ಕಿನ್ನಿಮೂಲ್ಕಿ ಬಳಿ ಮ್ಯಾನ್‌ಹೋಲ್‌ ಬ್ಲಾಕ್ ಆಗಿ ರಸ್ತೆಯಲ್ಲೇ ಹರಿದ ಒಳಚರಂಡಿಯ ಕೊಳಕು ನೀರು

Spread the love

ಕಿನ್ನಿಮೂಲ್ಕಿ ಬಳಿ ಮ್ಯಾನ್‌ಹೋಲ್‌ ಬ್ಲಾಕ್ ಆಗಿ ರಸ್ತೆಯಲ್ಲೇ ಹರಿದ ಒಳಚರಂಡಿಯ ಕೊಳಕು ನೀರು

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾದ ಯುಜಿಡಿ ಕಾಮಗಾರಿಯಿಂದಾಗಿ ಇಡೀ ನಗರದಲ್ಲಿ ಬಹುತೇಕ ಮ್ಯಾನ್‌ಹೋಲ್‌ಗಳು ಬ್ಲಾಕ್ ಆಗಿ ಸಮಸ್ಯೆಯಾಗಿದ್ದು, ಶುಕ್ರವಾರ ಕಿನ್ನಿಮೂಲ್ಕಿ ವಾರ್ಡಿನ ಅಬಕಾರಿ ಭವನದ ಬಳಿ ಒಳಚರಂಡಿಯ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಉಂಟು ಮಾಡಿದೆ.

ಅಬಕಾರಿ ಭವನದ ಮುಂಭಾಗದ ಮ್ಯಾನ್‌ಹೋಲ್‌ನಿಂದ ಯುಜಿಡಿ ನೀರು ಉಕ್ಕಿಹರಿದು ರಸ್ತೆ ಮಧ್ಯದಲ್ಲೂ ಕೊಳಕು ನೀರು ನಿಂತು ವಾಹನ ಮತ್ತು ಜನಗಳ ಓಡಾಟಕ್ಕೆ ತುಂಬಾ ಕಿರಿಕಿರಿಯಾಯಿತು. ತ್ಯಾಜ್ಯ ನೀರು ರಸ್ತೆಯಲ್ಲಿ ಕಾಲುವೆ ನೀರಿನಂತೆ ಹರಿಯುತ್ತಿದ್ದು, ಗಬ್ಬೆದ್ದು ನಾರುತ್ತಿದೆ. ರಸ್ತೆಯಲ್ಲಿ ಜನರು ಸಂಚರಿಸಲು ಪರದಾಡುತ್ತಿದ್ದಾರೆ. ದ್ವಿಚಕ್ರ ವಾಹನಗಳು ತ್ಯಾಜ್ಯ ನೀರಿನ ನಡುವೆಯೇ ಹೋಗುವುದರಿಂದ ಕಲುಷಿತ ನೀರಿನ ಸಿಂಚನ ಜನರ ಮೇಲೆ ಆಗುತ್ತಿದೆ. ಉಕ್ಕಿ ಹರಿಯುತ್ತಿರುವ ತ್ಯಾಜ್ಯದ ನೀರು ರಸ್ತೆ ಪಕ್ಕದ ತಗ್ಗು ಪ್ರದೇಶಗಳಲ್ಲಿ ಶೇಖರಣೆಗೊಳ್ಳುತ್ತಿದೆ. ನೀರು ನಿಂತಲ್ಲೇ ಕೊಳೆತು ನಾರುತ್ತಿದೆ. ಸ್ಥಳೀಯರು ಈ ದುರ್ವಾಸನೆ ಸಹಿಸಿಕೊಂಡು ಜೀವನ ನಡೆಸುವಂತಾಗಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಾರ್ವಜನಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಸಮಸ್ಯೆಗೆ ಮುಕ್ತಿ ಎಂದು, ಇದಕ್ಕೆ ಗಂಭೀರ ಕ್ರಮ ಕೈಗೊಂಡು ಜನರನ್ನು ಸಂಕಷ್ಟದಿಂದ ಪಾರು ಮಾಡುವವರು ಯಾರು ಎಂದು ಪ್ರಶ್ನಿಸಿ ಬೇಸರಿಸಿದರು. ಕೊಳಕು ವಾತಾವರಣದಿಂದ ರೋಗರುಜಿನಗಳು ಬಂದರೆ ಯಾರು ಹೊಣೆ, ಪರಿಸ್ಥಿತಿ ಹೀಗೆ ಮುಂದುವರೆದರೆ ಎಲ್ಲಾ ರಸ್ತೆಗಳನ್ನು ಬಂದ್‌ಮಾಡಿ ನಗರಸಭೆ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.


Spread the love