ಕೋವಿಡ್: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕಾದಿರಿಸಲು ಸಂಸದ ನಳಿನ್  ಸೂಚನೆ

Spread the love

ಕೋವಿಡ್: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕಾದಿರಿಸಲು ಸಂಸದ ನಳಿನ್  ಸೂಚನೆ

ಮಂಗಳೂರು : ಕೊರೊನಾ ರೋಗಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ವೆನ್‍ಲಾಕ್ ಸಾಮಥ್ರ್ಯ ಮೀರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಖಾಸಗೀ ಆಸ್ಪತ್ರೆಗಳಲ್ಲೂ ಹೆಚ್ಚುವರಿ ಬೆಡ್‍ಗಳನ್ನು ಕಾದಿರಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಆರೋಗ್ಯ ಇಲಾಖೆಗೆ ತಿಳಿಸಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೊರೋನಾ ರೋಗವು ವ್ಯಾಪಕವಾಗಿದ್ದು, ಈ ಸಂಧರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯ ಅನುಸಾರ ನಿವೃತ್ತಿ ಹೊಂದಿದ ಎಮ್.ಬಿ.ಬಿ.ಎಸ್ ಅಥವಾ ಆಯುಷ್ ವೈದ್ಯಾಧಿಕಾರಿಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ನರ್ಸಿಂಗ್ ಸಿಬ್ಬಂದಿಗಳ ಕೊರತೆಯಾದರೆ ಖಾಸಗೀ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳುವಂತೆ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ ಜೊತೆ ನೇರ ಸಂಪರ್ಕದಲ್ಲಿದ್ದು, ಕೊರೊನಾ ರೋಗಿಯ ಸ್ಥಿತಿಗತಿಯ ಬಗ್ಗೆ ಪ್ರತಿ ರೋಗಿಯ ಮಾಹಿತಿಯನ್ನು ನೀಡಬೇಕು. ಆಸ್ಪತ್ರೆಗಳಲ್ಲಿ ಅಂಬ್ಯುಲೆನ್ಸ್ ಅಭಾವ ಉಂಟಾಗದಂತೆ ನೋಡಿಕೊಂಡು ಅಗತ್ಯ ಇದ್ದರೆ ಮೆಡಿಕಲ್ ಕಾಲೇಜುಗಳಿಂದ ಬಾಡಿಗೆಗೆ ಹೆಚ್ಚುವರಿ ಅಂಬ್ಯುಲೆನ್ಸ್ ಪಡೆದುಕೊಳ್ಳಬೇಕು ಎಂದರು.

ಮನೆಯಲ್ಲಿರುವ ವ್ಯಕ್ತಿಗಳಿಗೆ ಜ್ವರದ ಲಕ್ಷಣ ಕಾಣಿಸಿಕೊಂಡರೆ ಆ ರೋಗಿಯನ್ನು ತಕ್ಷಣ ಆಶಾಕಾರ್ಯಕರ್ತೆಯರು ಗುರುತಿಸಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಹೇಳಿದರು. ಕೊರೊನಾ ರೋಗಿಯ ಶವಸಂಸ್ಕಾರವನ್ನು ಮಾಡುವಾಗ ಸರ್ಕಾರದ ಮಾರ್ಗಸೂಚಿಯಂತೆ ಪಿ.ಪಿ.ಟಿ ಕಿಟ್ ಧರಿಸಿರುವ, ಸಂಬಂಧಪಟ್ಟ ಸಿಬ್ಬಂದಿಗಳು ಮಾತ್ರ ಪಾಲ್ಗೊಳ್ಳಬೇಕು. ಅನ್ಯ ವ್ಯಕ್ತಿಗಳಿಗೆ ಅಲ್ಲಿ ಹಾಜರಿರಲು ಅವಕಾಶ ನೀಡಬಾರದು, ಅಂತವರ ವಿರುದ್ಧ ಕೇಸು ದಾಖಲಿಸಲು ನಳಿನ್ ಕುಮಾರ್ ಕಟೀಲು ಸೂಚಿಸಿದರು. ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಇನ್ನಿತರ ಸಿಬ್ಬಂದಿಗಳಿಗೆ ತರಬೇತಿ ನೀಡಿದರೆ ಉತ್ತಮ ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮತ್ತಿತರರು ಉಪಸ್ಥಿತರಿದ್ದರು.


Spread the love