ಡಾ| ಸಂಜೀವ ದಂಡೆಕೇರಿ ಅವರಿಗೆ ರಂಗಚಾವಡಿ ಪ್ರಶಸ್ತಿಯ ಗರಿ!

Spread the love

ಡಾ| ಸಂಜೀವ ದಂಡೆಕೇರಿ ಅವರಿಗೆ ರಂಗಚಾವಡಿ ಪ್ರಶಸ್ತಿಯ ಗರಿ!

ಸುರತ್ಕಲ್: ತುಳು ರಂಗಭೂಮಿ ಮತ್ತು ಸಿನಿಮಾ ರಂಗದಲ್ಲಿ ಡಾ| ಸಂಜೀವ ದಂಡೆಕೇರಿ ಅವರದ್ದು ಹಿರಿಯ ಮತ್ತು ಖ್ಯಾತ ಹೆಸರು. ಹಲವಾರು ಹೊಸ ಕಲಾವಿದರಿಗೆ ಸ್ಪೂರ್ತಿಯಾಗಿ, ಮಾರ್ಗದರ್ಶಕರಾಗಿ ಕಲಾಮಾತೆಯನ್ನು ಶ್ರೀಮಂತಗೊಳಿಸುವಲ್ಲಿ ವಿಶೇಷ ಕೊಡುಗೆ ನೀಡಿದವರು. ಬಯ್ಯಮಲ್ಲಿಗೆ ಖ್ಯಾತಿಯ ಆ ಮಹಾ ಸಾಧಕನಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿವೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ರಂಗಚಾವಡಿ ಸಾಹಿತ್ಯಿಕ-ಸಾಂಸ್ಕøತಿಕ ಸಂಘಟನೆಯ ರಂಗಚಾವಡಿ ಪ್ರಶಸ್ತಿ ನ. 6ರಂದು ಸುರತ್ಕಲ್‍ನ ಬಂಟರ ಭವನದಲ್ಲಿ ಜರಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿರುವ ಡಾ| ಸಂಜೀವ ದಂಡೆಕೇರಿ ಅವರ ಬಗ್ಗೆ ಒಂದಿಷ್ಟು ಮಾಹಿತಿ.

sanjeeva-dandekeri

ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ| ಸಂಜೀವ ದಂಡೆಕೇರಿ ಅವರು ಎಳವೆಯಲ್ಲೇ ಕಲಾಸೇವೆಯಲ್ಲಿ ನಿರತರು ಕಲಾಸಕ್ತರು. 1962ರಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಕಲ್ಪಂದಿ ತಿಮ್ಮೆ ನಾಟಕ ಬರೆಯುವ ಮೂಲಕ ನಾಟಕಕಾರರಾಗಿ ಗುರುತಿಸಿಕೊಂಡವರು. ಅದು ಅವರ ಚೊಚ್ಚಲ ನಾಟಕವಾಗಿದೆ. ಆ ಬಳಿಕ ನಾಟಕ ರಂಗದಲ್ಲಿ ಸಾಧನೆ ಮಾಡುತ್ತಾ ಹೋದ ಅವರು ಇದುವರೆಗೆ ಕನ್ನಡ ಮತ್ತು ತುಳುವಿನಲ್ಲಿ ಸುಮಾರು 26 ನಾಟಕಗಳನ್ನು ಬರೆದಿದ್ದಾರೆ. ಅವುಗಳೆಂದರೆ – ಚಂದ್ರಿಕಾ, ಮಸಣದ ಮನೆ, ವಿಧಿಲೀಲೆ, ಕಲ್ಪಂದಿ ತಿಮ್ಮೆ, ದುಡ್ಡುದ ಮರ್ಲ್, ಅಕ್ಕಾ, ಮಲ್ಲಾಯೆ ಮಗೆ, ಪೆÇಣ್ಣ ಜನ್ಮ, ಮೆಗ್ದಿಪಲಿ, ಒಂಜೇ ಕರ್ಲ್, ದಲಾಲಿ ದಾಸು, ಪುನರ್‍ಜನ್ಮ, ಬಯ್ಯಮಲ್ಲಿಗೆ, ಕಾವೇರಿ, ಕೋರ್ಟು ತೀರ್ಪು, ಅಮ್ಮಾ, ಬೊಳ್ಳಿ ಮೂಡುಂಡು, ಪುಣ್ಣಮೆ, ಪಾದಕಾಣಿಕೆ, ಪೂ- ಪನ್ನೀರ್, ಪೂ- ಮುಳ್ಳು, ಸರಸ್ವತಿ, ಪಾಪ-ಪುಣ್ಯ, ಗಂಗಾ-ರಾಮ್, ರಾಧಾ-ಕೃಷ್ಣ ಮುಂತಾದವುಗಳಾಗಿವೆ. ಈ ಪೈಕಿ ಬಯ್ಯಮಲ್ಲಿಗೆ, ಸರಸ್ವತಿ, ಬೊಳ್ಳಿ ಮೂಡುಂಡು, ಪಾದಕಾಣಿಕೆ, ರಾಧಾ-ಕೃಷ್ಣ, ಗಂಗಾ-ರಾಮ್ ಮುಂತಾದವುಗಳು ಕೃತಿ ರೂಪದಲ್ಲಿ ಹೊರ ಬಂದಿವೆ.

ಇವರ ನಾಟಕಗಳ ಪೈಕಿ ಅತಿ ಹೆಚ್ಚು ಪ್ರದರ್ಶನ ಕಂಡ ಮತ್ತು ಜನಮೆಚ್ಚುಗೆ ಗಳಿಸಿದ, ಈಗಲೂ ಬೇಡಿಕೆ ಇರಿಸಿಕೊಂಡಿರುವ ನಾಟಕವೆಂದರೆ ಬಯ್ಯಮಲ್ಲಿಗೆ. ಇದು ಕಳೆದ ಸುಮಾರು 50 ವರ್ಷಗಳಿಂದ 30 ಸಾವಿರಕ್ಕೂ ಮಿಕ್ಕಿದ ಪ್ರದರ್ಶನ ಕಂಡಿದೆ. ಅಲ್ಲದೆ ಕನ್ನಡ, ಮರಾಠಿ, ಇಂಗ್ಲಿಷ್, ಕೊಂಕಣಿ ಭಾಷೆಗಳಿಗೆ ಅನುವಾದಗೊಂಡು ಪ್ರದರ್ಶನವಾಗಿದೆ. ವಿದೇಶಗಳಲ್ಲೂ ಇದರ ಪ್ರದರ್ಶನವಾಗಿರುವುದು ಹೆಮ್ಮೆಯ ಸಂಗತಿ.

ಬಯ್ಯಮಲ್ಲಿಗೆಯ ಮೂಲ ಪ್ರಿಂಟ್ ಈಗ ಲಭ್ಯವಿಲ್ಲದ ಕಾರಣ ಅದನ್ನು 2016ರಲ್ಲಿ ಮರುಚಿತ್ರೀಕರಣ ನಡೆಸಿ ಟೆಲಿಫಿಲ್ಮ್ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಚಾನೆಲ್ ಮೂಲಕ ಪ್ರಸಾರ ಮಾಡುವ ಚಿಂತನೆ ನಡೆಯುತ್ತಿದೆ.

1975ರಲ್ಲಿ ಬಯ್ಯಮಲ್ಲಿಗೆ ನಾಟಕವನ್ನು ಶ್ರೀ ಜಯರಾಮ್ ಫಿಲ್ಮ್ಸ್ ಮೂಲಕ ಸಿನಿಮಾ ಮಾಡಲಾಗಿದ್ದು, ಅದು ಜ್ಯೋತಿ ಮತ್ತು ರಾಮಕಾಂತಿಯಲ್ಲಿ ಏಕಕಾಲದಲ್ಲಿ ಪ್ರದರ್ಶನ ಕಂಡಿತು. ಇದರಲ್ಲಿ ದಂಡೆಕೇರಿ ಅವರು ಕಥೆ -ಚಿತ್ರಕಥೆ ಬರೆದು, ನಟನೆಯನ್ನೂ ಮಾಡಿದ್ದರು. ಜಯಮಾಲ ನಾಯಕಿಯಾಗಿದ್ದರು. ಈ ಸಿನಿಮಾದ ನಿರ್ಮಾಪಕರು ಕೂಡ ಇವರೇ. ಬಳಿಕ ಇದೇ ಬ್ಯಾನರ್‍ನಡಿಯಲ್ಲಿ 1977ರಲ್ಲಿ ಬೊಳ್ಳಿತೋಟ ಸಿನಿಮಾ ಮಾಡಲಾಗಿದ್ದು, ಅದಕ್ಕೂ ಕಥೆ -ಚಿತ್ರಕಥೆ ಬರೆದಿರುವ ಅವರು ನಟನೆಯನ್ನೂ ಮಾಡಿದ್ದರು. ಇದರ ನಿರ್ಮಾಪಕರೂ ಇವರೇ. ಮುಂದೆ ಗರೋಡಿ ಫಿಲ್ಮ್ಸ್ ಹೊರತಂದ ಕುಂಕುಮ ಸಾಕ್ಷಿಗೆ ಕಥೆ-ಚಿತ್ರಕಥೆ- ಸಂಭಾಷಣೆ ಬರೆದ ಸಾಧಕರಿವರು.

ಗೌರವ – ಪುರಸ್ಕಾರ: ಡಾ| ದಂಡೆಕೇರಿ ಸಾಧನೆಗೆ ಹಲವಾರು ಗೌರವ, ಪುರಸ್ಕಾರಗಳು ಸಂದಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ – ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ -2000, ರಂಗಮಲ್ಲಿಗೆ -2001, ರಂಗಸೌರಭ -2002, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ -2002, ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ -2004, ಗ್ಲೋಬಲ್ ಮ್ಯಾನ್ ಅವಾರ್ಡ್ -2005, ತೌಳವ ಪ್ರಶಸ್ತಿ -2008, ಬುದ್ಧ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ -2012 ಹಾಗೂ ಮಂಗಳೂರಿನ ಫೋರಂ ಮಾಲ್ ಗ್ರೌಂಡ್‍ನಲ್ಲಿ ಜರಗಿದ ತುಳು ಚಿತ್ರೋತ್ಸವ ಸಮಾರಂಭದಲ್ಲಿ ತುಳು ಜೀವಮಾನ ಪ್ರಶಸ್ತಿ ಮುಂತಾದವುಗಳಾಗಿವೆ. ಇಂಥ ಮಹಾನ್ ರಂಗ ಸಾಧಕನಿಗೆ ಈಗ ಅರ್ಹವಾಗಿಯೇ ರಂಗಚಾವಡಿ ಪ್ರಶಸ್ತಿಯೂ ಸಂದಿದೆ.

ನ.6ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಡಾ.ಸಂಜೀವ ದಂಡೆಕೇರಿ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


Spread the love