ದಕ್ಷಿಣ ಕನ್ನಡದಲ್ಲಿ ಕೊರೋನ ಗೆ ಮೊದಲ ಬಲಿ – ಬಂಟ್ವಾಳ ಮೂಲದ ಮಹಿಳೆ ಸಾವು

Spread the love

ದಕ್ಷಿಣ ಕನ್ನಡದಲ್ಲಿ ಕೊರೋನಗೆ ಮೊದಲ ಬಲಿ – ಬಂಟ್ವಾಳ ಮೂಲದ ಮಹಿಳೆ ಸಾವು

ಮಂಗಳೂರು: ಮಹಾ ಮಾರಿ ಕೊರೋನಾ ವೈರಸ್ ದಕ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದ್ದು ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ಸುಮಾರು 50 ವರ್ಷ ಪ್ರಾಯದ ಮಹಿಳೆಯ ರವಿವಾರ ಜಿಲ್ಲೆಯ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಸೋಂಕಿಗೆ ಮೃತಪಟ್ಟಿದ್ದಾರೆ.

ಬಂಟ್ವಾಳ ಕಸ್ಪಾ ನಿವಾಸಿ 50 ವರ್ಷದ ಮಹಿಳೆಯು ಏಪ್ರಿಲ್ 18 ರಂದು ತೀವ್ರ ಶ್ವಾಸಕೋಶದ ತೊಂದರೆ ಇರುವುದಾಗಿ ತುರ್ತು ಚಿಕಿತ್ಸೆಗೆ ವನ್ಹಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಇವರನ್ನು ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಆರಂಭಿಸಲಾಗಿರುತ್ತದೆ.

ಸದ್ರಿ ರೋಗಿಗೆ ತೀವ್ರ ಉಸಿರಾಟದ ತೊಂದರೆ ಇರುವುದರಿಂದ, ಕೋವಿಡ್-19ರ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿರುತ್ತಾರೆ.

ಪರೀಕ್ಷಾ ವರದಿ ನಿರೀಕ್ಷೆಯಲ್ಲಿರುವಾಗಲೇ, ರೋಗಿಯು ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಬೆಳಿಗ್ಗೆ 9-15 ಗಂಟೆಗೆ ನಿಧನ ಹೊಂದಿರುತ್ತಾರೆ. ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿಯು ಅಪರಾಹ್ನ ಸ್ವೀಕೃತವಾಗಿದ್ದು, ಸದರಿ ರೋಗಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿರುತ್ತದೆ.

ರೋಗಿಗೆ ಕೋವಿಡ್-19 ದೃಢಪಟ್ಟಿರುವ ಹಿನ್ನಲೆಯಲ್ಲಿ ಇವರ ಶವ ಸಂಸ್ಕಾರವನ್ನು ವೈದ್ಯಕೀಯ ಶಿಷ್ಠಾಚಾರದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡದ ನೇತೃತ್ವದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈಗಾಗಲೆ 13 ಕೊರೋನ ಸೋಂಕಿತರ ಪೈಕಿ 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಓರ್ವ ಚಿಕಿತ್ಸೆ ಪಡೆಯುತ್ತಿದ್ದಾರೆ.


Spread the love