ಗೋವಾ ಮೀನು ಆಮದು ನಿಷೇಧ ತೆರವುಗೊಳಿಸಲು ಜಿಲ್ಲಾಡಳಿತ ಮಧ್ಯಪ್ರವೇಶಿಸಲಿ : ಯಶ್ ಪಾಲ್ ಸುವರ್ಣ

Spread the love

ಗೋವಾ ಮೀನು ಆಮದು ನಿಷೇಧ ತೆರವುಗೊಳಿಸಲು ಜಿಲ್ಲಾಡಳಿತ ಮಧ್ಯಪ್ರವೇಶಿಸಲಿ : ಯಶ್ ಪಾಲ್ ಸುವರ್ಣ

ಉಡುಪಿ: ಕರ್ನಾಟಕ ಕರಾವಳಿ ಸಹಿತ ವಿವಿಧ ರಾಜ್ಯಗಳ ಮೀನು ಆಮದು ನಿಷೇಧಿಸಿದ ಗೋವಾ ಕೂಡಲೇ ತನ್ನ ಈ ನಿಷೇಧವನ್ನು ಹಿಂಪಡೆಯಬೇಕೆಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ   ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಕರ್ನಾಟಕ ದ ಮೀನುಗಳ ಅಮದನ್ನು ಗೋವಾದ ಕೆಲವು ಮೀನು ವ್ಯಾಪಾರಸ್ಥರು ರಾಸಾಯನಿಕ ಬಳಕೆಯ ಕಾರಣ ನೀಡಿ ನಿಷೇಧಿಸಿದ್ದು, ಇದರಿಂದಾಗಿ ಕರಾವಳಿ ಕರ್ನಾಟಕದ ಮೀನುಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಈಗಾಗಲೇ ಮೀನಿಗೆ ಫಾರ್ಮಲಿನ್ ಸಿಂಪಡನೆಯ ಬಗ್ಗೆ ಹಲವು ಬಾರಿ ಸರಕಾರದ ಅಧಿಕೃತ ಲ್ಯಾಬ್ ಗಳಲ್ಲಿ ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿದಾಗ ಯಾವುದೇ ರೀತಿಯ ರಾಸಾಯನಿಕ ಪತ್ತೆಯಾಗಿಲ್ಲ ಹಾಗೂ ಮೀನು ಸೇವನೆಗೆ ಯೋಗ್ಯವಾಗಿದ್ದು ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದು ಆಹಾರ ಇಲಾಖೆಯ ಅಧಿಕಾರಿಗಳೇ ಮಾಧ್ಯಮಗಳಲ್ಲಿ ಮಾಹಿತಿ ನೀಡಿದ್ದಾರೆ.

ಕರಾವಳಿ ಭಾಗದ ಮೀನುಗಾರರು ಕಳೆದ ಹಲವು ದಶಕಗಳಿಂದ ಪ್ರಾಮಾಣಿಕವಾಗಿ ವ್ಯವಹಾರವನ್ನು ಗೋವಾ ಸಹಿತ ದೇಶದ ವಿವಿಧ ರಾಜ್ಯಗಳೊಂದಿಗೆ ನಡೆಸುತ್ತಿದ್ದು, ಈ ವರೆಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ನಡೆಯುತ್ತಿದ್ದ ವ್ಯವಹಾರ ಇದೀಗ ಗೋವಾ ರಾಜ್ಯದ ಕೆಲವು ಮೀನು ಮಾರಾಟಗಾರರು ತಮ್ಮ ಸ್ವಾರ್ಥಕ್ಕಾಗಿ ಮೀನಿನ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಲಾಭಗಳಿಸುವ ದುರಾಸೆಯಿಂದ ಈ ರಾಸಾಯನಿಕ ಬಳಕೆಯ ಸಬೂಬು ನೀಡಿ ಮೀನು ಆಮದು ನಿಷೇಧ ನೀತಿಯನ್ನು ಮುಂದುವರಿಸಲು ಒತ್ತಡ ಹೇರಿದೆ.

ಈ ನಿಷೇಧದಿಂದಾಗಿ ಮತ್ಸ್ಯೋದ್ಯಮದ ಕೋಟ್ಯಾಂತರ ರೂಪಾಯಿಗಳ ವ್ಯಾಪಾರ ವಹಿವಾಟು ಸ್ತಬ್ಧವಾಗಿದ್ದು ಈಗಾಗಲೇ ಮತ್ಸ್ಯಕ್ಷಾಮ, ಇಂಧನದ ಬೆಲೆ ಏರಿಕೆ ಹಾಗೂ ವಿವಿಧ ಸಮಸ್ಯೆಗಳನ್ನು ಅನುಭವಿಸಿರುವ ಮೀನುಗಾರರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

ಇದಲ್ಲದೆ ಗೋವಾ ಕಡಲ ತೀರದಲ್ಲಿ ಈ ಹಿಂದೆಯೂ ಕರ್ನಾಟಕದ ಮೀನುಗಾರರ ಮೇಲೆ ಸಾಕಷ್ಟು ರೀತಿಯ ಅನ್ಯಾಯಗಳು ನಡೆದಿದ್ದು ಇದನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ರಾಜ್ಯ ಸರಕಾರ ಸೋತಿದೆ. ಈ ಘಟನೆಗಳು ಹೀಗೆ ಮುಂದುವೆರೆದರೆ ಉಭಯ ರಾಜ್ಯಗಳ ನಡುವಿನ ಸಂಭಂಧ ಇನ್ನಷ್ಟು ಹದೆಗೆಡುವ ಸಾಧ್ಯತೆ ಇದೆ.

ಮೀನುಗಾರರ ಈ ಸಂಕಷ್ಟವನ್ನು ಮನಗಂಡು ಕೂಡಲೇ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love