದೇ ತಂಡದವರಾಗಿದ್ದು, ನಾಸಿರ್ ಸಜಿಪನನ್ನು ಕೊಲೆಗೈದವರು ಕೂಡಾ ಕಲ್ಲಡ್ಕ ಕುಕ್ಕಾಜೆ ಪರಿಸರದ ಸಂಘಪರಿವಾರದ ಕಾರ್ಯಕರ್ತರಾಗಿದ್ದಾರೆ. ಜಲೀಲ್ ಕರೋಪಾಡಿಯನ್ನು ಹತ್ಯೆಗೈದ ಪ್ರಮುಖ ಆರೋಪಿಯಾದ ನರಸಿಂಹ ಶೆಟ್ಟಿ ಮಾಣಿ ಪ್ರಭಾಕರ ಭಟ್ಟನ ಆಪ್ತನಾಗಿದ್ದಾನೆ. ಅದೇ ರೀತಿ ಅಶ್ರಫ್‍ನ ಕೊಲೆಗೈದವರು ಕೂಡಾ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‍ವೆಲ್‍ನ ಆಪ್ತರಾಗಿದ್ದು. ಪೊಲೀಸ್ ಇಲಾಖೆಯು ಅಶ್ರಫ್ ಕೊಲೆಯ ಮಾಸ್ಟರ್ ಮೈಂಡ್ ಭರತ್ ಕುಮ್ಡೇಲು ಎಂದು ಹೇಳಿ ಸುಮ್ಮನಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಕೋಮುದಳ್ಳುರಿಗೆ ಹಾಗೂ ಕೊಲೆಗಳ ಹಿಂದಿನ ರೂವಾರಿ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‍ವೆಲ್ ಎಂಬುದು ಜನಸಾಮಾನ್ಯರ ನಡುವೆ ಚರ್ಚೆಯಲ್ಲಿರುವ ಒಂದು ನೈಜ್ಯತೆಯಾಗಿದೆ.

ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳ ಎಲ್ಲಾ ಘಟನೆಗಳ ಬಗ್ಗೆ ಕಣ್ಣು ಹಾಯಿಸಿದಾಗ ಇದರ ಮೂಲ ತಾಣ ಕಲ್ಲಡ್ಕ ಎಂಬುವುದು ಸ್ಪಷ್ಟವಾಗುತ್ತಿದೆ, ಯಾಕೆಂದರೆ ಬಂಟ್ವಾಳ ತಾಲೂಕಿನಲ್ಲಿ  ಇತ್ತೀಚೆಗೆ ನಡೆದ 8 ಕೊಲೆ ಪ್ರಕರಣದ ಆರೋಪಿಗಳ ಹಿನ್ನಲೆಯನ್ನು ನೋಡಿದರೆ ಎಲ್ಲರೂ ಪ್ರಭಾಕರ ಭಟ್‍ರ ಆಪ್ತರಾಗಿಯೇ ಬೆಳೆದು ಬಂದವರು. ಜಿಲ್ಲೆಯಲ್ಲಿ ಕೋಮುಗಲಭೆ, ಕೊಲೆ, ಹಿಂಸಾಚಾರ ಹಾಗೂ ನೈತಿಕ ಪೊಲೀಸ್‍ಗಿರಿಗಳಂತಹ ಘಟನೆಗಳು ಇನ್ನು ಮುಂದೆಯೂ ಜಿಲ್ಲಾದ್ಯಂತ ಮುಂದುವರಿಯುವುದರಲ್ಲಿ ಸಂಶಯವಿಲ್ಲ. ಇದಕೆಲ್ಲಾ ಕಡಿವಾಣ ಹಾಕಬೇಕಾದಲ್ಲಿ ಇವರಿಬ್ಬರ ಬಂಧನ ಅನಿವಾರ್ಯವಾಗಿದೆ. ಇವರನ್ನು ಬಂಧಿಸಿದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ಧತೆಯನ್ನು ನೆಲೆಸಲು ಸಾಧ್ಯವಿದೆ.

ಆದುದರಿಂದ ಸರ್ಕಾರ ಮತ್ತು ಜಿಲ್ಲಾಡಳಿತ ಜುಲೈ 15ರೊಳಗಾಗಿ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್‍ವೆಲ್‍ನನ್ನು ಬಂಧಿಸಿ ತನಿಖೆಗೊಳಪಡಿಸದಿದ್ದಲ್ಲಿ ಜುಲೈ 15ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು “ಕಲ್ಲಡ್ಕ ಚಲೋ” ಕಾರ್ಯಕ್ರಮದ ರೂಪುರೇಷೆಗಳನ್ನು ಬಹಿರಂಗ ಪಡಿಸುವುದಾಗಿ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಈ ಮೂಲಕ ಎಚ್ಚರಿಸುತ್ತಿದ್ದೇವೆ.

ಎ.ಎಮ್. ಅಥಾವುಲ್ಲಾ ( ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎಸ್‍ಡಿಪಿಐ, ದ.ಕ), ಇಕ್ಬಾಲ್ ಬೆಳ್ಳಾರೆ (ಜಿಲ್ಲಾ ಕಾರ್ಯದರ್ಶಿ, ಎಸ್‍ಡಿಪಿಐ, ದ.ಕ),  ಅಶ್ರಫ್ ಮಂಚಿ (ಜಿಲ್ಲಾ ಕಾರ್ಯದರ್ಶಿ, ಎಸ್‍ಡಿಪಿಐ, ದ.ಕ) , ಶಾಹುಲ್ ಎಸ್.ಎಚ್ (ಜಿಲ್ಲಾ ಸಮಿತಿ ಸದಸ್ಯರು, ಎಸ್‍ಡಿಪಿಐ, ದ.ಕ),  ಮುನೀಶ್ ಅಲಿ (ಪುರಸಭೆ ಸದಸ್ಯರು, ಬಂಟ್ವಾಳ), ಇಸ್ಮಾಯಿಲ್ ಆಲಡ್ಕ (ಕಾರ್ಯದರ್ಶಿ, ಬಂಟ್ವಾಳ ವಿಧಾನ ಸಭಾ ಕ್ಷೇತ್ರ) ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love