ಕುಂದಾಪುರದಲ್ಲಿ ಕ್ವಾರಂಟೈನ್ ಕೇಂದ್ರಗಳು ಅವ್ಯವಸ್ಥೆಯ ಆಗರ – ಜಿಲ್ಲಾಡಳಿತದ ವಿರುದ್ದ ಅಸಮಾಧಾನ

Spread the love

ಕುಂದಾಪುರದಲ್ಲಿ ಕ್ವಾರಂಟೈನ್ ಕೇಂದ್ರಗಳು ಅವ್ಯವಸ್ಥೆಯ ಆಗರ – ಜಿಲ್ಲಾಡಳಿತದ ವಿರುದ್ದ ಅಸಮಾಧಾನ

ಕುಂದಾಪುರ: ಹೊರರಾಜ್ಯಗಳಿಂದ ಸೇವಾಸಿಂಧು ಆಪ್ ಮೂಲಕ ಕಳೆದೆರಡು ದಿನಗಳಿಂದ ಊರಿಗೆ ಮರಳುತ್ತಿವವರಿಗೆ ನೀಡಲಾಗಿರುವ ಕ್ವಾರಂಟೈನ್ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿದೆ ಎಂದು ಕ್ವಾರಂಟೈನ್ಗೊಳಪಟ್ಟವರು ಜಿಲ್ಲಾಡಳಿತದ ವಿರುದ್ದ ತೀವ್ರ ಅಸಮಧಾನ ಹೊರಹಾಕಿದ್ದಾರೆ.

ಹೊರರಾಜ್ಯದಿಂದ ಬರುವವರಿಗೆ 14 ದಿನಗಳ ಕಾಲ ಕ್ವಾರಂಟೈನ್ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕಾಗಿ ಸಾಕಷ್ಟು ಪೂರ್ವತಯಾರಿಗಳನ್ನು ಮಾಡಿಕೊಂಡಿತ್ತು. ಕುಂದಾಪುರ ಹಾಗೂ ಬೈಂದೂರಿನ ವಿವಿಧ ಶಾಲಾ-ಕಾಲೇಜು, ವಿದ್ಯಾರ್ಥಿನಿಲಯ ಸೇರಿದಂತೆ ಕೆಲ ಖಾಸಗಿ ವಸತಿಗೃಹಗಳನ್ನು ಸರ್ಕಾರಿ ನಿಯಂತ್ರಣದ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿತ್ತು. ಆದರೆ ಮಂಗಳವಾರ ರಾತ್ರಿ ಮುಂಬೈ ಹಾಗೂ ಇನ್ನಿತರ ರಾಜ್ಯದಿಂದ ಆಗಮಿಸಿರುವ ನೂರಾರು ಮಂದಿಗೆ ಎರಡೂ ತಾಲೂಕಿನ ವಿವಿಧೆಡೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು. ಬಹುತೇಕ ಸರ್ಕಾರಿ ನಿಯಂತ್ರಣದಲ್ಲಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಬುಧವಾರ ಬೆಳಿಗ್ಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಜನರೆಲ್ಲರೂ ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಶೌಚಾಲಯ ಕಡಿಮೆ.. ಇದ್ದರೂ ಬಾಗಿಲಿಗೆ ಚಿಲಕವಿಲ್ಲ!:
ಖಾಸಗಿ ವಸತಿಗೃಹಗಳು ಹೊರತುಪಡಿಸಿ ಕುಂದಾಪುರ, ಬೈಂದೂರು ಎರಡೂ ತಾಲೂಕಿನ ಬಹುತೇಕ ಕಡೆಗಳ ಕ್ವಾರಂಟೈನ್ ಕೇಂದ್ರಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯವಿಲ್ಲದೇ ಜನರೆಲ್ಲರೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಕುಡಿಯುವ ನೀರು, ಉಪಹಾರ ವಿತರಣೆಯಲ್ಲಿ ವ್ಯತ್ಯಯ ಉಂಟಾಯಿತು. ಕೆಲವೆಡೆಗಳಲ್ಲಿ ನಿರ್ವಹಣೆ ಕಾಣದ ಶೌಚಾಲಯಗಳು, ಬಾಗಿಲಿಗೆ ಚಿಲಕವಿಲ್ಲದ ಶೌಚಾಲಯಗಳಿದ್ದುದರಿಂದ ಜನರು ತೊಂದರೆ ಅನುಭವಿಸುವಂತಾಯಿತು.

ಮೂಲಭೂತ ಸೌಕರ್ಯ ಒದಗಿಸಲು ಸಿಬ್ಬಂದಿಗಳಿಂದ ಶ್ರಮ:
ಕ್ವಾರಂಟೈನ್ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸದ ಜಿಲ್ಲಾಡಳಿತದ ವಿರುದ್ದ ವ್ಯಾಪಕವಾದ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಗಳು ಮೂಲಭೂತ ಸೌಕರ್ಯ ಒದಗಿಸಲು ಶ್ರಮಪಟ್ಟರು. ಅವ್ಯವಸ್ಥೆಯ ಆಗರವಾಗಿರುವ ಕೆಲವು ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದ್ದು, ಇನ್ನೂ ಕೆಲ ಕಡೆಗಳಲ್ಲಿ ಸಿಬ್ಬಂದಿಗಳು ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾದರು.

ಹೊರಗಡೆ ತಿರುಗಾಟ: ಭೀತಿಯಲ್ಲಿ ಸ್ಥಳೀಯರು:
ಸರ್ಕಾರಿ ನಿಯಂತ್ರಣದಲ್ಲಿನ ಕೆಲ ಖಾಸಗಿ ವಸತಿಗೃಹಗಳಲ್ಲಿ ಕ್ವಾರಂಟೈನ್ಗೊಳಪಟ್ಟವರು ವಸ್ತುಗಳನ್ನು ಖರೀದಿಸಲು ವಸತಿಗೃಹದ ಆವರಣದ ಹೊರಗಡೆ ಬರುತ್ತಿದ್ದಾರೆ. ಇನ್ನೂ ಕೆಲವರು ಆಟೋಟಗಳಲ್ಲಿ ಭಾಗಿಯಾಗುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿವೆ. ಬಹುತೇಕ ಖಾಸಗಿ ವಸತಿಗೃಹಗಳು ಜನವಸತಿ ಪ್ರದೇಶಗಳಲ್ಲಿರುವುದರಿಂದ ಸರ್ಕಾರದ ನಿಯಮ ಮೀರಿ ಹೊರಬರುತ್ತಿರುವ ಕ್ವಾರಂಟೈನ್ಗೊಳಪಟ್ಟ ಜನರ ನಡೆಗೆ ಇದೀಗ ಭಯಭೀತರಾಗಿದ್ದಾರೆ.


Spread the love