ಚೆಸ್: ಅಮೇರಿಕಾದಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಿದ ಸಮರ್ಥ್

Spread the love

ಚೆಸ್: ಅಮೇರಿಕಾದಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಿದ ಸಮರ್ಥ್

ಉಡುಪಿ: ಅಮೇರಿಕಾದ ಫ್ಲೋರಿಡಾದಲ್ಲಿ ಜೂನ್ ತಿಂಗಳ ದಿನಾಂಕ 22ರಿಂದ 28 ರವರೆಗೆ ಜರಗಿದ ಪ್ರಥಮ ವಿಶ್ವ ಫಿಡೇಕಿರಿಯ ದೈಹಿಕ ಅಸಮರ್ಥರ ಚದುರಂಗ ಸ್ಪರ್ಧೆಯಲ್ಲಿ ಚಾಂಪಿಯನ್‍ಶಿಪ್ ಪಟ್ಟವನ್ನು ಗೆದ್ದುಕೊಂಡಿರುವ ಕುಂದಾಪುರ ಬಸ್ರೂರಿನ ಬಾಲಕ ಸಮರ್ಥ್ ಜಗದೀಶ್ ರಾವ್ ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಅವರು ಆಡಿದ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದುಕೊಂಡು ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡರು. ಪೋರ್ಟೋರಿಕಾ, ಬೆಲ್ಜಿಯಂ, ಪರುಗ್ವೆ, ಉಗಾಂಡ, ಅಮೇರಿಕಾ ಮೊದಲಾದ ದೇಶಗಳ ಆಟಗಾರರ ವಿರುದ್ಧ ಜಯ ಸಾಧಿಸಿದರೆ, ಜರ್ಮನಿಯ ಝಿಮ್ಮರ್ ವಿರುದ್ಧ ಏಕೈಕ ಸೋಲನ್ನು ಕಂಡರು.
ಈ ಹಿಂದೆಯೂ ಅಂತಾರಾಷ್ಟ್ರೀಯ ಚದುರಂಗ ಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡು ಬಂದಿರುವ ಸಮರ್ಥ್ ಕಳೆದ ತಿಂಗಳು ಸ್ಲೋವಾಕಿಯಾದಲ್ಲಿ ಜರಗಿದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.

ಸಮರ್ಥನ ಈ ಸಾಧನೆಯಲ್ಲಿ ದೇಶ ವಿದೇಶಗಳಲ್ಲಿ ನಡೆಯುತ್ತಿರುವ ಸ್ಪರ್ಧೆಗಳಿಗೆ ಆತನನ್ನು ಹೊತ್ತೊಯ್ಯುತ್ತಿರುವ ಆತನ ತಂದೆ ಜಗದೀಶ್ ರಾವ್ ಮತ್ತು ತಾಯಿ ವಿನುತಾರವರ ಶ್ರಮ-ತ್ಯಾಗಗಳು ಪ್ರಮುಖ ಪಾತ್ರ ವಹಿಸಿದೆ. ಜಗದೀಶ್ ಹೊನ್ನಾವರದ ಸಿಂಡಿಕೇಟ್ ಬ್ಯಾಂಕಿನ ಕಾಯಕದಲ್ಲಿದ್ದರೆ ತಾಯಿ ಉಪನ್ಯಾಸಕಿಯಾಗಿದ್ದಾರೆ. ಹೊನ್ನಾವರದ ಎಸ್ ಡಿ ಎಂ ಪ.ಪೂ ಕಾಲೇಜಿನಲ್ಲಿ ಪಿ.ಯು. ವಿದ್ಯಾರ್ಥಿಯಾಗಿರುವ ಸಮರ್ಥ್‍ನ ದೈಹಿಕ ಅಸಮರ್ಥತೆಯ ನಿಟ್ಟಿನಲ್ಲಿ ತಂಗಿ ಸಾನ್ವಿ ಮಾಡುತ್ತಿರುವ ಸಹಾಯವು ಅನುಪಮ.

ಈಗಿನ ಅಮೇರಿಕಾ ಪ್ರವಾಸವು ಸಾಕಾರಗೊಳ್ಳುವಲ್ಲಿ ಅಮೇರಿಕಾದ ನಂದಿ ಕನ್ನಡಕೂಟ ಮಿಯಾಮ ಇವರು ಆಹಾರ ಮತ್ತು ಇತರ ವೆಚ್ಚಗಳನ್ನು ಭರಿಸಿದರೆ, ಸ್ಪೋಟ್ರ್ಸ್ ಆಥಾರಿಟಿ ಆಫ್ ಇಂಡಿಯಾ ವಿಮಾನದ ಪಯಣ ವೆಚ್ಚವನ್ನು ಭರಿಸಿತ್ತು. ಅಲ್ಲದೆ ಅಖಿಲ ಭಾರತ ಚದುರಂಗ ಒಕ್ಕೂಟ, ದೈಹಿಕ ಅಸಮರ್ಥರ ಚದುರಂಗ ಒಕ್ಕೂಟಗಳೂ ತಮ್ಮ ಸಹಕಾರವನ್ನು ನೀಡಿತ್ತು.

ದೈಹಿಕ ಅಸಮರ್ಥತೆಯನ್ನು ಹೊಂದಿಯೂ “ಸಮರ್ಥ”ನೆಂಬ ಅನರ್ಥ ನಾಮವನ್ನು ಹೊಂದಿದಂತೆ ಕಂಡು ಬರುತ್ತಿದ್ದುದನ್ನು, ತನ್ನ ಮಾನಸಿಕ ಸಾಮಥ್ರ್ಯದ ಮೂಲಕ ಅನ್ವರ್ಥಗೊಳಿಸಿರುವ ಸಮರ್ಥನ ಮಾನಸಿಕ ಸಾಮಥ್ರ್ಯವು ಸರಿಸಾಟಿಯಿಲ್ಲದಂತಿದ್ದು, ಆತನ ಮುಂದಿನ ಗುರಿ ಸರ್ವ ಸಮರ್ಥರೊಂದಿಗಿನ ಸ್ಫರ್ಧೆಯಲ್ಲಿ ಭಾಗವಹಿಸಿ ಗೆಲುವು ಕಾಣುವುದಾಗಿದೆ. ಈ ನಿಟ್ಟಿನಲ್ಲಿ ಆತನನ್ನು ಹೊತ್ತೊಯ್ಯುವ ಜಗದೀಶ್‍ರವರ ಮೇಲಿರುವ ಭಾರವನ್ನು ಕಡಿಮೆಯಾಗಿಸುವ ನಿಟ್ಟಿನಲ್ಲಿಎಲ್ಲರೂ ಕೈಜೋಡಿಸಿ ಭಾರತಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಿಸಬೇಕಾಗಿದೆ.


Spread the love