ಕಾಲೇಜು ಗಲಾಟೆಯಲ್ಲಿ ಮಧ್ಯಪ್ರವೇಶಿಸಿಸಲು ಬಂದ ಎಬಿವಿಪಿ ಕಾರ್ಯಕರ್ತರಿಗೆ ಬೆವರಿಳಿಸಿದ ಎಸ್‍ಪಿ ಅಣ್ಣಾಮಲೈ

Spread the love

ಕಾಲೇಜು ಗಲಾಟೆಯಲ್ಲಿ ಮಧ್ಯಪ್ರವೇಶಿಸಿಸಲು ಬಂದ ಎಬಿವಿಪಿ ಕಾರ್ಯಕರ್ತರಿಗೆ ಬೆವರಿಳಿಸಿದ ಎಸ್‍ಪಿ ಅಣ್ಣಾಮಲೈ

ಚಿಕ್ಕಮಗಳೂರು: ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ನಡುವಿನ ಕಿತ್ತಾಟಕ್ಕೆ ಮಧ್ಯಸ್ಥಿಕೆ ವಹಿಸೋಕೆ ಬಂದ ಎಬಿವಿಪಿ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರಿಗೆ ಎಸ್‍ಪಿ ಅಣ್ಣಾಮಲೈ ಸರಿಯಾಗಿ ಚಾರ್ಜ್ ತೆಗೆದುಕೊಂಡಿರುವ ಘಟನೆ ಸಹ್ಯಾದ್ರಿ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ನಡೆದಿದೆ.

ಎಸ್‍ಪಿ ಅಣ್ಣಾಮಲೈ ಅವರು ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿಯ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ಒಳಹೋಗಲು ಯತ್ನಿಸಿದ ಸಂಘಟನಾ ಕಾರ್ಯಕರ್ತರಿಗೆ, ಇದು ಕಾಲೇಜು. ನಿಮಗೆ ಅನುಮತಿ ಹಾಗೂ ದೂರು ಕೊಟ್ಟೋರು ಯಾರೆಂದು ಕಿಡಿಕಾರಿ ಸ್ವತಃ ಎಸ್ಪಿಯವರೇ ಕಾರ್ಯಕರ್ತರನ್ನು ಹೊರದೂಡಿದ್ದಾರೆ.

ಇದಕ್ಕೂ ಮುನ್ನ  ‘ಕಾಲೇಜಿನಲ್ಲಿ ಮೂಲ ಸೌಲಭ್ಯಗಳಿಲ್ಲ, 6 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ, ಬೋಧಕ ರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಕೆ.ಅಣ್ಣಾಮಲೈ ನಗರದ ಸಹ್ಯಾದ್ರಿ ಪ್ಯಾರಾಮೆಡಿಕಲ್‌ ಇನ್‌ಸ್ಟಿಟ್ಯೂಟ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಬಸವನಹಳ್ಳಿ ಮುಖ್ಯರಸ್ತೆ ಯ ಸಹ್ಯಾದ್ರಿ ಕಾಲೇಜಿನ ಆಡಳಿತಾಧಿ ಕಾರಿ ನಳಿನಾ, ಸಿಬ್ಬಂದಿ, ಬೋಧಕರು, ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿ ಮಾಹಿತಿ ಪಡೆದುಕೊಂಡರು.

ಸುದ್ದಿಗಾರರೊಂದಿಗೆ ಎಸ್ಪಿ ಅಣ್ಣಾಮಲೈ ಮಾತನಾಡಿ, ‘ಕಾಲೇಜಿನ ಮೂಲ ಸೌಕರ್ಯಗಳ ಕೊರತೆಗೆ ಸಂಬಂಧಿಸಿದಂತೆ ಇಂಡಿಯನ್‌ ಪ್ಯಾರಾ ಮೆಡಿಕಲ್‌ ಕೌನ್ಸಿಲ್‌ನ ಕುಂದುಕೊರತೆ ವಿಭಾಗಕ್ಕೆ ಆನ್‌ಲೈನ್‌ ಮೂಲಕ ಮಾಹಿತಿ ಅಪ್‌ ಲೋಡ್‌ ಮಾಡುವಂತೆ ವಿದ್ಯಾರ್ಥಿ ಗಳಿಗೆ ಸೂಚಿಸಲಾಗಿದೆ. ಮೂಲಸೌಕರ್ಯ ಗಳ ಕೊರತೆ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಅನುಚಿತ ವರ್ತನೆ, ಕಿರುಕುಳ ಆರೋಪ ಕುರಿತಂತೆ ಸಂಬಂಧಪಟ್ಟವರ ವಿಚಾರಣೆ ಮಾಡಲಾಗಿದೆ. ಇತರ ವಿದ್ಯಾರ್ಥಿಗಳು ಮತ್ತು ಬೋಧಕರ ಅಭಿಪ್ರಾಯ ಪಡೆಯಲಾಗಿದೆ’ ಎಂದು ಹೇಳಿದರು.

ಕಾಲೇಜಿನಲ್ಲಿ ಮೂಲಸೌಕರ್ಯ ಗಳಿಲ್ಲ ಮತ್ತು ಹೆಚ್ಚು ಶುಲ್ಕ ವಸೂಲು ಮಾಡಲಾಗುತ್ತಿದೆ ಎಂದು ಆರೋಪಿಸಿ ಜೂನ್‌ 22ರಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನ ನಿಯಮ ಉಲ್ಲಂಘಿಸಿದ್ದಾರೆ ಎಂದು 6 ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ಷೋಕಾಸ್‌ ನೋಟಿಸ್‌ ನೀಡಿ, ಅವರನ್ನು ಅಮಾನತುಗೊಳಿಸಿದೆ. 30ರೊಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ತಿಳಿಸಿದೆ. ಪ್ರತಿಭಟನೆಯಲ್ಲಿ ಬಹಳಷ್ಟು ಮಂದಿ ಪಾಲ್ಗೊಂಡಿದ್ದರೂ ಕೆಲವರಿಗೆ ಮಾತ್ರ ನೋಟಿಸ್‌ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹೀಗಾಗಿ, ಪರಿಶೀಲನೆಗೆ ಸಮಿತಿ ರಚಿಸಲಾಗಿದೆ’ ಎಂದರು.

‘ಆಡಳಿತ ಮಂಡಳಿಯವರು, ಬೋಧಕರು, ವಿದ್ಯಾರ್ಥಿ ಪ್ರತಿನಿಧಿಗಳು ಸಮಿತಿಯಲ್ಲಿದ್ದಾರೆ. ಸಮಿತಿಯು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಶುಲ್ಕ ಕುರಿತಂತೆ ಆಡಳಿತಾಧಿಕಾರಿ ಸುತ್ತೋಲೆಯನ್ನು ತೋರಿಸಿದ್ದಾರೆ. ಸುತ್ತೋಲೆಯ ಪ್ರತಿಯನ್ನು ಪ್ಯಾರಾಮೆಡಿಕಲ್‌ ಕೌನ್ಸಿಲ್‌ ವೆಬ್‌ಸೈಟಿಗೆ ಅಪ್‌ಲೋಡ್‌ ಮಾಡಿ ಶುಲ್ಕ ಖಾತರಿ ಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದೇನೆ’ ಎಂದರು.

‘ವಿದ್ಯಾರ್ಥಿನಿಯೊಬ್ಬರು 15 ದಿನಗಳಿಂದ ಹಾಸ್ಟೆಲ್‌ನಲ್ಲೂ ಇಲ್ಲ, ಕಾಲೇಜಿಗೂ ಹಾಜರಾಗಿಲ್ಲ. ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರಿಗೆ ಮಾಹಿತಿ ನೀಡಲಾಗುವುದು’ ಎಂದರು.


Spread the love