ಕಾಂಗ್ರೆಸ್ ಸೇರಿದ ಜೆಪಿ ಹೆಗ್ಡೆ – ಬಿಜೆಪಿಯಲ್ಲಿ ಹೆಚ್ಚಿದ ಟಿಕೆಟ್ ಗೊಂದಲ!

Spread the love

ಕಾಂಗ್ರೆಸ್ ಸೇರಿದ ಜೆಪಿ ಹೆಗ್ಡೆ – ಬಿಜೆಪಿಯಲ್ಲಿ ಹೆಚ್ಚಿದ ಟಿಕೆಟ್ ಗೊಂದಲ!

ಉಡುಪಿ: ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಬಿಜೆಪಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ಇನ್ನಷ್ಟು ಕಗ್ಗಂಟಾಗಿಸಿದ್ದಾರೆ ಎನ್ನಲಾಗುತ್ತಿದೆ.

ಪ್ರಸ್ತುತ ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆಯವರಿಗೆ ಟಿಕೇಟ್ ನೀಡಲು ಕ್ಷೇತ್ರದ ಕಾರ್ಯಕರ್ತರೇ ವಿರೋಧವಿದ್ದು ಪ್ರಸ್ತುತ ಚಾಲ್ತಿಯಲ್ಲಿರುವ ಖ್ಯಾತನಾಮ ಅಭ್ಯರ್ಥಿಗಳನ್ನು ಬಿಟ್ಟು ಸಾಮಾನ್ಯ ಕಾರ್ಯಕರ್ತರ ನಡುವಿನ ಅಭ್ಯರ್ಥಿಯ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದ್ದು ಅದೇ ಕಾರಣಕ್ಕೆ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರು ಅಭ್ಯರ್ಥಿಯಾದರೆ ಉಡುಪಿ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವ, ಬಿಜೆಪಿಯ ಸಾಂಪ್ರದಾಯಿಕ ಮತವಾಗಿರುವ ಬಂಟ ಸಮುದಾಯದ ಮತದಾರರು ಹೆಗ್ಡೆಯವರನ್ನು ಬೆಂಬಲಿಸುವ ಸಾಧ್ಯತೆಗಳಿದ್ದು ಇದು ಬಿಜೆಪಿಯ ತಲೆನೋವಿಗೆ ಕಾರಣವಾಗಿದೆ.

ಈ ಹಿನ್ನಲೆಯಲ್ಲಿ ಬಿಜೆಪಿ ಕೂಡ ಬಂಟ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಅಥವಾ ಕ್ಷೇತ್ರದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಬಿಲ್ಲವ (ಈಡಿಗ) ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

ಬಿಲ್ಲವ ಸಮುದಾಯದ ವಿಧಾನಪರಿಷತ್ ಸದಸ್ಯ ಕೋಟ ಶ್ರಿನೀವಾಸ ಪೂಜಾರಿ ಅವರ ಹೆಸರು ಮುನ್ನಲೆಎ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಟ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ಪ್ರಸ್ತಾಪ ಆಗಿರುವುದನ್ನು ಗಮನಿಸಿದ್ದೇನೆ. ಪಕ್ಷದ ನಿರ್ಧಾರ ನಿರ್ದೇಶನವನ್ನು ಪಾಲಿಸುತ್ತೇನೆ ಎಂದು ಹೇಳಿದ್ದು ಟಿಕೇಟ್ ಸಿಕ್ಕಿದರೆ ಲೋಕಸಭೆಗೂ ಸೈ ಎಂದು ಹೇಳಿದ್ದಾರೆ.

ಇದರ ನಡುವೆ ಬಂಟ ಸಮುದಾಯದ ಬಿಜೆಪಿಯ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂ ಉದಯಕುಮಾರ್ ಶೆಟ್ಟಿ ಅವರು ಸ್ವತಃ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರ ಪರ ಚಿಕ್ಕಮಗಳೂರಿನಲ್ಲಿ ಸಭೆ ಕೂಡ ನಡೆದಿದೆ. ಕಾಂಗ್ರೆಸ್ ನ ಬಂಟ ಅಭ್ಯರ್ಥಿಗೆ ಕೌಂಟರ್ ಕೊಡುವುದಕ್ಕೆ ಉದಯ ಕುಮಾರ್ ಶೆಟ್ಟಿ ಅವರ ಹೆಸರು ಕೂಡ ಸುದ್ದಿಯಲ್ಲಿದೆ.

ಅತ್ತ ಶೋಭಾ ಕರಂದ್ಲಾಜೆ ಅವರಿಗೆ ಮತ್ತೊಮ್ಮೆ ಟಿಕೇಟು ನೀಡುವುದಕ್ಕೆ ಬಿಜೆಪಿಯಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮೊಗವೀರ ಸಮುದಾಯದ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿರುವ ಪ್ರಮೋದ್ ಮಧ್ವರಾಜ್ ಅವರು ಕೂಡ ಟಿಕೇಟಿಗಾಗಿ ನವದೆಹಲಿಯಲ್ಲಿ ಬೀಡು ಬಿಟ್ಟಿದ್ದು ಪಕ್ಷದ ವರಿಷ್ಠರ ಬಳಿ ಓಡಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವಿಚಾರದಲ್ಲಿ ಬಿಜೆಪಿ ಪಕ್ಷದಲ್ಲಿದ್ದ ಗೊಂದಲ ಜಯಪ್ರಕಾಶ್ ಹೆಗ್ಡೆಯವರು ಕಾಂಗ್ರೆಸ್ ಸೇರ್ಪಡೆಯಿಂದ ಇನ್ನಷ್ಟು ಜಟಿಲವಾಗಿದೆ.


Spread the love