ಚಿಕ್ಕಮಗಳೂರು: ವಕೀಲನ ಮೇಲೆ ಹಲ್ಲೆ ಪ್ರಕರಣಕ್ಕೆ ತಿರುವು –  ಪೊಲೀಸರ ಪ್ರತಿಭಟನೆ

Spread the love

ಚಿಕ್ಕಮಗಳೂರು: ವಕೀಲನ ಮೇಲೆ ಹಲ್ಲೆ ಪ್ರಕರಣಕ್ಕೆ ತಿರುವು –  ಪೊಲೀಸರ ಪ್ರತಿಭಟನೆ

ಚಿಕ್ಕಮಗಳೂರು: ವಕೀಲ ಪ್ರೀತಮ್ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಶನಿವಾರ ರಾತ್ರಿ ಪೊಲೀಸರೇ ಪ್ರತಿಭಟನೆಗೆ ಇಳಿದಿದ್ದು, ‘ನಮಗೂ ನ್ಯಾಯ ಬೇಕು’ ಎಂದು ಪಟ್ಟು ಹಿಡಿದಿದ್ದಾರೆ.

ವಕೀಲ ಪ್ರೀತಮ್ ನೀಡಿದ್ದ ದೂರಿನ ಮೇರೆಗೆ ದಾಖಲಿಸಿದ್ದ ಪ್ರಕರಣ‌ ಆಧರಿಸಿ ಕಾನ್‌ಸ್ಟೆಬಲ್ ಗುರುಪ್ರಸಾದ್ ಬಂಧನಕ್ಕೆ ಅಧಿಕಾರಿಗಳು ಮುಂದಾದರು.

ಈ ಮಾಹಿತಿ ವಾಟ್ಸ್‌ಆಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದಂತೆ ಹನುಮಂತಪ್ಪ ಸರ್ಕಲ್‌ಬಳಿ ಜಮಾಯಿಸಿದರು. ಸ್ವಲ್ಪ ಹೊತ್ತಿನಲ್ಲೇ ಗುರುಪ್ರಸಾದ್‌ ಅವರನ್ನು ಬಂಧಿಸಲಾಗಿದೆ ಎಂಬುವುದು ಖಚಿತವಾಗಿ ಪೊಲೀಸರು, ಸಮವಸ್ತ್ರ ಸಹಿತ ಧರಣಿ ನಡೆಸಿ ವಕೀಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ಪ್ರೀತಮ್ ಪೊಲೀಸರ ಮೇಲೆ ನಡೆಸಿದ ದೌರ್ಜನ್ಯವನ್ನು ಯಾರೂ ಪರಿಗಣಿಸುತ್ತಿಲ್ಲ.‌ ಪೊಲೀಸರೇ ಕಳ್ಳರೆಂದು ಬಿಂಬಿಸಲಾಗುತ್ತಿದೆ. ನಮಗೂ ನ್ಯಾಯ ಸಿಗಬೇಕು ಎಂದು ‌ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತ ಪೊಲೀಸರನ್ನು ಸಮಾಧಾನಪಡಿಸಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ಯತ್ನಿಸಿದರು. ಆದರೆ, ಒಪ್ಪದ ಪೊಲೀಸರು ಧರಣಿ ಮುಂದುವರಿಸಿದರು. ಪೊಲೀಸರ ಕಪಾಳಕ್ಕೆ ಹೊಡೆದ ವಕೀಲ ಪ್ರೀತಮ್ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂದು ಪಟ್ಟು ಹಿಡಿದರು.

ಐಜಿ ಭೇಟಿ: ರಾತ್ರಿ 10 ಗಂಟೆ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದ ಐಜಿ ಚಂದ್ರಗುಪ್ತ ಅವರು, ‘ಇಲಾಖೆ ತನಿಖೆಯ ವೇಳೆಗೆ ಪರಿಶೀಲನೆ ನಡೆಸುತ್ತೇವೆ, ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು. ಆದರೆ ಇದಕ್ಕೂ ಬಗ್ಗದ ಪೊಲೀಸರು, ‘ನಿಮ್ಮ ಮೇಲೆ ನಮಗೆ ವಿಶ್ವಾಸವಿಲ್ಲ’ ಎಂದು ಪ್ರತಿಭಟನೆ ಮುಂದುವರಿಸಿದರು.

ಕುಟುಂಬದವರ ಪ್ರತಿಭಟನೆ: ಅಮಾನತುಗೊಂಡಿರುವ ಪೊಲೀಸರ ಕುಟುಂಬದವರು ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿ, ಕಣ್ಣೀರು ಹಾಕಿದರು. ‘ಪೊಲೀಸರ ಕಪಾಳಕ್ಕೆ ಪ್ರೀತಮ್ ಹೊಡೆದಿದ್ದು, ಅವರ ವಿರುದ್ಧವೂ ಕ್ರಮ ಜರಗಿಸಬೇಕು’ ಎಂದು ಒತ್ತಾಯಿಸಿದರು.

‘ಪ್ರೀತಮ್ ವಿರುದ್ಧ ಗಲಭೆ ಪ್ರಕರಣ’: ‘ಅಮಾಯಕನಂತೆ ವರ್ತಿಸುತ್ತಿರುವ ವಕೀಲ ಪ್ರೀತಮ್‌ ವಿರುದ್ಧ ಆಲ್ದೂರು ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ’ ಎಂದು ಅಮಾನತುಗೊಂಡಿರುವ ಪೊಲೀಸ್ ಕಾನ್‌ಸ್ಟೆಬಲ್ ಶಶಿಧರ್ ಅವರ ಸಹೋದರ ದಿನೇಶ್ ಆರೋಪಿಸಿದರು.

‘2019 ಮತ್ತು 2020ರಲ್ಲಿ ಪ್ರತ್ಯೇಕ ಗಲಭೆ ಪ್ರಕರಣ ದಾಖಲಾಗಿವೆ. ಮೊದಲಿಂದಲೂ ಇದೇ ರೀತಿಯ ವರ್ತನೆ ರೂಢಿಸಿಕೊಂಡಿರುವ ಪ್ರೀತಮ್‌ ಬಗ್ಗೆ ಅವರ ಊರಿನಲ್ಲಿಯೇ ಒಳ್ಳೆಯ ಹೆಸರಿಲ್ಲ. ಅಂತಹ ವ್ಯಕ್ತಿಯ ಬೆನ್ನಿಗೆ ಎಲ್ಲರೂ ನಿಂತಿದ್ದಾರೆ. ಕಾನೂನು ಪಾಲನೆ ಮಾಡಿಸಲು ಮುಂದಾದ ಪೊಲೀಸರ ಬೆನ್ನಿಗೆ ಯಾರೂ ಇಲ್ಲ’ ಎಂದು ಕಣ್ಣೀರಿಟ್ಟರು.


Spread the love