ಕ್ರೀಡಾ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಳ್ಳಿ: ವಿದ್ಯಾರ್ಥಿಗಳಿಗೆ ಉಪನಿರ್ದೇಶಕ ಮಾರುತಿ ಕರೆ

Spread the love

ಕ್ರೀಡಾ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಳ್ಳಿ: ವಿದ್ಯಾರ್ಥಿಗಳಿಗೆ ಉಪನಿರ್ದೇಶಕ ಮಾರುತಿ ಕರೆ

ಕುಂದಾಪುರ: ಬಹುತೇಕ ಶಿಕ್ಷಣ ಸಂಸ್ಥೆಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಒತ್ತು ಕೊಟ್ಟು ಅಂಕಗಳಿಗೆ ಮಾತ್ರವೇ ಶ್ರಮಿಸುತ್ತಿವೆ. ವಿದ್ಯಾರ್ಥಿ ದಿಸೆಯಲ್ಲೇ ಶಿಕ್ಷಣದ ಜೊತೆಗೆ ಕ್ರೀಡೆಗೂ ಒತ್ತು ಕೊಡಬೇಕು. ಕ್ರೀಡೆಗೆ ಮೀಸಲಾತಿಯನ್ನು ತರಲಾಗಿದ್ದು, ಈ ಅವಕಾಶವನ್ನು ತಾವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶನಿವಾರ ಹೆಮ್ಮಾಡಿಯಲ್ಲಿ ಜರುಗಿದ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಿಂದ ನಮಗೆ ಸಾಕಷ್ಟು ಅನುಕೂಲಗಳಿವೆ. ಸಮಾಜದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕಲು, ನಾಯಕತ್ವ ಬೆಳವಣಿಗೆಗೆ, ದೇಹ ಸದೃಢವಾಗಿ ಮಾನಸಿಕವಾಗಿ ಸಬಲರಾಗಲು, ಪ್ರಮಾಣಿಕತೆ, ನೈತಿಕತೆ, ಸಮಯಪ್ರಜ್ಞೆ, ಶಿಸ್ತು, ನಿಯಮಪಾಲನೆ, ಇತರರನ್ನು ಗೌರವಿಸುವಂತಹ ಗುಣಗಳನ್ನು ಮೈಗೂಡಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಈಜುಪಟು ನಾಗರಾಜ್ ಖಾರ್ವಿ ಕಂಚುಗೋಡು, ಶಿಕ್ಷಣವೆನ್ನುವುದು ನಗರ ಕೇಂದ್ರಿಕೃತವಾಗಿ ಬೆಳೆಯುತ್ತಿರುವ ಇಂದಿನ ಕಾಲಮಾನದಲ್ಲಿ ಗ್ರಾಮೀಣ ಭಾಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಈ ಮೂರು ವಿಭಾಗದಲ್ಲಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜನತಾ ವಿದ್ಯಾಸಂಸ್ಥೆ ಮಾಡಿರುವ ಸಾಧನೆ ಗಮನಾರ್ಹ ಎಂದರು.

ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷ ಕ್ರೀಡಾ ವಿಭಾಗದಲ್ಲಿ ಜನತಾ ಕಾಲೇಜಿನ 41 ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ, 5 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಅಂಕಗಳು ಮಾತ್ರವೇ ಮಾನದಂಡವಲ್ಲ. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗೆ ನಾವು ಅವಕಾಶಗಳನ್ನು ಕೊಡಬೇಕು. ಅದನ್ನು ಜನತಾ ವೊದ್ಯಾಸಂಸ್ಥೆ ಮಾಡುತ್ತಿದೆ. ಶಿಕ್ಷಣಕ್ಕೆ ಪೂರಕವಾಗಿ ಕ್ರೀಡೆ, ಸಾಂಸ್ಕೃತಿಕ ವಿಭಾಗಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಾಗ ಮಾತ್ರ ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ದಿ ಸಾಧ್ಯ. ಕಳೆದ ಬಾರಿ 35 ವಿದ್ಯಾರ್ಥಿಗಳು ಜಿಲ್ಲೆಯಿಂದ ರಾಷ್ಟ್ರಮಟ್ಟವನ್ನು ತಲುಪಿದ್ದರು. ಆದರೆ ಈ ಬಾರಿ ಅದರ ದುಪ್ಪಟ್ಟು ವಿದ್ಯಾರ್ಥಿಗಳು ರಾಷ್ಟ್ರಮಟ್ಟವನ್ನು ತಲುಪಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಹೊಸ್ಮಠ ಮಾತನಾಡಿದರು.

ತಾಲೂಕು ಕ್ರೀಡಾ ಸಂಯೋಜಕ ರಾಮ ಶೆಟ್ಟಿ, ಜನತಾ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಜಗದೀಶ್ ಶೆಟ್ಟಿ, ಉಪಪ್ರಾಂಶುಪಾಲ ರಮೇಶ್ ಪೂಜಾರಿ ಉಪಸ್ಥಿತರಿದ್ದರು.

ನಾಗ ಶ್ವೇತಾ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಉಮೇಶ್ ನಾಯ್ಕ್ ಸರ್ಪನಕಟ್ಟೆ ವಂದಿಸಿದರು. ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments