ಕೊಡಗು – ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಅರಬ್ ಸಂಯುಕ್ತ ಸಂಸ್ಥಾನ ವತಿಯಿಂದ ರಕ್ತದಾನ

Spread the love

ಕೊಡಗು – ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಅರಬ್ ಸಂಯುಕ್ತ ಸಂಸ್ಥಾನ ವತಿಯಿಂದ ರಕ್ತದಾನ

ದುಬೈ: ಯು.ಎ.ಇ ಯಲ್ಲಿ ನಡೆಯುತ್ತಿರುವ ರಕ್ತದಾನ ಅಭಿಯಾನದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಅರಬ್ ಸಂಯುಕ್ತ ಸಂಸ್ಥಾನದ ವತಿಯಿಂದ ವರ್ಷಂಪ್ರತಿ ನಡೆಸಲ್ಪಡುವ ರಕ್ತದಾನ ಶಿಬಿರವು ದುಬೈ ಲತೀಫಾ ಆಸ್ಪತ್ರೆಯಲ್ಲಿ ದಿನಾಂಕ 30 ಜೂನ್ 2017 ಶುಕ್ರವಾರ ಬೆಳಿಗ್ಗೆ ಸಮಯ 10:00 ರಿಂದ ಮಧ್ಯಾಹ್ನ 3:00 ರ ವರಗೆ ನಿರಂತರವಾಗಿ ನೆರವೇರಿತು. ರಮದಾನ್ ಮಾಸದಲ್ಲಿ ಹೆಚ್ಚು ರಕ್ತದ ಅವಶ್ಯಕತೆ ಇರುವುದರಿಂದ ಹೆಚ್ಚು ರಕ್ತದಾನಿಗಳು ಈ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಜ್ಮಾನ್, ಶಾರ್ಜಾ, ದುಬೈ ಹಾಗೂ ಅಬುಧಾಬಿಯ ಕೊಡಗು-ದಕ್ಷಿಣ ಕನ್ನಡ ಗೌಡ ಸಮುದಾಯದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಎಪ್ಪತ್ತಕ್ಕೂ ಹೆಚ್ಚಿನ ಜನರು ರಕ್ತದಾನ ಮಾಡಿದರು. ಹತ್ತಕ್ಕೂ ಹೆಚ್ಚಿನ ಜನರು ಪ್ಲೇಟ್ಲೆಟ್ಸ್ (ಕೆಂಪು ರಕ್ತ ಕಣ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಂಶ – ಕಿರುಬಿಲ್ಲೆಗಳು) ದಾನ ಮಾಡಿದರು.

ಈ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಸಂಘ ಸಂಸ್ಥೆ ಅರಬ್ ಸಂಯುಕ್ತ ಸಂಸ್ಥಾನದ ಸ್ಥಾಪಕಾಧ್ಯಕ್ಷರಾದ ಅಶೋಕ ಉಲುವಾರನ, ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ ಅಚ್ಚಂದಿರ, ಪ್ರಸಕ್ತ ಸಾಲಿನ ಅಧ್ಯಕ್ಷರಾದ ಹರೀಶ್ ಕೋಡಿ, ಉಪಾಧ್ಯಕ್ಷರಾದ ಸುನೀಲ್ ಮೊಟ್ಟೆಮನೆ, ಪ್ರಧಾನಕಾರ್ಯದರ್ಶಿ ಕರ್ಣೇಯನ ಸುನೀಲ್ ಕುಮಾರ್, ಖಜಾಂಚಿ ದಿಲೀಪ್ ಉಲುವಾರು ಉಪಸ್ಥಿತರಿದ್ದರು. ಗೌರವಾನ್ವಿತ ಅತಿಥಿಗಳಾಗಿ ಒಕ್ಕಲಿಗರ ಸಂಘದ ನವೀನ್ ಗೌಡ,ರೀವಾ ಲೇಸರ್ ಬ್ಯೂಟೀ ಮತ್ತು ಸ್ಪಾ ದುಬೈಯ ಡಾಕ್ಟರ್ ನಂದ ಕಿಶೋರ್, ಡಾಕ್ಟರ್ ರಶ್ಮೀ ನಂದ ಕಿಶೋರ್ ಹಾಗೂ ಅಬುಧಾಬಿಯ ಮೆಡಿಕ್ಲೀನಿಕ್ ಆಸ್ಪತ್ರೆಯ ಡಾಕ್ಟರ್ ತ್ರಿಲೋಕ್ ಚಂದ್ರಶೇಖರ್ ಅವರು ಆಗಮಿಸಿ ರಕ್ತದಾನ ಮಾಡಿ ತಮ್ಮ ವೈದ್ಯಕೀಯ ವ್ರತ್ತಿಯ ಔದಾರ್ಯತೆಯನ್ನು ಮೆರೆದರು.

ಕಾರ್ಯಕ್ರಮದ ಮಾಹಿತಿ ಕೇಂದ್ರದಲ್ಲಿ ಸಂಘ ಸಂಸ್ಥೆಯ ಉದಯೋನ್ಮುಖ ಪ್ರತಿಭೆಗಳಾದ ರಾಹುಲ್ ಬಿದ್ದಪ್ಪ ಕರ್ಣೇಯನ, ಆಶಿಷ್ ಕೋಡಿ ಮತ್ತು ಆಯುಷ್ ಕೋಡಿ ಸಹಕರಿಸಿದರೆ ಅವರಿಗೆ ಮೀನ ಹರೀಶ್ ಕೋಡಿ ಹಾಗೂ ಜಗದೀಶ್ ಕುಶಾಲಪ್ಪ ಸಬ್ಬಾಂಡ್ರ ಮಾರ್ಗದರ್ಶನ ಮಾಡಿದರು.

ರಕ್ತದಾನ ಶಿಬಿರಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಬೆಳಗಿನ ಉಪಾಹಾರ, ಚಹಾ, ಕಾಫಿ, ಹಣ್ಣು ಹಂಪಲು ಹಾಗೂ ಕಾರ್ಯಕ್ರಮದ ಕೊನೆಯವರೆಗೂ ತಂಪು ಪಾನೀಯದ ವ್ಯವಸ್ಥೆಗೆ ಕುಸುಮಾಧರ ಕೋಡಿ, ಅಶೋಕ್ ಉಲುವಾರನ, ಚಂದ್ರಕಾಂತ್ ಕುದ್ಪಾಜೆ, ಸುರೇಶ್ ಕುಂಪಲ, ಸುಬ್ರಹ್ಮಣ್ಯ ಕದಿಕಡ್ಕ, ಯತೀಶ್ ಗೌಡ, ದಿಲೀಪ್ ಉಲುವಾರು, ಸಮರ್ಥ್ ಬಂಟ್ವಾಳ ಹಾಗೂ ವಿನೋದ್ ರಾಮಚಂದ್ರ ಅವರು ಪ್ರಾಯೋಜಕರಾಗಿದ್ದರು. ರಕ್ತದಾನ ಮಾಡಲು ಬಯಸುವ ಹಲವರಿಗೆ ರೋಷನ್ ಕಂಪ ಮತ್ತು ಪ್ರವೀಣ್ ಕಲ್ಲಗದ್ದೆ ಅವಕಾಶ ಕಲ್ಪಿಸಿ ಕೊಟ್ಟರು ಹಾಗೂ ಕಾರ್ಯಕ್ರಮದ ಜವಾಬ್ದಾರಿಯನ್ನು ಬಾಲು ಸಾಲಿಯಾನ್ ವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ಛಾಯಾಗ್ರಹಣವನ್ನು ರತೀಶ್ ಬಗ್ಗನ, ಸುರೇಶ್ ಕುಂಪಲ ಮತ್ತು ಚರಣ್ ರಾಮಕಜೆ ವಹಿಸಿದರು.
ವರದಿ: ಯಶ್ ಪುತ್ತೂರು, ಅಬುಧಾಬಿ.

Spread the love