ಕೋವಿಡ್ -19: ಮುಂದಿನ 14 ದಿನಗಳಿಗೆ ಕಂಪ್ಲೀಟ್ ಸೀಲ್ ಡೌನ್ ಆದ ಉಡುಪಿ ಜಿಲ್ಲೆಯ ಗಡಿಗಳು

Spread the love

ಕೋವಿಡ್ -19: ಮುಂದಿನ 14 ದಿನಗಳಿಗೆ ಕಂಪ್ಲೀಟ್ ಸೀಲ್ ಡೌನ್ ಆದ ಉಡುಪಿ ಜಿಲ್ಲೆಯ ಗಡಿಗಳು

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 (ಕೋರೋನ ವೈರಾಣು ಕಾಯಿಲೆ 2019)ರ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜುಲೈ 15 ರ ಸಂಜೆ 8 ರಿಂದ ಜುಲೈ 29 ರ ವರೆಗಿನ 14 ದಿನಗಳ ಜಿಲ್ಲಾ ಗಡಿಗಳ ಸೀಲ್ ಡೌನ್ ಗುರುವಾರದಿಂದ ಕಟ್ಟುನಿಟ್ಟಿನಿಂದ ಜಾರಿಯಾಗಿದೆ.

ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಗಡಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದ್ದು ಹೊರ ಜಿಲ್ಲೆಯ ವಾಹನಗಳಿಗೆ ಜಿಲ್ಲೆಯ ಒಳಗಡೆ ಬರುವುದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಜಿಲ್ಲೆಯಲ್ಲಿ ಮುಂದಿನ 14 ದಿನಗಳ ಕಾಲ ಕಾಲ ಕಟ್ಟುನಿಟ್ಟಿನ ಸೀಲ್ ಡೌನ್ ಜಾರಿಯಲ್ಲಿ ಇರಲಿದ್ದು ಸರಕು ಸಾಗಣೆ, ಅಗತ್ಯ ವಸ್ತುಗಳ ಪೂರೈಕೆ, ತುರ್ತು ಸೇವಾ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಗಡಿಗಳಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದು ಹೊರ ಜಿಲ್ಲೆಯ ವಾಹನಗಳನ್ನು ವಾಪಾಸು ಕಳುಹಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಕಂಟೈನ್ಮೆಂಟ್ ವಲಯದಲ್ಲಿ ಸಂಪೂರ್ಣ ಲಾಕ್ ಡೌನ್ ಪ್ರಕ್ರಿಯೆನ್ನು ಜಾರಿಗೆ ಗೊಳಿಸಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ.

ಸೀಲ್ ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಬಸ್ ಸಂಚಾರ ನಿಷೇಧಿಸಿದ್ದು, ಸಂತೆ ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ ಸಭೆ, ಸಮಾರಂಭಗಳು ನಡೆಸಲು ಅವಕಾಶವಿಲ್ಲ. ಸಾರ್ವಜನಿಕವಾಗಿ ಹಬ್ಬ, ಆಚರಣೆಗಳು ಇರುವುದಿಲ್ಲ, ಪೂರ್ವ ನಿರ್ಧರಿತ ಮದುವೆ ಸಮಾರಂಭಗಳು ಸಂಬಂಧಿತ ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಪಡೆದು 50 ಜನಕ್ಕೆ ಮೀರದಂತೆ ನಡೆಸಬಹುದಾಗಿದೆ. ಸರ್ಕಾರಿ ಆದೇಶದಂತೆ ಅಂತ್ಯಸಂಸ್ಕಾರದಲ್ಲಿ 20 ಜನರು ಭಾಗವಹಿಸಬಹುದು.

ದೇವಸ್ಥಾನ, ಚರ್ಚ್, ಮಸೀದಿಗಳನ್ನು ಸಾರ್ವಜನಿಕ ದರ್ಶನಕ್ಕೆ ಮಾತ್ರ ಸೀಮಿತವಾಗಿದೆ. ಈ ಸಮಯದಲ್ಲಿ ಒಮ್ಮೆಗೆ ಅರ್ಚಕ/ ಮೌಲಿಗಳು/ ಧರ್ಮಗುರುಗಳು/ ಭಕ್ತಾಧಿಗಳು ಸೇರಿ 20 ಜನರಿಗಿಂತ ಜಾಸ್ತಿ ಇರತಕ್ಕದಲ್ಲ. ಯಾವುದೇ ವಿಶೇಷ ಪೂಜೆಗಳು/ ಧಾರ್ಮಿಕ ಆಚರಣೆಗಳು ಇರುವುದಿಲ್ಲ.

ಸರಕಾರದ ಆದೇಶದಂತೆ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ಇರಲಿದ್ದು, ಕೇವಲ ಮೆಡಿಕಲ್, ಕ್ಲಿನಿಕಲ್ ಲ್ಯಾಬ್ ಆಸ್ಪತ್ರೆ, ಹಾಲು ದಿನಪತ್ರಿಕೆ ಮಾರಾಟಕ್ಕೆ ನಿರ್ಬಂಧವಿರುವುದಿಲ್ಲ. ಹೋಟೇಲ್ ಗಳಿಂದ ಪಾರ್ಸೆಲ್ ಗಳಿಗೆ ಫುಡ್ ಡೆಲಿವರಿಗೆ ಅವಕಾಶವಿದೆ. ಅಗತ್ಯ ಸರಕು ಸರಂಜಾಂಮುಗಳೀಗೆ ಯಾವುದೇ ನಿರ್ಬಂಧವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


Spread the love