ಕಾಸರಗೋಡು : ನೇಣು ಬಿಗಿದ ಸ್ಥಿತಿಯಲ್ಲಿ ಯುವಕರ ಮೃತದೇಹ ಪ್ರಕರಣ ಭೇದಿಸಿದ ಪೊಲೀಸರು- ಒರ್ವನ ಬಂಧನ

Spread the love

ಕಾಸರಗೋಡು : ನೇಣು ಬಿಗಿದ ಸ್ಥಿತಿಯಲ್ಲಿ ಯುವಕರ ಮೃತದೇಹ ಪ್ರಕರಣ ಭೇದಿಸಿದ ಪೊಲೀಸರು- ಒರ್ವನ ಬಂಧನ

ಕಾಸರಗೋಡು : ಮಂಗಳವಾರ ಇಬ್ಬರು ಯುವಕರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಾಡಿನಲ್ಲಿ ಪತ್ತೆಯಾದ ಘಟನೆಯನ್ನು ಪೊಲೀಸರು ಬೇಧಿಸಿದ್ದು ಒರ್ವನನ್ನು ಬಂಧಿಸಿದ್ದಾರೆ

ಬಂಧಿತ ಆರೋಪಿಯನ್ನು ಕುಂಬಳೆ ಶ್ರೀ ಗೋಪಾಲಕೃಷ್ಣ ಸಭಾಭವನ ಸಮೀಪದ ನಿವಾಸಿ ಶರತ್ ಯಾನೆ ಶ್ರೀಕುಮಾರ್(25) ಎಂದು ಗುರುತಿಸಲಾಗಿದೆ.

ಶ್ರೀ ಕುಮಾರ್ ಬಂಧನದಿಂದ ಬಳೆ ನಾಯ್ಕಾಪಿನ ಭಗವತಿ ಆಯಿಲ್ ಎಂಡ್ ಫ್ಲೋರ್ ಮಿಲ್ ನೌಕರನಾಗಿದ್ದ ನಾಯ್ಕಾಪು ಐ.ಸಿ. ರಸ್ತೆ ನಿವಾಸಿ ಹರೀಶ(38) ಎಂಬವರನ್ನು ಬರ್ಬರವಾಗಿ ಕಡಿದು ಕೊಲೆಗೈದ ಪ್ರಕರಣದ ತನಿಖೆಯ ಮಾಹಿತಿ ಹೊರಬಿದ್ದಿದ್ದು ಈತ ಕೊಲೆಯ ಪ್ರಮುಖ ಆರೋಪಿಯಾಗಿದ್ದಾನೆ ಎನ್ನಲಾಗಿದೆ.

ಕೊಲೆಯ ಮರುದಿನ ಕುಂಬಳೆ ಗೋಪಾಲಕೃಷ್ಣ ಸಭಾಭವನದ ಹಿಂಭಾಗದ ಶೇಡಿಗುಮ್ಮೆ ಕಾಡಿನಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಯುವಕರು ಕೂಡಾ ಸದ್ರಿ ಕೃತ್ಯದಲ್ಲಿ ಶಾಮೀಲಾದವರಾಗಿದ್ದಾರೆಂದೂ ಹತ್ಯೆಯಲ್ಲಿ ಒಟ್ಟು ನಾಲ್ವರಿದ್ದರೆಂದೂ ದೃಢಪಟ್ಟಿದೆ. ಇನ್ನೋರ್ವನಿಗಾಗಿ ಬಲೆ ಬೀಸಲಾಗಿದೆ. ಗೋಪಾಲಕೃಷ್ಠ ಸಭಾಭವನ ಸಮೀಪದ ಕಾಲನಿ ನಿವಾಸಿಗಳಾದ ಮಣಿ ಯಾನೆ ಮಣಿಕಂಠ(21) ಹಾಗೂ ರೋಶನ್(20) ಎಂಬವರ ಮೃತದೇಹಗಳು ನಿನ್ನೆ ಸಂಜೆ ಶೇಡಿಗುಮ್ಮೆ ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದುವು. ಇವರ ದೇಹಗಳಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಇದು ಪೊಲೀಸರಲ್ಲಿ ಶಂಕೆ ಮೂಡಿಸಿತ್ತು. ಸದ್ರಿ ಕೊಲೆಯಲ್ಲಿ ಆತ್ಮಹತ್ಯೆ ನಡೆಸಿದ ಯುವಕರ ಕೈವಾಡ ಬಗ್ಗೆ ಸಂಶಯ ಬಲಗೊಂಡು ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಮುಖ್ಯ ಆರೋಪಿ ಶ್ರೀಕುಮಾರ್ ಪೊಲೀಸ್ ಬಲೆಗೆ ಬಿದ್ದಿದ್ದ.

ಕುಂಬಳೆ ವೃತ್ತ ನಿರೀಕ್ಷಕ ಪಿ. ಪ್ರಮೋದ್, ಉಪ ನಿರೀಕ್ಷಕ ಸಂತೋಷ್ ನೇತೃತ್ವದ ಪೊಲೀಸ್ ತಂಡವು ನಿನ್ನೆ ಮಧ್ಯಾಹ್ನ ಈತನನ್ನು ಸೆರೆ ಹಿಡಿದಿದೆ. ಆರೋಪಿಯನ್ನು ವಿಸ್ತøತ ವಿಚಾರಣೆಗೆ ಗುರಿಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಈತನನ್ನು ಮತ್ತೆ ವಿಚಾರಣೆ ನಡೆಸಲು ತಮ್ಮ ವಶಕ್ಕೆ ಬಿಟ್ಟುಕೊಡುವಂತೆ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.


Spread the love