ಜೆಎನ್‍ಯು ಕನ್ನಡ ಅಧ್ಯಯನ ಪೀಠದಲ್ಲಿ ಎಂಫಿಲ್ ಮತ್ತು ಪಿಎಚ್‍ಡಿ ಸಂಶೋಧನೆ ಆರಂಭಿಸಲು ಒತ್ತಾಯ

Spread the love

ಜೆಎನ್‍ಯು ಕನ್ನಡ ಅಧ್ಯಯನ ಪೀಠದಲ್ಲಿ ಎಂಫಿಲ್ ಮತ್ತು ಪಿಎಚ್‍ಡಿ ಸಂಶೋಧನೆ ಆರಂಭಿಸಲು ಒತ್ತಾಯ

ನವದೆಹಲಿ: ದೆಹಲಿ ಕರ್ನಾಟಕ ಸಂಘವು ದೇಶದ ರಾಜಧಾನಿಯಲ್ಲಿ ಕನ್ನಡ ಭಾಷೆಯ ಉಳಿವು ಮತ್ತು ಅಭಿವೃದ್ಧಿಗಾಗಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಅವುಗಳಲ್ಲಿ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‍ಯು) ದಲ್ಲಿ ಕನ್ನಡ ಅಧ್ಯಯನ ಪೀಠದ ಪ್ರಾರಂಭ ಮತ್ತು ಸಂಘದ ಪಕ್ಕದಲ್ಲಿರುವ ಮೆಟ್ರೋ ಸ್ಟೇಶನ್‍ಗೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರು ಇಟ್ಟಿರುವುದು ಮುಖ್ಯವಾದದ್ದು.

ಜೆಎನ್‍ಯುವಿನ ಕನ್ನಡ ಅಧ್ಯಯನ ಪೀಠವು ಅದರ ನಿರ್ದೇಶಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರ ನೇತೃತ್ವದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಅಧ್ಯಯನ ಪೀಠವನ್ನು ಪ್ರಾರಂಭಿಸುವಾಗ ಕರ್ನಾಟಕ ಸರಕಾರವು ಐದುಕೋಟಿ ರೂಪಾಯಿಗಳನ್ನು ಠೇವಣಿ ಇಟ್ಟಿದೆ. ಅದರಂತೆ ಎಂಫಿಲ್ ಮತ್ತು ಪಿಎಚ್‍ಡಿ ಮಾಡಲು ಅಲ್ಲಿ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಸರಕಾರ ಮತ್ತು ಜೆಎನ್‍ಯುವಿನ ನಡುವೆ ಒಡಂಬಡಿಕೆಯಾಗಿತ್ತು. ಆದರೆ ಜೆಎನ್‍ಯು ಎಂಫಿಲ್ ಮತ್ತು ಪಿಎಚ್‍ಡಿ ಮಾಡಲು ಇದುವರೆಗೆ ಅವಕಾಶ ಮಾಡಿಲ್ಲ. ಇದನ್ನು ದೆಹಲಿ ಕರ್ನಾಟಕ ಸಂಘವು ತೀವ್ರವಾಗಿ ಖಂಡಿಸುತ್ತದೆ ಮಾತ್ರವಲ್ಲ ಅದನ್ನು ಕೂಡಲೇ ಆರಂಭಿಸಬೇಕು ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಹೇಳಿದರು. ಅವರು ಕರ್ನಾಟಕ ಸರಕಾರದ ನವದೆಹಲಿಯ ಕರ್ನಾಟಕ ಭವನವು ನವೆಂಬರ್ 1ರಂದು ಆಯೋಜಿಸಿದ್ದ 63ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡುತ್ತಿದ್ದರು.

ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡುತ್ತ ದೆಹಲಿ ವಿಶ್ವವಿದ್ಯಾಲಯ ಹಾಗೂ ಬನಾರಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗಗಳು ಮುಚ್ಚಿಹೋಗಿವೆ. ಅವುಗಳನ್ನು ಪುನ: ಪ್ರಾರಂಭಿಸಬೇಕು. ಇದಕ್ಕೆ ದೆಹಲಿ ಕರ್ನಾಟಕ ಸಂಘವು ಹಿಂದೆ ಪ್ರಯತ್ನವನ್ನು ಮಾಡಿತ್ತು. ಆದರೆ ಅದು ಸಾಧ್ಯವಾಗಿಲ್ಲ, ಮುಂದೆಯಾದರು ಅವುಗಳು ಪುನರ್ ಪ್ರಾರಂಭಿಸಲು ಕರ್ನಾಟಕ ಸರಕಾರ ಮತ್ತು ಕನ್ನಡ ಸಂಘಟನೆಗಳು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಸೈಯದ್ ಮೊಹಿದ್ ಅಲ್ತಾಫ್ ಅವರು ಮಾತನಾಡಿ ಕನ್ನಡದ ಅಭಿವೃದ್ದಿಗೆ ಕರ್ನಾಟಕ ಸರಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದು ಎಂದು ಹೇಳಿದರು. ಕರ್ನಾಟಕ ಭವನದ ನಿವಾಸೀ ಅಯುಕ್ತ ಶ್ರೀ ನಿಲಯ ಮಿತಾಶ್ ಅವರು ಮುಂಬರುವ ವರ್ಷಗಳಲ್ಲಿ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ದೆಹಲಿಯ ಇತರ ಜನರಿಗೂ ಅರಿವು ಮೂಡಿಸುವಂತಹ ವಿಶೇಷ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.


Spread the love