ಕಾಂಗ್ರೆಸ್ ಪಕ್ಷದ ದೇಶಭಕ್ತಿಯನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗೆ ಇಲ್ಲ – ಅಶೋಕ್ ಕುಮಾರ್ ಕೊಡವೂರು

Spread the love

ಕಾಂಗ್ರೆಸ್ ಪಕ್ಷದ ದೇಶಭಕ್ತಿಯನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗೆ ಇಲ್ಲ – ಅಶೋಕ್ ಕುಮಾರ್ ಕೊಡವೂರು

ಉಡುಪಿ: ಕಾಂಗ್ರೆಸ್ ಪಕ್ಷದ ದೇಶಭಕ್ತಿಯನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಬಿಜೆಪಿಗೆ ಉಳಿದಿಲ್ಲ. ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನದಿಂದಲೇ ಕಾಂಗ್ರೆಸ್ ಬ್ರಿಟೀಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ದೇಶ ಇಂದು ಸದೃಡವಾಗಿ ಅಭಿವೃದ್ಧಿಗೊಂಡಿದ್ದರೆ ಅದಕ್ಕೆ ಮೂಲ ಕಾರಣ ಕಾಂಗ್ರೆಸ್ ಪಕ್ಷ. ಸ್ವಾತಂತ್ರ್ಯ ಹೋರಾಟದ ಪಾಲ್ಗೊಳ್ಳುವಿಕೆಯಲ್ಲಿ ಬಿಜೆಪಿಯ ಪಾತ್ರ ಇಲ್ಲ ಎಂಬ ಸಿದ್ಧರಾಮಯ್ಯನವರ ಹೇಳಿಕೆ ವಾಸ್ತವಿಕ. ಆದರೆ ಬಿಜೆಪಿ ಜಿಲ್ಲಾಧ್ಯಕ್ಷರು ಇತಿಹಾಸವನ್ನು ಅರಿಯದೆ ಸಿದ್ಧರಾಮನ್ಯನವರ ಹೇಳಿಕೆಯನ್ನೇ ದೊಡ್ಡ ಸುಳ್ಳೆಂದು ಬಿಂಬಿಸ ಹೊರಟಿರುವುದು ವಿಪರ್ಯಾಸ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಸತ್ಯವನ್ನು ಮರೆಮಾಚಲು ಅಸಾಧ್ಯ. ವಿಶ್ವವೇ ಇಂದು ಭಾರತವನ್ನು ಗಮನಿಸಬೇಕಾದರೆ ಸುಮಾರು 54 ವರ್ಷಗಳಲ್ಲಿ ದೇಶವನ್ನು ಆಳಿದ ಕಾಂಗ್ರೆಸ್ ಆಡಳಿತವನ್ನೂ ನೆನಪಿಸಿಕೊಳ್ಳಬೇಕಾಗುತ್ತದೆ. 130 ಕೋಟಿ ಜನಸಂಖ್ಯೆ ಇರುವ ಭಾರತ ದೇಶ ಕಣ್ಣು ಮುಚ್ಚಿ ತೆರೆಯುವುದರೊಳಗೆ ಅಭಿವೃದ್ಧಿಗೊಂಡು ಸದೃಡಗೊಳ್ಳಲು ಸಾಧ್ಯವಿಲ್ಲ. ಸಾವಿರಾರು ಭಾಷೆ, ಪದ್ಧತಿ, ಆಚಾರಗಳನ್ನು ಹೊಂದಿದ ಈ ದೇಶವನ್ನು ಕಾಂಗ್ರೆಸ್ ಪಕ್ಷ ಭದ್ರ ತಳಪಾಯದೊಂದಿಗೆ ಮುನ್ನಡೆಸಿದ್ದರಿಂದಲೇ ದೇಶ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ರಾಷ್ಟ್ರಾಭಿಮಾನ ಹಾಗೂ ದೇಶ ಭಕ್ತಿಯನ್ನು ಯಾರೂ ಗುತ್ತಿಗೆ ಪಡೆದಿಲ್ಲ.

ದೇಶದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರಾಭಿಮಾನಿ ಆಗಿರುವುದರಿಂದಲೇ ದೇಶ ಇಂದು ಸದೃಡವಾಗಿ ಬೆಳೆಯಲು ಕಾರಣವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷರು ತಮ್ಮ ಪಕ್ಷದ ಮುಖಂಡರ ಇತಿಹಾಸವನ್ನೇ ಒಮ್ಮೆ ಅವಲೋಕಿಸಿಕೊಳ್ಳಲಿ. ಜನಾಭಿಪ್ರಾಯ ತಮ್ಮ ವಿರುದ್ಧ ಇದ್ದರೂ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ಅಧಿಕಾರ ಪಡೆದಿರುವುದು ಬಿಜೆಪಿಯ ನೈತಿಕ ದಿವಾಳಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಆಯ್ಕೆಗೊಂಡ 17 ಶಾಸಕರನ್ನು ರಾಜಿನಾಮೆ ಕೊಡಿಸಿ 3 ತಿಂಗಳು ರೆಸಾರ್ಟ್ನಲ್ಲಿ ಬಂಧನದಲ್ಲಿರಿಸಿ ಅಧಿಕಾರ ಪಡೆದುದನ್ನೇ ಜನಾದೇಶ ಎಂಬಂತೆ ಬಿಜೆಪಿ ಬಿಂಬಿಸುತ್ತಿರುವುದು ಅವರ ಭೌದ್ದಿಕ ದಿವಾಳಿತನವನ್ನು ತೋರಿಸುತ್ತದೆ.

ಅಧಿಕಾರ ಹಾಗೂ ಸ್ವಾರ್ಥದ ಬಗ್ಗೆಯೇ ಚಿಂತಿಸುವ ಬಿಜೆಪಿ ನೈತಿಕ ಅಧಃಪತನದತ್ತ ಸಾಗಿದೆ. ಸಿದ್ಧರಾಮಯ್ಯನವರ 5 ವರ್ಷಗಳ ಆಡಳಿತವನ್ನು ಯಾರೂ ಮರೆಯಲು ಅಸಾಧ್ಯ. ಎಲ್ಲಾ ವರ್ಗಗಳಿಗೂ ಸಮನಾಗಿ ಯೋಜನೆಗಳನ್ನು ರೂಪಿಸಿ ರಾಜ್ಯಕ್ಕೆ ಬಲಿಷ್ಠ ನಾಯಕತ್ವ ನೀಡಿರುವಾಗ ಕಾಂಗ್ರೆಸ್ ಪಕ್ಷದ ಕನಸು ನನಸಾಗಲು ಜನರೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಲ್ಲಿ ಸಂಶಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love