ಕಾವೇರಿ ವಿವಾದ; ಶಾಂತಿ ಕಾಪಾಡುವಂತೆ ಕನ್ನಡ ಮತ್ತು ತಮಿಳು ಜನತೆಯಲ್ಲಿ ಸಿಎಂ ಸಿದ್ದರಾಮಯ್ಯ ಮನವಿ

Spread the love

ಕಾವೇರಿ ವಿವಾದ; ಶಾಂತಿ ಕಾಪಾಡುವಂತೆ ಕನ್ನಡ ಮತ್ತು ತಮಿಳು ಜನತೆಯಲ್ಲಿ ಸಿಎಂ ಸಿದ್ದರಾಮಯ್ಯ ಮನವಿ

ಬೆಂಗಳೂರು: ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆ ಮತ್ತು ಕರ್ನಾಟಕದ ಅಂಗಡಿ-ಹೊಟೇಲ್ ಗಳ ಮೇಲೆ ನಡೆಸಿರುವ ದಾಳಿ ಖಂಡನಾರ್ಹವಾದುದು ಹಾಗೂ ಅಷ್ಟೇ ಕಳವಳಕಾರಿಯಾದುದು. ಈ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಹಕರಿಸಬೇಕೆಂದು ಎರಡು ರಾಜ್ಯಗಳಲ್ಲಿರುವ ತಮಿಳರು ಮತ್ತು ಕನ್ನಡಿಗರನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಂತಿಸಿದ್ದಾರೆ

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಇಂದು ಬೆಳಿಗ್ಗೆ ತಮಿಳುನಾಡಿನಲ್ಲಿ ನಡೆದ ಘಟನೆಗಳ ಬಗ್ಗೆ ತಿಳಿಯುತ್ತಿದ್ದಂತೆ ನಾನು ರಾಜ್ಯದ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದೇನೆ. ಇದರ ನಂತರ ನಮ್ಮ ಮುಖ್ಯಕಾರ್ಯದರ್ಶಿಗಳು, ತಮಿಳುನಾಡಿನ ಮುಖ್ಯಕಾರ್ಯದರ್ಶಿಗಳ ಜತೆ ದೆಹಲಿಯಲ್ಲಿ ಮಾತನಾಡಿದ್ದಾರೆ. ಅದೇ ರೀತಿ ನಮ್ಮ ಪೊಲೀಸ್ ಮಹಾನಿರ್ದೇಶಕರು ತಮಿಳುನಾಡಿನ ಪೊಲೀಸ್ ಮಹಾನಿರ್ದೇಶಕರ ಜತೆಯೂ ಚರ್ಚೆ ನಡೆಸಿದ್ದಾರೆ.

ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡಬೇಕು ಮತ್ತು ಹಲ್ಲೆ-ದೌರ್ಜನ್ಯ ನಡೆಸುತ್ತಿರುವವರ ಮೇಲೆ ಸೂಕ್ತ ಕಾನೂನುಕ್ರಮಕೈಗೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಪತ್ರ ಬರೆಯುತ್ತೇನೆ. ಎರಡೂ ರಾಜ್ಯಗಳಲ್ಲಿ ಉದ್ಭವವಾಗಿರುವ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹಸಚಿವರ ಜತೆಯೂ ಮಾತನಾಡುತ್ತೇನೆ.

ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನುಕ್ರಮಕೈಗೊಳ್ಳುತ್ತೇವೆ ಮತ್ತು ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡುತ್ತೇವೆ ಎಂದು ಅಲ್ಲಿನ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲಿರುವ ತಮಿಳರಿಗೆ ಸೂಕ್ತಭದ್ರತೆ ನೀಡಲು ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಗೆ ಸೂಚಿಸಿದ್ದೇನೆ.

ಬೆಂಗಳೂರಿನಲ್ಲಿರುವ ಯುವಕನೊಬ್ಬ ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾದ ಪ್ರತಿಕ್ರಿಯೆಗಳನ್ನು ನೀಡಿದ್ದಾನೆ ಎಂದು ಆರೋಪಿಸಿ ಆತನ ಮೇಲೆ ಕೆಲವು ಯುವಕರು ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಹಲ್ಲೆ ನಡೆಸಿದವರನ್ನು ಬಂಧಿಸಲಾಗುವುದು.

ಇಂದು ಬೆಳಿಗ್ಗೆ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಪ್ರವೀಣ್ ಶೆಟ್ಟಿ ಮೊದಲಾದವರು ನನ್ನನ್ನು ಭೇಟಿಯಾಗಿ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆಸಲಾಗುತ್ತಿರುವ ಹಲ್ಲೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ನಡೆಸಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಅವರಿಗೆ ತಿಳಿಸಿದ್ದೇನೆ.ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಂಡು ಹೋಗಲು ಸಹಕರಿಸಬೇಕೆಂದು ಕೋರಿದ್ದಾರೆ.

 


Spread the love