ಜೆಪ್ಪು ಆಶ್ರಮ ;ಸಂತ ಅಂತೊನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ಮೇ 31 ರಂದು ಆರಂಭ

Spread the love

ಜೆಪ್ಪು ಆಶ್ರಮ ;ಸಂತ ಅಂತೊನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ಮೇ 31 ರಂದು ಆರಂಭ

ಮಂಗಳೂರು: ಜೂನ್ 13 ರಂದು ನಡೆಯುವ ಸಂತ ಅಂತೊನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ಮೇ 31 ರಂದು 13 ದಿನಗಳ ನವೇನ ಪ್ರಾರ್ಥನೆ ಆರಂಭಗೊಳ್ಳುತ್ತದೆ. 11 ಗಂಟೆಗೆ ಆರಂಭಗೊಳ್ಳುವ ಈ ಭಕ್ತಿ ಕಾರ್ಯಕ್ರಮದಲ್ಲಿ ಜಪಸರ, ಆರಾಧನೆ, ಬಲಿಪೂಜೆ ಮತ್ತು ನವೇನ ಪ್ರಾರ್ಥನೆ ಇರುತ್ತದೆ. ಹಬ್ಬಕ್ಕೆ ಸಮೀಪದ ತಯಾರಿಯಾಗಿ ಜೂನ್ 10 ರಂದು ಸಾಯಾಂಕಾಲ 5.30 ಗಂಟೆಗೆ ಮಿಲಾಗ್ರಿಸ್ ಚರ್ಚ್‍ನಲ್ಲಿ ಧ್ವಜಾರೋಹಣೆಯೊಂದಿಗೆ ಮೂರು ದಿನಗಳ ಭಕ್ತಿ ಕಾರ್ಯಕ್ರಮ ಆರಂಭಗೊಳ್ಳುತ್ತದೆ. ಸಾಯಾಂಕಾಲ 6 ಗಂಟೆಗೆ ಬಲಿಪೂಜೆ ನಂತರ ನವೇನ ಪ್ರಾರ್ಥನೆ ಇರುತ್ತದೆ.

ಈ ಸಲ ಹಬ್ಬವನ್ನು ಎರಡು ದಿನಗಳಲ್ಲಿ ಆಚರಿಸಲಾಗುವುದು. ಜೂನ್ 12 ರಂದು ಸಂತ ಆಂತೋನಿ ಪುಣ್ಯ ಕ್ಷೇತ್ರ ಆರಂಭಗೊಂಡು 120 ಸಂವತ್ಸರಗಳು ತುಂಬುತ್ತಿವೆ. ಅಂದು ಸಾಯಾಂಕಾಲ 6 ಗಂಟೆಗೆ ಅತೀ ವಂದನೀಯ ಬರ್ನಾಡ್ ಮೊರಾಸ್, ಬೆಂಗಳೂರು ಮಹಾಧರ್ಮಪ್ರಾಂತ್ಯದ ವಿಶ್ರಾಂತ ಮಹಾಧರ್ಮಧರ್ಮಾಧ್ಯಕ್ಷರು ಬಲಿಪೂಜೆ ಅರ್ಪಿಸುವರು. ಇವರು 1968 ರಿಂದ 1970 ತನಕ ಆಶ್ರಮದಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಂದು ಬೆಳಗ್ಗೆ 8.15 ಗಂಟೆಗೆ ಮಿಲಾಗ್ರಿಸ್ ಚರ್ಚ್‍ನಲ್ಲಿ, 11 ಗಂಟೆಗೆ ಆಶ್ರಮದಲ್ಲಿ ಮತ್ತು ಸಾಯಾಂಕಾಲ 5 ಗಂಟೆಗೆ ಮಿಲಾಗ್ರಿಸ್ ಚರ್ಚ್‍ನಲ್ಲಿ ಬಲಿಪೂಜೆ ಅರ್ಪಿಸಲಾಗುವುದು.

ಜೂನ್ 13 ಹಬ್ಬದ ದಿನದಂದು 10.30 ಗಂಟೆಗೆ ಜೆಪ್ಪು ಆಶ್ರಮದಲ್ಲಿ ಅತೀ ವಂದನೀಯ ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರು ಧರ್ಮಾಧ್ಯಕ್ಷರು ಬಲಿಪೂಜೆ ಅರ್ಪಿಸುವರು. ನಂತರ 120 ವರ್ಷದ ನೆನಪಿಗಾಗಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವರಿಗಾಗಿ 100 ಹಾಸಿಗೆಗಳ ಸುಸಜ್ಜಿತ ವಸತಿ ಆಲಯಕ್ಕೆ ಅಡಿಪಾಯ ಕಲ್ಲು ಆಶೀರ್ವಚನ ಮಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಆನಂತರ ಜೋನ್ ಎಮ್. ಪೆರ್ಮಾನ್ನೂರು ಇವರು ಬರೆದು ನಿರ್ದೆಶಿಸಿದ ಮತ್ತು ಮೊಗಾಚಿ ಲಾರಾಂ ಖ್ಯಾತಿಯ ವಿನ್ಸೆಂಟ್ ಫೆರ್ನಾಂಡಿಸ್‍ರವರ ಕ್ರಿಯೇಶನ್ಸ್ ಒಳಗೊಂಡ ‘ಸಾಂತ್ ಆಂತೊನ್, ಅಚರ್ಯಾಂಚೊ ಸಾಂತ್’(ಪವಾಡಗಳ ಸಂತ ಆಂತೋನಿ) ಕಿರು ನಾಟಕ ಪ್ರದರ್ಶಿಸಲಾಗುವುದು. ಅಂದು ಮಿಲಾಗ್ರಿಸ್‍ನಲ್ಲಿ ಬೆಳಗ್ಗೆ 8.15 ಗಂಟೆಗೆ, ಸಾಯಾಂಕಾಲ 4.30 ಗಂಟೆಗೆ(ಮಲಯಾಳಂ) ಮತ್ತು ಸಾಯಾಂಕಾಲ 6 ಗಂಟೆಗೆ ಪ್ರಧಾನ ಬಲಿಪೂಜೆ ಇರುವುದು.
120 ಸಂವತ್ಸರಗಳ ಸವಿನೆನಪಿಗಾಗಿ ಪ್ರಕಟಿಸಲಾದ ವಿಶೇಷ ಸ್ಮರಣ ಸಂಚಿಕೆಯನ್ನು ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆ ಮಾಡಲಾಯ್ತು.

ಪತ್ರಿಕಾಗೊಷ್ಟಿಯಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಬಿಷಪ್ ಎಲೋಶಿಯಸ್ ಪಾವ್ಲ್ ಡಿ’ಸೋಜ, ಸಂಸ್ಥೆಯ ನಿರ್ದೇಶಕ ಫಾ. ಒನಿಲ್ ಡಿ’ಸೋಜ, ವಂ. ಫಾ. ಫ್ರಾನ್ಸಿಸ್, ಫಾ. ಪೀಟರ್ ಗೊನ್ಸಾಲ್ವಿಸ್, ಫಾ. ತ್ರಿಶಾನ್ ಡಿ’ಸೋಜ, ಶ್ರೀ ವಿನ್ಸೆಂಟ್ ಮಸ್ಕರೇನ್ಹಸ್ ಧರ್ಮಪ್ರಾಂತ್ಯದ ಮಾಧ್ಯಮ ಸಮಿತಿಯ ಕಾರ್ಯದರ್ಶಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಸಂತ ಆಂತೋನಿ ಆಶ್ರಮದ ಕಿರು ಪರಿಚಯ
1898 ಜೂನ್ 12 ರಂದು ಮೊನ್ಸಿಂಜೊರ್ ಮೈಕಲ್ ಪ್ಲಾಸಿಡ್ ಕೊಲಾಸೊ ಅಂದಿನ ಮಿಲಾಗ್ರಿಸ್ ಚರ್ಚ್‍ನ ಸಹಾಯಕ ಧರ್ಮಗುರುಗಳು ಸಂತ ಆಂತೋನಿಯವರ ಗೌರಾವಾರ್ಥ ಭಕ್ತಿ ಪ್ರಾರ್ಥನೆ ಪ್ರಾರಂಭ ಮಾಡಿದರು. ಮರು ದಿವಸ ಸಂತ ಆಂತೋನಿಯವರ ವಾರ್ಷಿಕ ಹಬ್ಬ. ಮಂಗಳೂರು ಸುತ್ತು ಮುತ್ತಲಿನ ಜನರು ಅಪಾರ ಸಂಖೆಯಲ್ಲಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಅಂದಿನಿಂದ ಇಂದಿನವರೆಗೆ ಪ್ರತಿ ಮಂಗಳವಾರ ಈ ಭಕ್ತಿ ಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬಂದಿದೆ. ಜಾತಿ-ಮತ ಭೇದವಿಲ್ಲದೆ ಜನರು ತಮ್ಮ ಕಷ್ಟಗಳಲ್ಲಿ ಸಂತ ಆಂತೋನಿಯವರ ನೆರವು ಕೋರುತ್ತಾರೆ. ತಮ್ಮಲ್ಲಿ ನೆರವು ಕೋರಿ ಬಂದ ಭಕ್ತರನ್ನು ಸಂತ ಆಂತೋನಿಯವರು ಖಾಲಿ ಕೈಯಲ್ಲಿ ಹಿಂತುರಿಗಿಸದೆ ಖಂಡಿತವಾಗಿ ನೆರವನ್ನು ನೀಡಿಯೇ ನೀಡುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತ್ಯೇಕವಾಗಿ ವಸ್ತುಗಳನ್ನು ಕಳಕೊಂಡಾಗ ಸಂತ ಆಂತೋನಿಯವರಲ್ಲಿ ಬೇಡಿದರೆ ಆ ವಸ್ತು ಖಂಡಿತವಾಗಿ ಸಿಕ್ಕೇ ಸಿಗುತ್ತದೆ ಎಂಬ ಅಚಲ ನಂಬಿಕೆ ಭಕ್ತರಿಗಿದೆ ಮತ್ತು ಅದು ನಿಜವಾದದ್ದು ಹಲವಾರು ಬಾರಿ ಧೃಡಪಡಿಸಲಾಗಿದೆ.
ಸಂತರಲ್ಲಿ ಕೋರಿದ ಉಪಕಾರಗಳು ಪ್ರಾಪ್ತವಾಗುತ್ತಿದ್ದಂತೆ ಭಕ್ತಾದಿಗಳು ಕೃತಜ್ಞತಾ ಮನೋಬಾವದಿಂದ ವಸ್ತು ಅಥವಾ ಹಣದ ರೂಪದಲ್ಲಿ ಕಾಣಿಕೆ ಅರ್ಪಿಸತೊಡಗಿದರು. ಈ ಕಾಣಿಕೆಯನ್ನು ಗುರುಗಳು ಬಡವರಿಗೆ ಹಂಚುತ್ತಿದ್ದರು. ಕ್ರಮೇಣ ಮನೆಗಳನ್ನು ನಿರ್ಮಿಸಿ ನಿರ್ಗತಿಕರ ಸೇವೆ ಮಾಡಾಲಾಯ್ತು. 1930 ರಲ್ಲಿ ಕೋರ್ಟ್ ಏಲಂನಲ್ಲಿ ಜೆಪ್ಪುವಿನಲ್ಲಿನ ಜಾಗ ಖರೀದಿಸಿ ಮನೆಗಳನ್ನು ನಿರ್ಮಿಸಿ 1936 ರಲ್ಲಿ ನಿವಾಸಿಗಳನ್ನು ಪ್ರಸ್ತುತ ಆಶ್ರಮಕ್ಕೆ ಸ್ಥಳಾಂತರಿಸಲಾಯ್ತು. ಅಂದಿನಿಂದ ಇಂದಿನವರೆಗೆ ನಿರ್ಗತಿಕರನ್ನು ನೋಡಿಕೊಳ್ಳುವ ಸೇವೆಯ ಕೆಲಸ ಈ ಅಶ್ರಮದಲ್ಲಿ ಮಾಡಲಾಗುತ್ತದೆ. ಪ್ರಸ್ತುತ 400 ಮಂದಿ ನಿವಾಸಿಗಳು ಆಶ್ರಮದಲ್ಲಿ ವಾಸ ಮಾಡುತ್ತಾರೆ.
ಮೊದಲನೇ ಜಾಗತಿಕ ಯುದ್ದದ ಸಮಯದಲ್ಲಿ ಆಹಾರದ ಸಮಸ್ಸೆ ಇದ್ದ ಸಂದರ್ಭದಲ್ಲಿ ಬರ್ಮಾ ದೇಶದ ರಂಗೂನಿಂದ ಅಕ್ಕಿ ಖರೀದಿ ಮಾಡಿ ದಿನನಿತ್ಯ ನೂರಾರು ಜನರಿಗೆ ಊಟ ನೀಡಿ ಅವರ ಹಸಿವು ನೀಗಿಸಿದ ಖ್ಯಾತಿ ಆಶ್ರಮಕ್ಕಿದೆ.


Spread the love