ಚಾಂದಿನಿ ಸುಳ್ಯ ಪ್ರಕರಣದಲ್ಲಿ ಸರ್ಕಾರದಿಂದ ಪೂರ್ಣ ಸ್ಪಂದನೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಅಪರೂಪದ ಹೈಪರ್ ಐಜಿಇ ಸಿಂಡ್ರೋಮ್ ಕಾಯಿಲೆಗೆ ತುತ್ತಾಗಿದ್ದ ಚಾಂದಿನಿ ಸುಳ್ಯ ಅವರ ಚಿಕಿತ್ಸೆಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಒದಗಿಸಲಾಯಿತು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
“ಚಾಂದಿನಿ ಸುಳ್ಯ ಅವರು ನನ್ನ ಬಳಿ ತಮ್ಮ ಆರೋಗ್ಯ ಸಮಸ್ಯೆಯನ್ನು ವಿವರಿಸಿದಾಗ, ನಾನು ಸ್ವತಃ ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಮಾತನಾಡಿ ತಜ್ಞ ವೈದ್ಯರಿಂದ ಅಗತ್ಯ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದೆ. ನಂತರ ಅವರು ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹಣಕಾಸಿನ ನೆರವು ಕೋರಿ ಬಂದರು. ಈ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸಿಎಂ ಪರಿಹಾರ ನಿಧಿಯಿಂದ ₹4 ಲಕ್ಷ ನೆರವು ಒದಗಿಸಿದ್ದೆ.”
ಇದೇ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ, ಸರ್ಕಾರದ ಎಸ್.ಟಿ. ಕಲ್ಯಾಣ ನಿಧಿಯಿಂದ ₹9 ಲಕ್ಷ ಬಿಡುಗಡೆ ಮಾಡಲಾಗಿತ್ತೆಂದು ಅವರು ತಿಳಿಸಿದರು.
“ಹೆಚ್ಚಿನ ಚಿಕಿತ್ಸಾ ವೆಚ್ಚ ಭರಿಸಲು ₹50 ಲಕ್ಷ ಹಣಕಾಸಿನ ನೆರವು ನೀಡುವಂತೆ ಆರ್ಥಿಕ ಇಲಾಖೆಗೆ ಪ್ರತ್ಯೇಕ ಮನವಿ ಮಾಡಲಾಗಿತ್ತು. ಚಾಂದಿನಿಯವರ ಮನವಿಗಳಿಗೆ ಸರ್ಕಾರ ಸಂಪೂರ್ಣವಾಗಿ ಸ್ಪಂದಿಸಿತ್ತು,” ಎಂದು ಸಚಿವರು ಹೇಳಿದರು.
ಸಚಿವರು ಮುಂದುವರಿದು, “ಆರೋಗ್ಯ ಇಲಾಖೆಯ ಸಚಿವನಾಗಿ ನನ್ನ ಮೊದಲ ಆದ್ಯತೆ ರೋಗ ತಡೆಗಟ್ಟುವುದು ಹಾಗೂ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಒದಗಿಸುವುದು. ಉನ್ನತ ಮಟ್ಟದ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚು ಗಮನ ನೀಡುತ್ತದೆ. ಆದರೆ ನನ್ನ ಗಮನಕ್ಕೆ ಬಂದ ಯಾವುದೇ ಪ್ರಕರಣದಲ್ಲಿ ಸರ್ಕಾರದಿಂದ ಸಾಧ್ಯವಾದ ಎಲ್ಲಾ ರೀತಿಯ ನೆರವು ಕಲ್ಪಿಸಲು ನಾನು ಸದಾ ಸಿದ್ಧನಾಗಿದ್ದೇನೆ,” ಎಂದರು.
ಮಾಧ್ಯಮಗಳಿಗೆ ಮನವಿ ಮಾಡುತ್ತಾ ಅವರು ಹೇಳಿದರು: “ಮಾಧ್ಯಮಗಳು ವಾಸ್ತವ ನೆಲೆಗಟ್ಟಿನಲ್ಲಿ ವಿಚಾರಿಸಬೇಕು. ಸರ್ಕಾರ ಈ ಪ್ರಕರಣದಲ್ಲಿ ಸಂಪೂರ್ಣ ಸ್ಪಂದನೆ ತೋರಿಸಿದೆ.”
ಕೊನೆಯಲ್ಲಿ ಅವರು ಚಾಂದಿನಿ ಸುಳ್ಯ ಅವರ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿ, “ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಹೇಳಿದರು.