ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್ ಅವರಿಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

Spread the love

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್ ಅವರಿಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

ಉಡುಪಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವಿಜಯ ಯಾತ್ರೆ ಆರಂಭವಾಗಿದೆ. ಭಾರತದ ಮೊದಲ ಪದಕ ಕರ್ನಾಟಕದ ಉಡುಪಿಗೆ ಬಂದಿದೆ. ವೇಟ್ ಲಿಫ್ಟಿಂಗ್ ನಲ್ಲಿ ಕುಂದಾಪುರದ ಗುರುರಾಜ್ ಪೂಜಾರಿ ಬೆಳ್ಳಿ ಪದಕವನ್ನು ಪಡೆಯುವುದರ ಮೂಲಕ ರಾಜ್ಯ ಕೀರ್ತಿ ಹೆಚ್ಚಿಸಿದ್ದಾರೆ.

ಈ ಕುರಿತು ತನ್ನ ಟ್ವೀಟ್ಟರ್ ಖಾತೆಯಲ್ಲಿ ಸಂತೋಷವನ್ನು ವ್ಯಕ್ತಪಡಿಸಿರುವ ರಾಜ್ಯದ ಯುವಜನ ಮತ್ತ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಇದಕ್ಕಿಂತ ಸಂತೋಷದ ಕ್ಷಣ ನನಗೆ ಬೇರೆ ಇಲ್ಲ. ತಿಂಗಳ ಹಿಂದಷ್ಟೇ ಏಕಲವ್ಯ ಪ್ರಶಸ್ತಿ ನೀಡಲಾಗಿತ್ತು. ಕಾಮನ್ ವೆಲ್ತ್ ಪ್ರಶಸ್ತಿ ಗೆದ್ದ ಗುರುರಾಜ್ ಗೆ ಸರ್ಕಾರದ ಗ್ರೂಪ್ ಬಿ ಉದ್ಯೋಗ ಸಿಗುತ್ತದೆ. ಜೊತೆಗೆ 25 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕ್ರೀಡಾನೀತಿ ಈಗಾಗಲೇ ಘೋಷಣೆ ಮಾಡಲಾಗಿದೆ. ಸರ್ಕಾರದ ನೇಮಕಾತಿಯಲ್ಲಿ ಮೀಸಲಾತಿ ಇದೆ. 48 ಕೋಟಿ ರೂಪಾಯಿ ಈಗಾಗಲೇ ಮೀಸಲಿಟ್ಟು ವಿತರಿಸಲಾಗಿದೆ. ಈಗ ಕಾನೂನಿನ ಅನ್ವಯ ಮೊತ್ತ ಮತ್ತು ಸರ್ಕಾರಿ ಕೆಲಸ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಖೇಲೋ ಇಂಡಿಯಾದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಕ್ರೀಡಾಪಟುಗಳ ಬೆಂಬಲಕ್ಕೆ ಸರ್ಕಾರ ಸಿದ್ಧವಿದೆ. ಒಲಿಂಪಿಕ್ಸ್ ನಲ್ಲಿ ನಮ್ಮ ಕ್ರೀಡಾಪಟುಗಳು ಸಾಧನೆ ಮಾಡಬೇಕಿದೆ, ಇದಕ್ಕೆ ಒಂದು ದಿನದ ಪರಿಶ್ರಮ ಸಾಲದು. ನಿರಂತರ ಶ್ರಮಕ್ಕೆ ಅಡಿಗಲ್ಲು ಹಾಕಲಾಗಿದೆ. ಬಡವರ- ಮಧ್ಯಮ ವರ್ಗದ ಕುಟುಂಬದಿಂದ ಬಂದ ಗುರುರಾಜ್ ಪೂಜಾರಿಯಂತವರಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.


Spread the love