ವೆನ್‍ ಲಾಕ್ – ಲೇಡಿಗೋಷನ್ ಆಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

Spread the love

ವೆನ್‍ ಲಾಕ್ – ಲೇಡಿಗೋಷನ್ ಆಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಮಂಗಳೂರು : ಮಂಗಳೂರು ಸ್ಮಾರ್ಟ್‍ಸಿಟಿ ಅನುದಾನದಲ್ಲಿ ಜಿಲ್ಲಾ ವೆನ್‍ಲಾಕ್ ಹಾಗೂ ಲೇಡಿಘೋಷನ್ ಆಸ್ಪತ್ರೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಚಿವರು ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ವೆನ್‍ಲಾಕ್ ಹಾಗೂ ಲೇಡಿಘೋಷನ್ ಆಸ್ಪತ್ರೆಗಳು ಮಹತ್ವದ ಸೇವೆಯನ್ನು ನೀಡುತ್ತಿವೆ. ಜನಸಾಮಾನ್ಯರ ಆಶಾಕಿರಣವಾಗಿರುವ ಈ ಆಸ್ಪತ್ರೆಗಳ ಅಭಿವೃದ್ಧಿಯು ಸಾರ್ವಜನಿಕರಿಗೆ ಸರಕಾರವು ನೀಡುತ್ತಿರುವ ದೊಡ್ಡ ಕೊಡುಗೆಯಾಗಿದೆ ಎಂದರು.

ಸ್ಮಾರ್ಟ್‍ಸಿಟಿ ಮೂಲಕ ಮಂಗಳೂರು ನಗರದಲ್ಲಿ ಸುಮಾರು ಒಂದು ಸಾವಿರ ಕೋಟಿ ರೂ. ಗಳಿಗೂ ಅಧೀಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಮಂಗಳೂರಿನಲ್ಲಿ ನಡೆಯುತ್ತಿವೆ. ನಗರದ ಪ್ರಗತಿಯ ದೂರದೃಷ್ಠಿಗೆ ಇದು ಮಹತ್ವವಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸ್ಮಾರ್ಟ್‍ಸಿಟಿಯಿಂದ ವೆನ್‍ಲಾಕ್ ಮತ್ತು ಲೇಡಿಘೋಷನ್ ಆಸ್ಪತ್ರೆಯ ಅಭಿವೃದ್ಧಿಗೆ ಸುಮಾರು ರೂ. 50 ಕೋಟಿಗಳಿಗೂ ಅಧಿಕ ಮೊತ್ತ ವೆಚ್ಚ ಮಾಡಲಾಗುತ್ತಿದೆ. ಈ ಆಸ್ಪತ್ರೆಗಳು ಹಲವು ವರ್ಷಗಳಿಂದ ಎದುರಿಸುತ್ತಿದ್ದ ಮೂಲಭೂತ ಸೌಲಭ್ಯಗಳ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಮಂಗಳೂರು ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಮಾತನಾಡಿ, ರೂ. 5.83 ಕೋಟಿ ವೆಚ್ಚದಲ್ಲಿ ವೆನ್‍ಲಾಕ್ ಆಸ್ಪತ್ರೆಯ ಆವರಣದ ಸಮಗ್ರ ಅಭಿವೃದ್ಧಿ ಹಾಗೂ ರೂ. 2.31 ಕೋಟಿ ವೆಚ್ಚದಲ್ಲಿ ಲೇಡಿಘೋಷನ್ ಆಸ್ಪತ್ರೆಯ ಆವರಣದಲ್ಲಿ ಎರಡನೇ ಮಹಡಿ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದರು.

ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಮೇಯರ್ ದಿವಾಕರ್, ಉಪಮೇಯರ್ ವೇದಾವತಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ ಮತ್ತಿತರರು ಇದ್ದರು.


Spread the love