ಕೊರೊನಾ ಸೋಂಕಿನ ಚಿಕಿತ್ಸೆಯ ಬಗ್ಗೆ ರಾಜ್ಯ ಸರಕಾರವು ಹೊರಡಿಸಿರುವ ಸೂಚನೆಯನ್ನು ಕೂಡಲೇ ಹಿಂಪಡೆಯಬೇಕು – ಡಾ| ಶ್ರೀನಿವಾಸ ಕಕ್ಕಿಲ್ಲಾಯ

Spread the love

ಕೊರೊನಾ ಸೋಂಕಿನ ಚಿಕಿತ್ಸೆಯ ಬಗ್ಗೆ ರಾಜ್ಯ ಸರಕಾರವು ಹೊರಡಿಸಿರುವ ಸೂಚನೆಯನ್ನು ಕೂಡಲೇ ಹಿಂಪಡೆಯಬೇಕು – ಡಾ| ಶ್ರೀನಿವಾಸ ಕಕ್ಕಿಲ್ಲಾಯ

ಹೊಸ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದೇ ಮೇ 15, 2020ರಂದು ಪ್ರಕಟಿಸಿರುವ ಚಿಕಿತ್ಸಾ ಶಿಷ್ಠಾಚಾರದಲ್ಲಿ ಹೊಸ ಕೊರೊನಾ ಚಿಕಿತ್ಸೆಗೆ ಅಗತ್ಯವೇ ಇಲ್ಲದ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ಸೂಚಿಸಲಾಗಿದ್ದು, ಅದನ್ನು ಸರಕಾರವು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ.

ರಾಜ್ಯ ಸರಕಾರವು ಪ್ರಕಟಿಸಿರುವ ಈ ಶಿಷ್ಠಾಚಾರದಲ್ಲಿ ಕೊರೊನಾ ಸೋಂಕಿತರನ್ನು ಎ, ಬಿ, ಸಿ ವರ್ಗ ಎಂದು ವರ್ಗೀಕರಿಸಲಾಗಿದ್ದು, ಎಲ್ಲಾ ವರ್ಗಗಳ ಸೋಂಕಿತರನ್ನೂ ಆಸ್ಪತ್ರೆಗಳಿಗೆ ದಾಖಲಿಸಲು ಅವಕಾಶ ನೀಡಲಾಗಿದೆ.

ಈ ಮೂರು ವರ್ಗಗಳ ಸೋಂಕಿತರಿಗೂ ಆಸ್ಪತ್ರೆಯಲ್ಲಿ ದಾಖಲಾದ ದಿನವೇ ರಕ್ತಕಣಗಳ ಪರೀಕ್ಷೆ, ರಕ್ತದ ಗ್ಲೂಕೋಸ್, ಯಕೃತ್ತು ಹಾಗೂ ಮೂತ್ರಪಿಂಡಗಳ ಕ್ಷಮತೆಯ ಪರೀಕ್ಷೆಗಳು, ಇಸಿಜಿ, ಎದೆಯ ಕ್ಷಕಿರಣ ಪರೀಕ್ಷೆ, ಎದೆಯ ಸಿ ಟಿ ಸ್ಕಾನ್, ಜೊತೆಗೆ ಇನ್ನೂ ಕೆಲವು ವಿಶೇಷ ಪರೀಕ್ಷೆಗಳನ್ನು ನಡೆಸಬೇಕೆಂದು ಈ ಶಿಷ್ಟಾಚಾರದಲ್ಲಿ ಹೇಳಲಾಗಿದ್ದು, ಅವಕ್ಕೆ ಕನಿಷ್ಠ 25000 ರೂಪಾಯಿ ವೆಚ್ಚವಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಲಕ್ಷಗಟ್ಟಲೆ ಜನರಿಗೆ ಕೊರೊನಾ ತಗಲಿದಾಗ ಈ ಕಡ್ಡಾಯ ಶಿಷ್ಟಾಚಾರದನುಸಾರ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಬೇಕೇ ಮತ್ತು ತಲಾ 25 ಸಾವಿರದ ಪರೀಕ್ಷೆಗಳಿಗೆ ಒಳಪಡಿಸಬೇಕೇ?

ಈ ಶಿಷ್ಟಾಚಾರದಲ್ಲಿ ಸೂಚಿಸಿರುವ ಚಿಕಿತ್ಸೆಗಳು ಕೂಡ ಅಚ್ಚರಿ ಹುಟ್ಟಿಸುತ್ತವೆ. ರೋಗಲಕ್ಷಣಗಳಿಲ್ಲದವರಿಂದ ಹಿಡಿದು ಅತಿ ಗಂಭೀರ ಸ್ವರೂಪದ ಸೋಂಕುಳ್ಳ ಎಲ್ಲರಿಗೂ ಕ್ಲೋರೋಕ್ವಿನ್, ಅಝಿತ್ರೋಮೈಸಿನ್, ಒಸೆಲ್ಟಾಮಿವಿರ್, ಜಿಂಕ್ (ಸತು), ವಿಟಮಿನ್ ಸಿ ಮಾತ್ರೆಗಳನ್ನು 5-7 ದಿನಗಳವರೆಗೆ ನೀಡಬೇಕೆಂದೂ, ರಕ್ತ ಹೆಪ್ಪುಗಟ್ಟದಂತೆ ತಡೆಯುವ ಎನೋಕ್ಸಪಾರಿನ್ ಚುಚ್ಚುಮದ್ದನ್ನು ಬಹುತೇಕ ಎಲ್ಲರಿಗೂ 7 ದಿನ ನೀಡಬೇಕೆಂದೂ ಅದರಲ್ಲಿ ಸೂಚಿಸಲಾಗಿದ್ದು, ಇವಕ್ಕೆ ಪ್ರತೀ ರೋಗಿಗೂ ಕನಿಷ್ಠ 5000 ರೂಪಾಯಿ ಬೇಕಾಗುತ್ತದೆ. ಇಷ್ತಲ್ಲದೆ, ಆಸ್ಪತ್ರೆಯ ಕೊಠಡಿ, ಆರೈಕೆ, ವೈದ್ಯರ ಶುಲ್ಕ ಇತ್ಯಾದಿ ವೆಚ್ಚಗಳು ಬೇರೆಯೇ ಆಗಿರುತ್ತವೆ. ತೀವ್ರ ರೂಪದ ಸೋಂಕುಳ್ಳವರಿಗೆ ಇನ್ನೂ ಬಳಕೆಯಲ್ಲೇ ಇಲ್ಲದ, ಇನ್ನೂ ದೃಢಗೊಂಡಿಲ್ಲದ ಚಿಕಿತ್ಸೆಗಳನ್ನೆಲ್ಲ ಸೂಚಿಸಲಾಗಿದ್ದು, ಅವುಗಳ ವೆಚ್ಚಗಳು ಬಹಳಷ್ಟಾಗುತ್ತವೆ, ಮಾತ್ರವಲ್ಲ, ಹಲವು ಪ್ರಶ್ನೆಗಳಿಗೂ ಕಾರಣವಾಗುತ್ತವೆ.

ಆದ್ದರಿಂದ ಯಾವುದೇ ಸಾಕ್ಷ್ಯಾಧಾರಗಳಿಲ್ಲದ, ಪ್ರಯೋಜನಕ್ಕಿಂತ ಹಾನಿಯನ್ನೇ ಉಂಟು ಮಾಡಬಹುದಾದ, ಅನಗತ್ಯವಾಗಿ ಸಾವಿರಗಟ್ಟಲೆ ವೆಚ್ಚಕ್ಕೆ ಕಾರಣವಾಗಬಹುದಾದ, ಖಾಸಗಿ ಔಷಧ ಕಂಪೆನಿಗಳಿಗೆ ತಮ್ಮ ಪ್ರಯೋಗಗಳನ್ನು ನಡೆಸಲು ಅವಕಾಶ ನೀಡಬಹುದಾದ, ಖಾಸಗಿ ಹಿತಾಸಕ್ತಿಗಳಿಗೆ ದುರ್ಬಳಕೆ ಮಾಡಲು ಉತ್ತೇಜಿಸಬಹುದಾದ ಈ ಶಿಷ್ಟಾಚಾರವನ್ನು ಈ ಕೂಡಲೇ ಹಿಂಪಡೆದು, ಸಾಕ್ಷ್ಯಾಧಾರಿತವಾದ, ಸರಳವಾದ, ಅನಗತ್ಯವಾದ ವೆಚ್ಚಗಳಿಗೆ ಕಾರಣವಾಗದ ಶಿಷ್ಟಾಚಾರವನ್ನು ಸಿದ್ಧಪಡಿಸಬೇಕಾಗಿದೆ.


Spread the love

1 Comment

Comments are closed.