ಕ್ರೈಸ್ತರಿಗೆ ಸ್ಮಶಾನ ಎರಡನೇ ಪವಿತ್ರ ಸ್ಥಳ – ಬಿಷಪ್ ಜೆರಾಲ್ಡ್ ಲೋಬೊ

Spread the love

ಕ್ರೈಸ್ತರಿಗೆ ಸ್ಮಶಾನ ಎರಡನೇ ಪವಿತ್ರ ಸ್ಥಳ – ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಕ್ರೈಸ್ತರಿಗೆ ಚರ್ಚು ಪ್ರಥಮ ಪವಿತ್ರ ಸ್ಥಳವಾದರೆ ಸ್ಮಶಾನ ಎರಡನೇ ಪವಿತ್ರ ಸ್ಥಳವಾಗಿದೆ ಕಾರಣ ಇಲ್ಲಿ ಪ್ರತಿಯೊಬ್ಬರ ಕುಟುಂಬದ ಬಂಧು ಮಿತ್ರರನ್ನು ಸಮಾಧಿ ಮಾಡಿದ್ದು ಪ್ರತಿನಿತ್ಯ ಅವರಿಗಾಗಿ ಪ್ರಾರ್ಥನೆ ಸಲ್ಲಿಸಲು ನಾವು ಬರುವುದು ವಾಡಿಕೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಶನಿವಾರ ಕಟಪಾಡಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಚರ್ಚಿನಲ್ಲಿ ನವೀಕರಿಸಲ್ಪಟ್ಟ ಸ್ಮಶಾನದ ಉದ್ಘಾಟನೆ ಮತ್ತು ಆಶೀರ್ವಚನ ನಡೆಸಿ ಮಾತನಾಡಿದರು.

ಪರದೇಶಗಳಲ್ಲಿ ಸಮಾಧಿಗಳನ್ನು ಹೂದೋಟದೊಂದಿಗೆ ಸುಂದರವಾಗಿ ನಿರ್ವಹಣೆ ಮಾಡುವ ಪದ್ದತಿ ಇದ್ದು ಅದೇ ಪದ್ದತಿ ನಮ್ಮ ಧರ್ಮಪ್ರಾಂತ್ಯದಲ್ಲಿ ನಡೆಯುತ್ತಿದೆ. ಸಮಾಧಿ ಸ್ಥಳದಲ್ಲಿ ಶುಚಿತ್ವ ಹಾಗೂ ಪಾವಿತ್ರ್ಯತೆಯನ್ನು ಕಾಪಾಡುವುದು ಅಗತ್ಯ ಎಂದು ಅವರು ಹೇಳಿದರು.

ಉದ್ಘಾಟನೆ ಹಾಗೂ ಶುದ್ದೀಕರಣದ ಮುನ್ನ ಧರ್ಮಾಧ್ಯಕ್ಷರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿ ಮೃತ ಆತ್ಮಗಳಿಗೆ ಶೃದ್ಧಾಂಜಲಿ ಕೋರಲಾಯಿತು.

ದಿ|ಆಲ್ಬರ್ಟ್ ಪಿರೇರಾ ಹಾಗೂ ಹಿಲಾರಿ ಪಿಂಟೊ ದುಬಾಯಿ ಇವರ ಉದಾರ ಸ್ಥಳದ ದಾನದಿಂದ ಹಾಗೂ ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ನಿಗಮ ಹಾಗೂ ಇತರ ದಾನಿಗಳಿಂದ ರುದ್ರಭೂಮಿಯ ನವೀಕರಣ ಹಾಗೂ ಪುನರ್ ರಚನೆ ನಡೆದಿದ್ದು ದಾನಿಗಳ ಉದಾರ ಸೇವೆಯನ್ನು ಕೊಂಡಾಡಿದರು.

ಚರ್ಚಿನ ಧರ್ಮಗುರುಗಳಾದ ವಂ|ರೋನ್ಸನ್ ಡಿಸೋಜಾ ಅವರು ನವೀಕರಣಕ್ಕೆ ನೆರವು ನೀಡಿದ ಕರ್ನಾಟಕ ಸರಕಾರಕ್ಕೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಸ್ವಾಗತಿಸಿದರು.

ಸಮಾರಂಭದಲ್ಲಿ ನವೀಕರಣ ಯೋಜನೆಯ ಎಂಜಿನಿಯರ್ ಎಲ್ಯಾಸ್ ಡಿಸೋಜಾ, ಮೇಲ್ವಿಚಾರಕ ಲಿಂಗಪ್ಪ ಭೀಮಪ್ಪ ಜಮಖಂಡಿ ಹಾಗೂ ಶಶಿಧರ್ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಚರ್ಚಿನ ಪಾಲನ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಸುವಾರಿಸ್, ಕಾರ್ಯದರ್ಶಿ ಕ್ಯಾಥರಿನ್ ರೊಡ್ರಿಗಸ್, 18 ಆಯೋಗಗಳ ಸಂಚಾಲಕ ವಿಲ್ಫ್ರೇಡ್ ಲೂವಿಸ್ ಉಪಸ್ಥಿತರಿದ್ದರು.


Spread the love