ಜಿಲ್ಲಾಸ್ಪತ್ರೆ 108 ಸೇವೆ ವೈಫಲ್ಯ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರ : ಯಶ್ಪಾಲ್ ಸುವರ್ಣ  

Spread the love

ಜಿಲ್ಲಾಸ್ಪತ್ರೆ 108 ಸೇವೆ ವೈಫಲ್ಯ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರ : ಯಶ್ಪಾಲ್ ಸುವರ್ಣ  

ಉಡುಪಿ ಜಿಲ್ಲಾಸ್ಪತ್ರೆಗೆ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ರೋಗಿ 2 ಗಂಟೆ ಕಾದರೂ 108 ಸೇವೆ ಲಭ್ಯವಾಗದೆ ಸಮಾಜಸೇವಕ ವಿಶು ಶೆಟ್ಟಿ ಯವರು ರೋಗಿಯನ್ನು ಗೂಡ್ಸ್ ವಾಹನದಲ್ಲಿ ಕರೆ ತಂದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ರಾಜ್ಯ ಸರ್ಕಾರ ಜಿಲ್ಲೆಯ ಆರೋಗ್ಯ ಸಮಸ್ಯೆಗಳ ಬಗ್ಗೆ ಮಲ ತಾಯಿ ಧೋರಣೆ ನಡೆಸುತ್ತಿದ್ದು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 2 ವರ್ಷಗಳಲ್ಲಿ ಹಲವಾರು ಬಾರಿ 108 ಸೇವೆ ವ್ಯತ್ಯಯವಾಗಿ ರೋಗಿಗಳು ಸಮಸ್ಯೆ ಎದುರಿಸುವ ಘಟನೆಗಳು ನಡೆದಿದ್ದು, ಹಲವು ಬಾರಿ ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ. ಕಳೆದ ಬಾರಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ವ್ಯತ್ಯಯದಿಂದಾಗಿ ರೋಗಿಗಳು ಸಮಸ್ಯೆ ಉಂಟಾದ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸ್ಪಂದಿಸದ ಸಂದರ್ಬದಲ್ಲಿ ಖಾಸಗಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಡಯಾಲಿಸಿಸ್ ಸೇವೆ ಒದಗಿಸಲಾಗಿತ್ತು.

108 ಚಾಲಕರಿಗೆ ಅವೈಜ್ಞಾನಿಕ ಶಿಫ್ಟ್ ವ್ಯವಸ್ಥೆ, ವಾಹನಗಳ ಕಳಪೆ ನಿರ್ವಹಣೆ, ವೇತನ ಬಾಕಿ, ವಸತಿ ಸೌಲಭ್ಯ ಮುಂತಾದ ಗಂಭೀರ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪತ್ರ ಬರೆದರೂ ರಾಜ್ಯ ಸರ್ಕಾರ ಪರಿಹಾರ ಕಲ್ಪಿಸದ ಹಿನ್ನಲೆಯಲ್ಲಿ ಉಡುಪಿಯಂತಹ ಆರೋಗ್ಯ ಹಾಗೂ ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡುವ ಜಿಲ್ಲೆಯಲ್ಲಿ ಇಂತಹ ಘಟನೆಗಳು ವರದಿಯಾಗುತ್ತಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ.

ಉಡುಪಿ ಜಿಲ್ಲಾಸ್ಪತ್ರೆ ನೂತನ ಕಟ್ಟಡ ಕಾಮಗಾರಿ ಕಳೆದ 2 ವರ್ಷಗಳಿಂದ ಅನುದಾನದ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದು, ಬಾಕಿ ಅನುದಾನ ಬಿಡುಗಡೆಗೆ ಹಲವು ಬಾರಿ ಮನವಿ ಮಾಡಲಾಗಿದ್ದು ಕಳೆದ ಅಧಿವೇಶನದಲ್ಲಿ ಆರೋಗ್ಯ ಸಚಿವರು ಬಾಕಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಇನ್ನೂ ಈಡೇರಿಲ್ಲ.

ಮುಂದಿನ ಜನವರಿ 15 ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ ಮಾಡದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ನೀಡಿದ್ದು, ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಆದ್ಯತೆಯ ಮೇರೆಗೆ 108 ಸೇವೆಯನ್ನು ವ್ಯವಸ್ಥಿತವಾಗಿ ಒದಗಿಸಲು ಹಾಗೂ ಜಿಲ್ಲಾಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮವಹಿಸುವಂತೆ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments