ತನ್ನದೇ ಕಾಲೇಜಿನ ವಿದ್ಯಾರ್ಥಿಗಳಿಗೆ ರೂ. 50 ಲಕ್ಷ ಹಣವನ್ನು ವಂಚಿಸಿದ ವಿದ್ಯಾರ್ಥಿ

Spread the love

ತನ್ನದೇ ಕಾಲೇಜಿನ ವಿದ್ಯಾರ್ಥಿಗಳಿಗೆ ರೂ. 50 ಲಕ್ಷ ಹಣವನ್ನು ವಂಚಿಸಿದ ವಿದ್ಯಾರ್ಥಿ

ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿ ತನ್ನ ಕಾಲೇಜಿನ ವಿದ್ಯಾರ್ಥಿಗಳಿಂದ ಹಣ ಪಡೆದುಕೊಂಡು ಅದನ್ನು ದ್ವಿಗುಣಗೊಳಿಸಿ ವಾಪಾಸು ನೀಡುವುದಾಗಿ ಹೇಳಿ ವಂಚಿಸಿದ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನೋದ್ ಎನ್ನುವ ವಿದ್ಯಾರ್ಥಿ ತನ್ನ ಕಾಲೇಜಿನ ಸಹಪಾಟಿಗಳಿಂದಲೇ ರೂ 50,00,000 ಗಳನ್ನು ವಂಚಿಸಿದ್ದಾನೆ. ವಿನೋದ್ ತನ್ನ ಒರ್ವ ಸಹಪಾಠಿಯಿಂದ 20000 ಹಣವನ್ನು ಪಡೆದುಕೊಂಡು ಆತನಿಗೆ ಒಂದು ತಿಂಗಳಲ್ಲಿ 25000 ವಾಪಾಸು ನೀಡುವುದಾಗಿ ಹೇಳಿ ಪಡೆದುಕೊಂಡಿದ್ದು ಎನ್ನಲಾಗಿದೆ. ಆತನಿಗೆ ಹಣ ವಾಪಾಸು ನೀಡುವ ಸಮಯ ಬಂದಾಗ ಇನ್ನೋರ್ವ ವಿದ್ಯಾರ್ಥಿಯಿಂದ ರೂ 30000 ಪಡೆದುಕೊಂಡು ರೂ 40000 ವಾಪಾಸು ನೀಡುವುದಾಗಿ ಆಶ್ವಾಸನೆ ನೀಡಿದ್ದ ಎನ್ನಲಾಗಿದೆ. ಆದರೆ ವಿನೋದ್ ಹೆಸರಾಂತ ಚಿನ್ನದ ವ್ಯಾಪಾರಿ ಎಂದು ನಂಬಿಕೊಂಡಿದ್ದ ಆತನ ಸಹಪಾಟಿಗಳು ಹಣವನ್ನು ನೀಡಿದ್ದರು ಎನ್ನಲಾಗಿದೆ.

ಜುಲೈ 21 ರಂದು ಸುಮಾರು 30 ವಿದ್ಯಾರ್ಥಿಗಳಿಗೆ ಹಣ ವಾಪಾಸು ನೀಡುವುದಾಗಿ ನಂಬಿಸಿದ್ದ ಆದರೆ ಯಾರಿಗೂ ಕೂಡ ನೀಡದೆ ವಂಚಿಸಿದ ಘಟನೆ ಬೆಳಕಿಗೆ ಬಂದಾಗ ವಿದ್ಯಾರ್ಥಿಗಳು ಬರ್ಕೆ ಪೋಲಿಸ್ ಠಾಣೆಯನ್ನು ಸಂಪರ್ಕಿಸಿದ್ದು ಆ ವೇಳೆ ವಿನೋದ್ ತನ್ನಲ್ಲಿ ಈಗ ನೀಡಲು ಅಷ್ಟೊಂದು ಹಣವಿಲ್ಲ ಆದರೆ ಶೀಘ್ರ ಹಣವನ್ನು ವಾಪಾಸು ನೀಡುವುದಾಗಿ ಪೋಲಿಸರಲ್ಲಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ಈ ಕುರಿತು ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಮೋಸ ಹೋದ ವಿದ್ಯಾರ್ಥಿ ಕೀರ್ತನ್ ಅವರು ವಿನೋದ್ ಸುಮಾರು 10ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದಾನೆ. ಆತ ನಮ್ಮಿಂದ ಹಣ ಪಡೆಯುವಾಗ ಚಿನ್ನದ ವ್ಯಾಪಾರಿಯ ಮಗ ಎಂದು ಹೇಳಿಕೊಂಡಿದ್ದು, ಹೊಸ ಉದ್ಯಮ ಆರಂಭಿಸದ್ದೇನೆ ಎಂದು ಹೇಳಿಕೊಂಡಿದ್ದ. ಹಣ ಪಡೆಯುವಾಗ ಅದಕ್ಕೆ 50% ಹೆಚ್ಚಿನ ಹಣ ವಾಪಾಸು ನೀಡುವುದಾಗಿ ನಂಬಿಸಿ ಹಣ ಪಡೆದಿದ್ದ. ಆತನು ನಮ್ಮನ್ನು ನಂಬಿಸುವ ರೀತಿಯಿಂದಾಗಿ ಯಾವುದೇ ವಿದ್ಯಾರ್ಥಿಗೂ ಕೂಡ ಆತನ ಬಗ್ಗೆ ಸಂಶಯ ಬಂದಿರಲಿಲ್ಲ. ಹಲವಾರು ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಶುಲ್ಕವನ್ನು ಕಟ್ಟದೆ ಆತನಿಗೆ ನೀಡಿದ್ದಾರೆ ಮತ್ತು ಜುಲೈ 21 ರಂದು ವಾಪಾಸು ನೀಡುವ ಭರವಸೆಯೊಂದಿಗೆ ನೀಡಿದ್ದರು. ವಿನೋದ್ ಕೂಡ ಜುಲೈ 21 ರ ಮಧ್ಯಾಹ್ನ 3 ಗಂಟೆಯ ಒಳಗಡೆ ನೀಡುವುದಾಗಿ ಹೇಳಿದ್ದನು ಆದರೆ ಸಂಜೆ 8 ಗಂಟೆಯಾದರೂ ನೀಡದೆ ಹೋದಾಗ ನ್ಯಾಯಕ್ಕಾಗಿ ನಾವು ಪೋಲಿಸರನ್ನು ಸಂಪರ್ಕಸಿದೆವು. ಅಲ್ಲಿ ವಿನೋದ್ ಜೊತೆ ಆತನ ಹೆತ್ತವರನ್ನು ಕಂಡಾಗ ಈತ ನಮಗೆ ಮೋಸ ಮಾಡಿದ ವಿಚಾರ ಬೆಳಕಿಗೆ ಬಂದಿದೆ. ಆತ ನಮ್ಮಲ್ಲಿ ಚಿನ್ನದ ವ್ಯಾಪಾರಿಯ ಮಗ ಎಂದು ಹೇಳಿಕೊಂಡಿರುವುದು ಕೂಡ ಸುಳ್ಳಾಗಿದ್ದು ಆತ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಚಾರ ಕೂಡ ಬೆಳಕಿಗೆ ಬಂದಿದೆ. ಹಣಕ್ಕೆ ಬಡ್ಡಿ ಸಿಗುವ ನೆಪದಲ್ಲಿ ನಮ್ಮ ಹಣವನ್ನು ಆತನಿಗೆ ನೀಡಿದ್ದು ಈಗ ಹಣ ಸಿಗದೆ ನಮ್ಮ ಹೆತ್ತವರು ಹಣವನ್ನು ಕೇಳುತ್ತಿದ್ದಾರೆ. ವಿಶ್ವಾಸದ ಮೇಲೆ ನೀಡಿದ ಹಣ ವಾಪಾಸು ಬರದೆ ನಾವು ಕಂಗಾಲಾಗಿದ್ದೇವೆ ಎಂದರು.

ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿನೋದ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.


Spread the love