ಕೋವಿಡ್‌–19: ಆರೋಗ್ಯ ಸಮಸ್ಯೆ; ಮಾಹಿತಿ ಹಂಚಿಕೊಳ್ಳಿ – ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್

Spread the love

ಕೋವಿಡ್‌–19: ಆರೋಗ್ಯ ಸಮಸ್ಯೆ; ಮಾಹಿತಿ ಹಂಚಿಕೊಳ್ಳಿ – ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್‌–19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ನಿರಂತರವಾಗಿ ಶ್ರಮಿಸುತ್ತಿದ್ದು, ಜಿಲ್ಲೆಯ ಸಾರ್ವಜನಿಕರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಫೆಬ್ರುವರಿಯಿಂದಲೇ ಆರೋಗ್ಯ ಇಲಾಖೆಯ ಸಹಯೋಗ ದೊಂದಿಗೆ ಕೋವಿಡ್ –19 ನಿಯಂತ್ರಣಕ್ಕಾಗಿ ನಿರಂತರವಾಗಿ ಕ್ರಮ ಕೈಗೊಳ್ಳಳಾಗುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿದೇಶಿ ಪ್ರಯಾಣದ ಇತಿಹಾಸ ಹೊಂದಿರುವ ಪ್ರತಿಯೊಂದು ಮನೆಯ ಮಾಹಿತಿಯನ್ನು ಕಲೆ ಹಾಕಿ, ಹೋಂ ಕ್ವಾರಂಟೈನ್‌ನಲ್ಲಿ ಇರುವವರನ್ನು ಸಂಪರ್ಕಿಸಿ, ಅವರ ಆರೋಗ್ಯ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸಾರ್ವಜನಿಕರೂ ತಾವು ವಿದೇಶ ಪ್ರಯಾಣ ಮಾಡಿದ್ದಲ್ಲಿ ಅಥವಾ ತಮಗೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದಲ್ಲಿ ನೇರವಾಗಿ ಹತ್ತಿರದ ಫೀವರ್ ಕ್ಲಿನಿಕ್‌ ಸಂಪರ್ಕಿಸಬೇಕು. ಕೋವಿಡ್–19 ಪರೀಕ್ಷೆಗೊಳಪಡಿಸುವ ಅಥವಾ ಗೃಹ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿ ಇರುವ ಭಯದಿಂದ ಅಥವಾ ಸಂಕೋಚದಿಂದ ತಮ್ಮ ಆರೋಗ್ಯದ ವಿಷಯದ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ಅಧಿಕಾರಿಗಳೊಂದಿಗೆ ತಮ್ಮ ಮಾಹಿತಿ ಹಂಚಿಕೊಳ್ಳದಿರುವುದು ತೀರಾ ವಿಷಾದನೀಯ ಎಂದು ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳೂ ಜ್ವರ, ಉಸಿರಾಟದ ತೊಂದರೆ ಇರುವಂತಹ ರೋಗಿಗಳ ಬಗ್ಗೆ ಮಾಹಿತಿ ನೀಡಲು ಕೋರಲಾಗಿದೆ. ಅದಾಗ್ಯೂ ಸಹ, ಕೆಲವರು ಈ ವಿಷಯ ವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುವುದಿಲ್ಲ ಎಂದಿದ್ದಾರೆ.

ಈವರೆಗೆ ಪರೀಕ್ಷೆಗೆ ಒಳಪಟ್ಟಿರುವ ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಜಿಲ್ಲಾಡಳಿತದಿಂದ ಬಹಿರಂಗಪಡಿಸಿಲ್ಲ. ಸೋಂಕಿತ ಕೋವಿಡ್–19 ರೋಗಿಗಳ ಸಂಖ್ಯೆಗಳ ಮಾಹಿತಿಯನ್ನು ಮಾತ್ರ ಸಾರ್ವಜನಿಕರ ಮಾಹಿತಿಗಾಗಿ ನೀಡಲಾಗುತ್ತಿದೆ. ಇದು ಸಹ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಕ್ಕಾಗಿ ನೀಡುವ ಮಾಹಿತಿ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರು ಯಾವುದೇ ಸಂಕೋಚ ಪಡದೇ, ತಮ್ಮ ಕುಟುಂಬದ ಹಾಗೂ ಇತರರ ರಕ್ಷಣೆಗಾಗಿ, ಜನವರಿಯಿಂದ ವಿದೇಶದಿಂದ ಜಿಲ್ಲೆಗೆ ಬಂದಿರುವ ಬಗ್ಗೆ ಮಾಹಿತಿಯನ್ನು ನೀಡುವುದು ಸೂಕ್ತ. ಅಲ್ಲದೇ ತಮ್ಮ ಕುಟುಂಬದಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದಲ್ಲಿ ಕೂಡಲೇ ಸರ್ಕಾರಿ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು. ಅಥವಾ 1077 ಇಲ್ಲಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.


Spread the love