ಸಿಟಿ ಬಸ್ ದರ ಹೆಚ್ಚಳ – ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡನೆ

Spread the love

ಸಿಟಿ ಬಸ್ ದರ ಹೆಚ್ಚಳ – ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡನೆ

ಉಡುಪಿ: ಉಡುಪಿ ನಗರದಲ್ಲಿ ಸಿಟಿ ಬಸ್ ಗಳ ದರವನ್ನು ಹೆಚ್ಚಿಸಿರುವುದನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಬ್ಲಾಕ್ ಕಾಂಗ್ರೆಸ್ ಉಡುಪಿ ನಗರ ಸಾರಿಗೆ ಸರಕಾರಿ ನರ್ಮ್ ಬಸ್ಗಳ ಬದಲಿಗೆ ಲಾಕ್ಡೌನ್ ಸಡಿಲಿಕೆ ನಂತರ ಕೆಲವೆಡೆ ಲಿಂಕ್ ಬಸ್ಗಳನ್ನು ಸಂಚಾರಕ್ಕೆ ವ್ಯವಸ್ಥೆಗೊಳಿಸಿದ್ದರು. ಎರಡನೇ ಹಂತದಲ್ಲಿ ಖಾಸಗಿ ಬಸ್ಗಳ ಸಂಚಾರ ಪ್ರಾರಂಭವಾಗಿ ಕಳೆದ 3 ದಿನಗಳಿಂದ ಸರಕಾರಿ ಬಸ್ಗಳು ತಮ್ಮ ಸಂಚಾರವನ್ನು ನಿಲ್ಲಿಸಿವೆ. ಉಡುಪಿ ಡಿಪೊದ ಪ್ರಬಂಧಕರಲ್ಲಿ ಮಾತನಾಡಿದಾಗ ಕೆಲವು ಮಾರ್ಗದ ಬಸ್ಗಳ ಸಂಚಾರ ನಷ್ಟದಲ್ಲಿರುವುದರಿಂದ ಮೇಲಾಧಿಕಾರಿಗಳ ಆದೇಶದನ್ವಯ ಬಸ್ ಸೇವೆ ಸ್ಥಗಿತಗೊಳಿಸಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಪ್ರಸ್ತುತ ಕೆಲವೆಡೆ ಖಾಸಗಿ ಬಸ್ಗಳು ಲಾಕ್ಡೌನ್ ಸಡಿಲಗೊಂಡ ನಂತರ ಏಕಾಏಕಿ ರೂ. 13 ರಿಂದ 20 ರೂಪಾಯಿಗೆ ಟಿಕೆಟ್ ದರವನ್ನು ಹೆಚ್ಚಿಸುವ ಮೂಲಕ ಕೋವಿಡ್ 19 ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಎಲ್ಲಾ ರೀತಿಯ ರಿಯಾಯಿತಿಗಳನ್ನು ರದ್ದುಗೊಳಿಸಿದ್ದಾರೆ. ಜನರ ಹಿತರಕ್ಷಣೆ ಮಾಡಬೇಕಾದ ಉಡುಪಿ ಶಾಸಕರು ಸರಕಾರಿ ನರ್ಮ್ ಬಸ್ಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಭಾಸವಾಗುತ್ತಿದೆ. ಜಿಲ್ಲಾಡಳಿತ ಹಾಗೂ ಆರ್.ಟಿ.ಒ. ರವರ ಹತೋಟಿಯಲ್ಲಿ ಉಡುಪಿ ನಗರ ಸಾರಿಗೆ ಇಲ್ಲವೇ ಇಲ್ಲ. ಬಸ್ ಮಾಲಕರು ಜನರನ್ನು ಲೂಟಿಗೈಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ಈ ಸಂಕಷ್ಟದ ಸಂದರ್ಭದಲ್ಲಿಯೂ ತೈಲ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾದರೂ ಅಬಕಾರಿ ಸುಂಕದ ನಷ್ಟವನ್ನು ಭರಿಸಲು ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೇಂದ್ರ ರಾಜ್ಯ ಸರಕಾರಗಳು ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಗರಿಷ್ಟ ಆರ್ಥಿಕ ನೆರವು ನೀಡುವ ಮೂಲಕ ಬಸ್ ಮಾಲಕರಿಗೆ ತೆರಿಗೆ ಮನ್ನಾ ಮಾಡುವ ಮೂಲಕ ಈ ಸಂಕಷ್ಟದ ಕಾಲದಲ್ಲಿ ಸಹಾಯ ಮಾಡದಿದ್ದಲ್ಲಿ ಸಾರಿಗೆ ಉದ್ಯಮ ನಶಿಸಿ ಹೋಗಿ ಉದ್ಯಮವನ್ನು ನಂಬಿ ಬದುಕುವ ಕುಟುಂಬಗಳು ಬೀದಿ ಪಾಲಾಗುವ ಸಾದ್ಯತೆ ಇರುವುದರಿಂದ ಕೇಂದ್ರ ರಾಜ್ಯ ಸರಕಾರಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಉಡುಪಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love