ಗಾಂಜಾ, ಡ್ರಗ್ಸ್ ವ್ಯಸನ: ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾನೂನು ಅರಿವು- ಜಿಲ್ಲಾ ನ್ಯಾಯಾಧೀಶರು ಕಡ್ಲೂರು ಸತ್ಯನಾರಾಯಣಾಚಾರ್ಯ

Spread the love

ಗಾಂಜಾ, ಡ್ರಗ್ಸ್ ವ್ಯಸನ: ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾನೂನು ಅರಿವು- ಜಿಲ್ಲಾ ನ್ಯಾಯಾಧೀಶರು ಕಡ್ಲೂರು ಸತ್ಯನಾರಾಯಣಾಚಾರ್ಯ 

ಮಂಗಳೂರು: ಗಾಂಜಾ, ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗದಂತೆ ಜಿಲ್ಲೆಯ ವೃತ್ತಿಪರ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಅರಿವು ಮೂಡಿಸುವ ಕಾರ್ಯವನ್ನು ನಡೆಸಲಾಗುವುದು ಎಂದು ದ.ಕ. ಪ್ರಧಾನ ಜಿಲ್ಲಾ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ತಿಳಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕ್ರಿಯಾಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಯುವಜನರು ಮಾದಕ ವಸ್ತುಗಳ ಚಟಕ್ಕೆ ದಾಸರಾಗುತ್ತಿರುವ ಪ್ರಕರಣಗಳು ಹೆಚ್ಚುತಿರುವುವುದು ಕಳವಳಕಾರಿಯಾಗಿದೆ. ಇದರಿಂದ ಜಿಲ್ಲೆಯ ಶೈಕ್ಷಣಿಕ ಖ್ಯಾತಿಗೆ ಕಳಂಕ ಬರಲಿದ್ದು, ಹೊರ ಜಿಲ್ಲೆ, ರಾಜ್ಯಗಳಿಂದ ಪಾಲಕರು ತಮ್ಮ ಮಕ್ಕಳನ್ನು ಜಿಲ್ಲೆಗೆ ಶಿಕ್ಷಣಕ್ಕೆ ಕಳಿಸಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಣ ಸಂಸ್ಥೆಗಳು, ಪಾಲಕರು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್, ಗಾಂಜಾ ಪ್ರಕರಣಗಳನ್ನು ಪೊಲೀಸ್ ಇಲಾಖೆಯು ಹಿಡಿಯುತ್ತಿರುವುದು ಶ್ಲಾಘನೀಯವಾಗಿದೆ. ಇದರೊಂದಿಗೆ ಇಂತಹ ಪ್ರಕರಣಗಳ ಆರೋಪಿಗಳ ಮೇಲೆ ನಿರಂತರ ನಿಗಾ ವಹಿಸಬೇಕು. ಒಮ್ಮೆ ಸಿಕ್ಕಿಬಿದ್ದವರು ಮತ್ತೆ ಅದೇ ಚಟ ಅಥವಾ ದಂಧೆಗೆ ಬೀಳುವಂತಾಗಬಾರದು. ಅವರ ಪಾಲಕರನ್ನು ಠಾಣೆಗೆ ಕರೆಸಿ ಹಿತವಚನ ಹೇಳಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಸೂಚಿಸಿದರು.

ಖಾಸಗೀ ಬಸ್ ಸಿಬ್ಬಂದಿಗಳಿಗೆ ಕಾನೂನು ಅರಿವು : ಜಿಲ್ಲೆಯಲ್ಲಿ ವಿಶೇಷವಾಗಿ ಮಂಗಳೂರು ನಗರದಲ್ಲಿ ಖಾಸಗೀ ಬಸ್ ಚಾಲಕ – ನಿರ್ವಾಹಕರ ವರ್ತನೆ ಹಾಗೂ ಸಂಚಾರ ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಬಗ್ಗೆ ಸಾರ್ವಜನಿರಿಂದ ವ್ಯಾಪಕ ದೂರುಗಳು ಬರುತ್ತಿವೆ. ಖಾಸಗೀ ಬಸ್‍ಗಳು ಸಂಚಾರ ನಿಯಮಗಳ ಉಲ್ಲಂಘಿಸಿ ಸಂಚರಿಸುವುದು ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಖಾಸಗೀ ಬಸ್ ಸಿಬ್ಬಂದಿಗಳಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ಆಯೋಜಿಸಲಾಗುವುದು ಎಂದು ಕಡ್ಲೂರು ಸತ್ಯಾನಾರಾಯಣಾಚಾರ್ಯ ತಿಳಿಸಿದರು.

ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೀತಪದ್ಧತಿ, ಮಗಳನ್ನು ಓದಿಸಿ ಮಗಳನ್ನು ರಕ್ಷಿಸಿ, ಎಚ್‍ಐವಿ ದಿನಾಚರಣೆ, ವಿಕಲಚೇತನರ ದಿನಾಚರಣೆ, ಮಾನವ ಹಕ್ಕುಗಳ ದಿನಾಚರಣೆ ಮತ್ತಿತರ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗುತ್ತಿದೆ. ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಪ್ರಮುಖ ಕಾನೂನು ಅಂಶಗಳ ಬಗ್ಗೆ ಮಂಗಳೂರು ನಗರದ ಅಪಾರ್ಟ್‍ಮೆಂಟ್, ಫ್ಲಾಟ್‍ಗಳಲ್ಲೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅದೇ ರೀತಿ ಮಂಗಳೂರು ಮಹಾನಗರಪಾಲಿಕೆಗೆ ಚುನಾಯಿತರಾದ ನೂತನ ಸದಸ್ಯರಿಗೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಮಕ್ಕಳಿಗೆ ಪ್ರತ್ಯೇಕ ವ್ಯಸನ ಮುಕ್ತ ಕೇಂದ್ರ : ಸಭೆಯಲ್ಲಿ ಉಪಸ್ಥಿತರಿದ್ದ ಪ್ರಜ್ಞಾ ಸಲಹಾ ಕೇಂದ್ರದ ಮುಖ್ಯಸ್ಥೆ ಡಾ. ಹಿಲ್ಡಾ ರಾಯಪ್ಪನ್ ಮಾತನಾಡಿ, ಮಾದಕ ವಸ್ತುಗಳಿಗೆ ದಾಸರಾದವರನ್ನು ವ್ಯಸನಮುಕ್ತಗೊಳಿಸಲು ಮಂಗಳೂರಿನಲ್ಲಿ ಪ್ರಸಕ್ತ ಪ್ರತ್ಯೇಕ ವ್ಯಸನ ಮುಕ್ತ ಕೇಂದ್ರವಿಲ್ಲ. ಕುಡಿತ ವ್ಯಸನ ಮುಕ್ತ ಕೇಂದ್ರದಲ್ಲಿಯೇ ಡ್ರಗ್ಸ್ ವ್ಯಸನಿಗಳನ್ನು ಸೇರಿಸಲಾಗುತ್ತದೆ. ಮದ್ಯಪಾನ ಹಾಗೂ ಮಾದಕ ವಸ್ತು ಎರಡೂ ಪ್ರತ್ಯೇಕ ವ್ಯಸನಗಳಾಗಿರುವುದರಿಂದ ಎರಡಕ್ಕೂ ಪ್ರತ್ಯೇಕ ವ್ಯಸನ ಮುಕ್ತ ಕೇಂದ್ರ ಸ್ಥಾಪಿಸಬೇಕು. ಅದರಲ್ಲೂ ಮಾದಕ ವಸ್ತುಗಳ ಚಟಕ್ಕೆ ಬಿದ್ದ ಹದಿಹರೆಯದವರನ್ನು, ಮಕ್ಕಳನ್ನು ವ್ಯಸನಮುಕ್ತಗೊಳಿಸಲು ಪ್ರತ್ಯೇಕವಾಗಿಯೇ ಮಕ್ಕಳ ಕೇಂದ್ರ ತೆರೆಯಬೇಕಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರ ಗಮನಕ್ಕೆ ತಂದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಗಂಗಾಧರ್, ವಿವಿಧ ಇಲಾಖೆಗಳ ಅಧಿಕಾರಿಗಳು, ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love