ಕಾರ್ಕಳ ಯುವತಿ ವಫಾ ಸುಲ್ತಾನಾರಿಗೆ ಫೆಲೆಸ್ತೀನ್ ಕುರಿತ ಕಲೆಗೆ ಅಮೇರಿಕಾದಲ್ಲಿ ಪ್ರಶಸ್ತಿ

Spread the love

ಕಾರ್ಕಳ ಯುವತಿ ವಫಾ ಸುಲ್ತಾನಾರಿಗೆ ಫೆಲೆಸ್ತೀನ್ ಕುರಿತ ಕಲೆಗೆ ಅಮೇರಿಕಾದಲ್ಲಿ ಪ್ರಶಸ್ತಿ

ಉಡುಪಿ: ಕತಾರ್ ವಿವಿಯಲ್ಲಿ ಗಲ್ಫ್ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುತ್ತಿರುವ ಕಾರ್ಕಳ ಮೂಲದ ಅನಿವಾಸಿ ಭಾರತೀಯ ವಿದ್ಯಾರ್ಥಿನಿ ವಫಾ ಸುಲ್ತಾನಾ ಫೆಲೆಸ್ತೀನ್ ಕುರಿತ ತನ್ನ ಕಲಾಕೃತಿಗಾಗಿ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರ ರಾಗಿದ್ದಾರೆ.

karkala-photo

ಫೆಲೆಸ್ತೀನ್ ಅಮೆರಿಕನ್ ಸಾಂಸ್ಕೃತಿಕ ಕೇಂದ್ರ(ಪಿಎಸಿಸಿ)ವು ಆಯೋಜಿಸಿದ್ದ ಅಂತಾರಾಷ್ಟ್ರೀಯ ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ ಕಾರ್ಕಳ ತಾಲೂಕಿನ ಮೊಹಿದೀನ್ ಮತ್ತು ಹುಮೈರಾ ದಂಪತಿಗಳ ಪುತ್ರಿಯಾಗಿರುವ ವಫಾ ಸುಲ್ತಾನಾ ಅಮರಿಕದ ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿರುವ ವಿಜೇತರಾಗಿದ್ದಾರೆ.

ಪಿಎಸಿಸಿ ಫೆಲೆಸ್ತೀನ್‌ನ ಶ್ರೀಮಂತ ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಮತ್ತು ಮಾನವೀಯ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತಿದೆ. ಪೋಸ್ಟರ್ ರಚನೆ ಸ್ಪರ್ಧೆಗಾಗಿ ಫೆಲೆಸ್ತೀನಿ ಜನರು ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಕಲಾಕೃತಿಗಳ ಸೃಷ್ಟಿಗಾಗಿ ಅದು ಕಲಾವಿದರನ್ನು ಆಹ್ವಾನಿಸುತ್ತದೆ.

”ನನ್ನ ಹಲವರು ಹವ್ಯಾಸಗಳಲ್ಲಿ ಕಲೆ ನನಗೆ ತುಂಬ ಇಷ್ಟವಾದದ್ದು. ಕಾಲೇಜಿಗೆ ಸೇರುವವರೆಗೂ ನನ್ನಲ್ಲಿ ಜನ್ಮದತ್ತ ಕಲಾವಿದೆ ಇದ್ದಾಳೆ ಎನ್ನುವುದು ನನಗೆ ಗೊತ್ತೇ ಇರಲಿಲ್ಲ. ಅಲ್ಲಿ ಯಾವುದೇ ಕಾರ್ಯಕ್ರಮದ ಪೋಸ್ಟರ್ ರಚನೆಗೆ ಸಂಘಟಕರು ನನ್ನನ್ನೇ ಹುಡುಕಿಕೊಂಡು ಬರುತ್ತಿದ್ದರು” ಎಂದು ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿರುವ ವಫಾ ಸುಲ್ತಾನಾ ನೆನಪಿಸಿಕೊಂಡರು.

ಕಾಲೇಜಿನಲ್ಲೊಮ್ಮೆ ಆಯೋಜಿಸಲಾಗಿದ್ದ ರಾಜಕೀಯ ಕಾರ್ಟೂನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿಕೊಂಡ ಬಳಿಕ ಅವರು ಆ ರಂಗದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದರು. ತನ್ನ ರಾಜಕೀಯ ಕಾರ್ಟೂನುಗಳಿಗಾಗಿ ಅವರು ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

”ವಿವಿಧ ಭಾಷೆಗಳು,ಸಂಸ್ಕೃತಿ,ಆಹಾರ,ಧರ್ಮಗಳು ಮತ್ತು ಜನರ ಬಗ್ಗೆ ನನಗೆ ವಿಶೇಷ ಆಸಕ್ತಿಯಿದೆ. ಫೆಲೆಸ್ತೀನ್ ಎಂದರೆ ಸಂಕಷ್ಟದಲ್ಲಿರುವ ರಾಷ್ಟ್ರ ಎನ್ನುವುದೊಂದೇ ನನಗೆ ಗೊತ್ತಿತ್ತು. ಆದರೆ ಈ ಸ್ಪರ್ಧೆಯಿಂದಾಗಿ ನಾನು ಫೆಲೆಸ್ತೀನ್‌ನ ‘ರಾಜಕೀಯ ’ದ ಆಚೆಗೂ ನೋಡುವಂತಾಯಿತು. ಫೆಲೆಸ್ತೀನ್ ಸಂಸ್ಕೃತಿಯನ್ನು ಬಿಂಬಿಸುವ ಕಲೆಯನ್ನು ರಚಿಸಲು ಅವರ ಆಹಾರ,ಭಾಷೆಗಳು, ಧರ್ಮಗಳು, ಸಾಹಿತ್ಯ, ಸಂಗೀತ, ಉಡುಗೆ ಇವೆಲ್ಲವುಗಳ ಬಗ್ಗೆ ನಾನು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿತ್ತು” ಎಂದು ವಫಾ ಸುಲ್ತಾನಾ ಹೇಳಿದರು.

ಅವರ ಪತಿ ಶೇಖ್ ಅಫ್ಝಲ್ ಕತಾರ್‌ನಲ್ಲಿ ಎನ್ನಾರೈ ಟಿಕ್ಕಿಯಾಗಿದ್ದಾರೆ.


Spread the love