ಕೊರೋನಾ ವಿರುದ್ದ ನಿಶ್ಚಯವಾಗಿ ಗೆಲುವು ಸಾಧಿಸಲಿದ್ದೇವೆ – ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಕೊರೋನಾ ವಿರುದ್ದ ನಿಶ್ಚಯವಾಗಿ ಗೆಲುವು ಸಾಧಿಸಲಿದ್ದೇವೆ – ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಪಾಸಿಟಿವ್ ವರದಿ ಬಂದವರ ಮನೆಯನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಿ ಮನೆಯ ಸದಸ್ಯರು ಹೊರಗೆ ಬಾರದಂತೆ ಸೀಲ್ಡೌನ್ ಮಾಡಲಾಗಿದೆಯಾದರೂ ಕೆಲವರು ಹೊರಗಡೆ ತಿರುಗಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಕೋವಿಡ್-19 ಕಾರ್ಯಪಡೆ ಅಂತವರಿಗೆ ತಿಳಿಹೇಳಬೇಕು. ಅದನ್ನೂ ಮೀರಿ ವರ್ತಿಸಿದರೆ ಕಾನೂನುಕ್ರಮ ಕೈಗೊಳ್ಳಬೇಕು. ಕೋವಿಡ್ ನಿಯಂತ್ರಣದ ಬಗ್ಗೆ ಎಲ್ಲಾ ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ವಿರುದ್ದ ನಾವು ನಿಶ್ಚಯವಾಗಿ ಗೆಲುವು ಸಾಧಿಸುತ್ತೇವೆ ಎಂದು ರಾಜ್ಯ ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೋಟ ವ್ಯಾಪ್ತಿಯಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅವರು ಬುಧವಾರ ಕೋಟ ಅಮೃತೇಶ್ವರಿ ದೇವಳದ ಸಭಾಂಗಣದಲ್ಲಿ ಕೋವಿಡ್ ಕಾರ್ಯಪಡೆಯ ಸದಸ್ಯರು ಹಾಗೂ ಇಲಾಖಾಧಿಕಾರಿಗಳೊಂದಿಗೆ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದರು.

ಹೋಮ್ ಕ್ವಾರಂಟೈನ್ನಲ್ಲಿದ್ದವರಿಗೆ ತುರ್ತು ಚಿಕಿತ್ಸೆ ಬೇಕಾದಲ್ಲಿ ಅವರಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಕೋವಿಡ್ ಟಾಸ್ಕ್ಫೋರ್ಸ್ನಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬೇರೆ ಬೇರೆ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು. ಹೀಗಾಗಿಯೇ ಈ ಸಭೆಯನ್ನು ನಡೆಸುತ್ತಿದ್ದೇವೆ. ನಾವೆಲ್ಲರೂ ಸಮನ್ವಯತೆಯಿಂದ ಕೆಲಸ ನಿರ್ವಹಿಸಿದರೆ ಬಹುಬೇಗನೆ ಕೊರೋನಾ ಮಹಾಮಾರಿಯನ್ನು ಹೊಡೆದೋಡಿಸಬಹುದು. ಜನರಿಗೆ ದೈರ್ಯ ತುಂಬಬೇಕು. ಇದೇ ರೀತಿ ಜಾಗರೂಕತೆಯಿಂದ ಒಂದು ತಂಡವಾಗಿ ಕೆಲಸ ನಿರ್ವಹಿಸಬೇಕು ಎಂದರು.

ಈಗಾಗಲೇ ಗ್ರಾ.ಪಂ ಮಟ್ಟದಲ್ಲಿ 15 ಜನರನ್ನೊಳಗೊಂಡಂತೆ ಕೋವಿಡ್ ಟಾಸ್ಕ್ಫೋರ್ಸ್ ಅನ್ನು ರಚಿಸಿದ್ದೇವೆ. ಇದು ನಗರ ಮಟ್ಟಕ್ಕೆ ವಿಸ್ತರಿಸಬೇಕೆನ್ನುವುದು ಸರ್ಕಾರದ ಆಶಯ. ನಗರ ಪ್ರದೇಶಗಳಲ್ಲೂ ಕೋವಿಡ್ ಕಾರ್ಯಪಡೆಯನ್ನು ವಿಸ್ತರಿಸಲು ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಸಭೆಗೆ ಮಾಹಿತಿ ನೀಡಿದರು.

ಜ್ವರ, ನೆಗಡಿಗೆ ಚಿಕಿತ್ಸೆ ಕೊಡಲು ಸೂಚನೆ ನೀಡಿ:
ಮಳೆಗಾಲದಲ್ಲಿ ಪುರುಷ ಹಾಗೂ ಮಹಿಳೆಯರು ಗದ್ದೆ ಬಯಲಲ್ಲಿ ನಾಟಿ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಈ ಸಮಯದಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುವುದು ಸಹಜ. ಆದರೆ ಜ್ವರ, ನೆಗಡಿ ಇದೆಯೆಂದು ಆಸ್ಪತ್ರೆಗೆ ಹೋದರೆ ನಮಗೆ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ನಮ್ಮನ್ನು ಅಸ್ಪøಶ್ಯರಂತೆ ಕಾಣುತ್ತಾರೆ. ಮಾಮೂಲಿ ಶೀತ, ಜ್ವರಕ್ಕೆ ಚಿಕಿತ್ಸೆ ಕೊಡಲು ಆಸ್ಪತ್ರೆಗಳಿಗೆ ಸ್ಪಷ್ಟ ಸೂಚನೆ ಕೊಡಬೇಕೆಂದು ಸಭೆಯಲ್ಲಿ ಮಾಜಿ ಗ್ರಾ.ಪಂ ಸದಸ್ಯ ಭುಜಂಗ ಸಚಿವರ ಗಮನ ಸೆಳೆದರು. ಕೋವಿಡ್ ವಾರಿಯರ್ಸ್ಗೆ ಹಂಚುತ್ತಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ಸರ್ಕಾರ ಸಾರ್ವಜನಿಕರಿಗೂ ನೀಡಬೇಕು ಎಂಬ ಅಭಿಪ್ರಾಯಗಳೂ ಸಭೆಯಲ್ಲಿ ಕೇಳಿಬಂದವು.

ಕೋಟ ಸಮುದಾಯ ಕೇಂದ್ರದಲ್ಲಿ ಹೊಸದಾಗಿ ಫೀವರ್ ಕ್ಲಿನಿಕ್ ಅನ್ನು ತೆರೆದಿದ್ದೇವೆ. ಮೊದಲು ಥರ್ಮಲ್ ಸ್ಕ್ಯಾನರ್ನಲ್ಲಿ ದೇಹದ ಉಷ್ಣಾಂಶತೆ ಪರಿಶೀಲಿಸಲಾಗುತ್ತದೆ. ಆ ಬಳಿಕ ಆಕ್ಸಿಜನ್ ಪರಿಶೀಲನೆ ನಡೆಸಿ ಅಲ್ಲಿ ಏನಾದರೂ ಸಮಸ್ಯೆಗಳಿದ್ದರೆ ರೋಗ ಇರಬಹುದೆಂಬ ಸಂಶಯದಲ್ಲಿ ಗಂಟಲುದ್ರವ ಪರೀಕ್ಷೆ ನಡೆಸುತ್ತೇವೆ. ಮಾಮೂಲಿ ಜ್ವರ ಕಂಡುಬಂದರೆ ಅವರಿಗೆ ಕೂಡಲೇ ಚಿಕಿತ್ಸೆ ನೀಡಿ ಮನೆಗೆ ಕಳುಹಿಸುತ್ತಿದ್ದೇವೆ ಎಂದು ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವನಾಥ ಹೇಳಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪತ್ರಕರ್ತರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ವಿತರಿಸಲಾಯಿತು.

ಸಭೆಯಲ್ಲಿ ತಹಸೀಲ್ದಾರ್ ಕಿರಣ್ ಗೌರಯ್ಯ, ಡಿವೈಎಸ್ಪಿ ಜಯಶಂಕರ್, ಸಿಪಿಐ ಅನಂತ ಪದ್ಮನಾಭ, ದೇವಳದ ಆಡಳಿತಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಉದ್ಯಮಿ ಆನಂದ್ ಸಿ ಕುಂದರ್ ಮೊದಲಾದವರು ಇದ್ದರು.


Spread the love