ಕೆಲಸ ಮಾಡದ ಶೋಭಾರನ್ನು ಮನೆಗೆ ಕಳುಹಿಸಿ ; ಪ್ರಮೋದ್ ಮಧ್ವರಾಜ್

Spread the love

ಕೆಲಸ ಮಾಡದ ಶೋಭಾರನ್ನು ಮನೆಗೆ ಕಳುಹಿಸಿ ; ಪ್ರಮೋದ್ ಮಧ್ವರಾಜ್

ಅಜ್ಜಂಪುರ: ‘ಮತದಾರರು ಆಶೀರ್ವದಿಸಿದರೆ ನವದೆಹಲಿಯಲ್ಲಿ ರೈತ, ಕಾರ್ಮಿಕ, ಜನಸಾಮಾನ್ಯರ ಧ್ವನಿಯನ್ನು ಪ್ರತಿನಿಧಿಸುತ್ತೇನೆ. ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ನನ್ನ ಮೇಲೆ ವಿಶ್ವಾಸವಿಟ್ಟು ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ. ಸರ್ಕಾರದ ವಿವಿಧ ಯೋಜನೆ ಮತ್ತು ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.

‘ಸಂಸದೆಯಾಗಿ ಶೋಭಾ ಕರಂದ್ಲಾಜೆ ಹೆಚ್ಚಿನ ಅನುದಾನ ತರುವಲ್ಲಿ, ಮಹತ್ವದ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಸೋತಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಅಡಿಕೆ ಬೆಳೆಗಾರರ, ಈರುಳ್ಳಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿಲ್ಲ. ಹುಲಿ ಯೋಜನೆ, ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವಿಕೆಯಂತಹ ಜನವಿರೋಧಿ ಕ್ರಮಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಹೀಗೆ ಕ್ಷೇತ್ರ ಮತ್ತು ಜನಹಿತ ಮರೆತವರನ್ನು ಮನೆಗೆ ಕಳುಹಿಸಲು ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜ್, ‘ಸ್ವಪಕ್ಷದವರೇ ಗೋ-ಬ್ಯಾಕ್ ಶೋಭಾ ಘೋಷಣೆ ಮೊಳಗಿಸಿ ಆಗಿದೆ. ಅದನ್ನು ಕಾರ್ಯಗತಗೊಳಿಸುವ ಬಿಜೆಪಿ ಯೋಜನೆಗೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಕೈಜೋಡಿಸಿ’ ಎಂದರು.

ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಮಾತನಾಡಿ, ‘ಹಿಂದಿನ ಕಾಂಗ್ರೆಸ್ ಸರ್ಕಾರ ಅಜ್ಜಂಪುರವನ್ನು ತಾಲ್ಲೂಕು ಕೇಂದ್ರವಾಗಿಸಿತ್ತು. ಈಗಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಕಳಸವನ್ನು ತಾಲ್ಲೂಕು ಕೇಂದ್ರ ಆಗಿಸಿದೆ. ಕ್ಷೇತ್ರಕ್ಕೆ ಮೈತ್ರಿ ಸರ್ಕಾರ ಕೊಡುಗೆ ನೀಡಿದೆ. ಇದೇ ಮೈತ್ರಿ ಸರ್ಕಾರ ದೆಹಲಿಯಲ್ಲಿಯೂ ಸ್ಥಾಪಿಸಲು ಹಿರಿಯರು ಒಂದಾಗಿ ದ್ದಾರೆ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ, ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಮತದ ಮೂಲಕ ಕೊಡುಗೆ ನೀಡಿ’ ಎಂದರು.

ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿ, ‘ತರೀಕೆರೆ ಮೊದಲಿಂದಲೂ ಕಾಂಗ್ರೆಸ್ ಭದ್ರಕೋಟೆ. ನಮ್ಮಲ್ಲಿಯ ತಿಕ್ಕಾಟದಿಂದಾಗಿ ಅನ್ಯ ಪಕ್ಷದವರಿಗೆ ವಿಧಾನಸಭಾ ಚುನಾವಣೆಯಲ್ಲಿ ಲಾಭ ಆಯಿತು. ಈಗ ಮುಖಂಡರೆಲ್ಲರೂ ಒಟ್ಟಾಗಿದ್ದೇವೆ. ಕಾರ್ಯಕರ್ತರು ಸಹ ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿ, ‘ತಾಲ್ಲೂಕಿನ ನಂದೀಪುರ-ಬೀರನಹಳ್ಳಿ ಗ್ರಾಮಸ್ಥರು ಕೆರೆಗೆ ನೀರು ಹರಿಸಿ ಎಂಬ ಒತ್ತಾಯ ಮುಂದಿಟ್ಟು ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ. ಗ್ರಾಮಸ್ಥರ ಸಮಸ್ಯೆ ಯನ್ನು ಜಿಲ್ಲಾಧಿಕಾರಿ ಹಾಗೂ ನೀರಾವರಿ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಗೆಹರಿಸಲು ಬದ್ಧವಾಗಿದ್ದೇನೆ. ಸಂವಿಧಾನ ವಿರುದ್ಧವಾದ ಮತದಾನ ಬಹಿಷ್ಕಾರದ ನಿರ್ಧಾರವನ್ನು ಗ್ರಾಮಸ್ಥರು ಕೈಬಿಡಬೇಕು’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಲ್.ವಿಜಯ್ ಕುಮಾರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್, ಟಿ.ಎಚ್.ಶಿವಶಂಕರಪ್ಪ, ಎಪಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಆನಂದ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಿಪ್ಪೇರುದ್ರಯ್ಯ, ಧ್ರುವಕುಮಾರ್, ಸದಸ್ಯೆ ರೇಣುಕಮ್ಮ, ಕಾಂಗ್ರೆಸ್ ವಕ್ತಾರ ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಜೆಡಿಎಸ್ ಮುಖಂಡ ನರೇಂದ್ರ, ಎಸ್. ಶಿವಾನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಬಸಮ್ಮ, ಉಪಾಧ್ಯಕ್ಷೆ ಸುನಂದಾ, ಸದಸ್ಯರು ಇದ್ದರು.


Spread the love