ಗಂಗೊಳ್ಳಿ ಅಗ್ನಿ ದುರಂತ ಅತ್ಯಂತ ದುರದೃಷ್ಟಕರ ಘಟನೆ: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ

Spread the love

ಗಂಗೊಳ್ಳಿ ಅಗ್ನಿ ದುರಂತ ಅತ್ಯಂತ ದುರದೃಷ್ಟಕರ ಘಟನೆ: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ

ಕುಂದಾಪುರ: ಗಂಗೊಳ್ಳಿಯಲ್ಲಿ ನಡೆದ ಅಗ್ನಿ ದುರಂತಕ್ಕೆ ಅನೇಕ ಬೋಟುಗಳ, ಬಲೆ ಮತ್ತಿತರ ಸಾಮಾಗ್ರಿಗಳು ಸುಟ್ಟು ಹೋಗಿ ಅಪಾರ ನಷ್ಟವಾಗಿದೆ. ಇಲ್ಲಿನ ವಾಸ್ತವ ಸ್ಥಿತಿಯನ್ನು ಮುಖ್ಯಮಂತ್ರಿಗಳು ಹಾಗೂ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಗಂಗೊಳ್ಳಿಯಲ್ಲಿ ನಡೆದ ಅಗ್ನಿ ದುರಂತ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮೀನುಗಾರ ಮುಖಂಡರು ಮತ್ತು ನಷ್ಟಕ್ಕೆ ಒಳಗಾದ ಬೋಟ್ ಮಾಲೀಕರ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.

ಈ ದುರಂತದಲ್ಲಿ ನಷ್ಟಕ್ಕೆ ಒಳಗಾಗಿದ್ದನ್ನು ಇನ್ಸುರೆನ್ಸ್ ಕಂಪೆನಿಯಿಂದ ಪರಿಹಾರ ಹಣವನ್ನು ಯಾವ ರೀತಿ ಪಡೆದುಕೊಳ್ಳಲು ಸಾಧ್ಯ ಎಂಬುದರ ಬಗ್ಗೆ ಸಂಬಂಧಪಟ್ಟ ಇನ್ಸುರೆನಸ್ ಕಂಪೆನಿ ಜೊತೆ ಚರ್ಚೆ ನಡೆಸಲಾಗುವುದು. ಸರಕಾರದ ಮಟ್ಟದಲ್ಲಿ ಇಲಾಖೆಯಿಂದ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಥವಾ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ ಪರಿಹಾರವನ್ನು ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

ದೈನಂದಿನ ದಿನಗಳಲ್ಲಿ ಕಷ್ಟಕರ ಜೀವನ ನಡೆಸುತ್ತಿರುವ ಮೀನುಗಾರರು ಕಷ್ಟಪಟ್ಟು ದುಡಿಯುತ್ತಿರುವವರು ಅನೇಕ ಕುಟುಂಬಗಳು ಒಂದೇ ರಾತ್ರಿಯಲ್ಲಿ ಇವತ್ತು ನಿರ್ಗತಿಕರಾಗುವ ಪರಿಸ್ಥಿತಿಗೆ ಬಂದಿದ್ದಾರೆ. ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ಅವರ ಪರವಾಗಿ ನಿಲ್ಲಲಿದೆ. ಅವರ ಅಳಲನ್ನು ಕಾಂಗ್ರೆಸ್ ಪಕ್ಷದ ಮೂಲಕ ಸರಕಾರಕ್ಕೆ ಮುಟ್ಟಿಸುವ ಕೆಲಸವನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ಅಗ್ನಿಶಾಮಕ ವ್ಯವಸ್ಥೆ ಇಲ್ಲದಿರುವುದರಿಂದ ಅನಾಹುತಕ್ಕೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಗೃಹ ಸಚಿವರ ಬಳಿ ಕೂಲಂಕೂಷವಾಗಿ ಮಾತನಾಡಿ ಇಲ್ಲಿಗೆ ತಾತ್ಕಾಲಿಕವಾಗಿಯಾದರೂ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಅಗ್ನಿಶಾಮಕ ಘಟಕ ಸ್ಥಾಪನೆ ಮಾಡುವ ನಿರ್ಧಾರ ಕೈಗೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು. ಈ ಘಟನೆ ನಮಗೆ ಪಾಠ. ಇದನ್ನು ಪುನರಾವರ್ತನೆ ಮಾಡಲು ಬಿಡುದಿಲ್ಲ. ಸುರಕ್ಷತೆಯ ದೃಷ್ಠಿಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಸ್ಥಳೀಯ ಮೀನುಗಾರ ಸಂಘಟನೆಗಳ ಜೊತೆ ಮಾತನಾಡಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲು ಸೂಚನೆ ನೀಡಲಾಗುವುದು ಎಂದು ಹೇಳಿದ ಅವರು, ಪರಿಹಾರ ನೀಡಲು ಕೆಲವೊಂದು ತಾಂತ್ರಿಕ ಅಡಚಣೆಗಳಿದ್ದರೂ, ಅದನ್ನು ದಾಟಿ ಯಾವ ರೀತಿ ಪರಿಹಾರ ನೀಡಲು ಸಾಧ್ಯ ಎಂಬುದನ್ನು ಚರ್ಚೆ ಮಾಡಿ ಗರಿಷ್ಠ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಕೊಡವೂರು, ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ದಿನೇಶ ಹೆಗ್ಡೆ ಮೊಳಹಳ್ಳಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಬಾಬು ಹೆಗ್ಡೆ, ಸಂಪಿಗೇಡಿ ಸಂಜೀವ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ವಂಡ್ಸೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ, ಸದಾಶಿವ ಶೆಟ್ಟಿ, ಮಂಜುಳಾ ದೇವಾಡಿಗ, ಉದಯ ಜಿ.ಪೂಜಾರಿ, ದುರ್ಗರಾಜ್ ಪೂಜಾರಿ, ಗಣೇಶ ಖಾರ್ವಿ, ಸುರೇಂದ್ರ ಖಾರ್ವಿ, ಮುಜಾಹೀದ್ ಮೊದಲಾದವರು ಉಪಸ್ಥಿತರಿದ್ದರು.


Spread the love