ದೂರದೃಷ್ಟಿಯಿಲ್ಲದ ಕೇಂದ್ರ ಬಜೆಟ್ ಹಾಗೂ ಜನವಿರೋಧಿ ಮೋದಿ ಸರಕಾರ: ಕಾಪು ಯುವ ಕಾಂಗ್ರೆಸ್

Spread the love

ದೂರದೃಷ್ಟಿಯಿಲ್ಲದ ಕೇಂದ್ರ ಬಜೆಟ್ ಹಾಗೂ ಜನವಿರೋಧಿ ಮೋದಿ ಸರಕಾರ: ಕಾಪು ಯುವ ಕಾಂಗ್ರೆಸ್

ಕಾಪು : ಕೇಂದ್ರ ಸರಕಾರದ ವಿತ್ತ ಸಚಿವರಾದ ಅರುಣ್ ಜೈಟ್ಲಿ ಯವರು ಈ ಬಾರಿ ಮಂಡಿಸಿದ ಬಜೆಟ್ ಯಾವುದೇ ದೂರದೃಷ್ಟಿ ಇಲ್ಲದ, ಯುವ ಜನತೆಯ ವಿರೋಧಿ ಬಜೆಟ್ ಆಗಿದೆ ಎಂದು ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೆಲ್ವಿನ್ ಡಿಸೋಜ ರವರು ಆರೋಪಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಜನರನ್ನು ಮರುಳು ಮಾಡುವ ಭಾಷಣವನ್ನು ಬಿಗಿದು ಅಧಿಕಾರಕ್ಕೇರಿದ ಮೋದಿ ಸರಕಾರ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಹೇಳಿತ್ತು. ಆದರೆ ಈ ಬಾರಿಯೂ ಕೂಡಾ ಕೇಂದ್ರ ಬಜೆಟ್‍ನಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವಂತಹ ಯಾವುದೇ ರೀತಿಯ ಮಹತ್ವದ ಯೋಜನೆಗಳು ಕಾಣುತ್ತಿಲ್ಲ. ವಿದೇಶದಲ್ಲಿ ತಿರುಗಾಡುವ ಪ್ರಧಾನಿ ಮೋದಿಯವರಿಗೆ ದೇಶದ ಬಗ್ಗೆ, ಯುವ ಜನತೆಯ ಭವಿಷ್ಯದ ಬಗ್ಗೆ ಕಿಂಚಿತ್ತು ಕಾಳಜಿಯೂ ಇಲ್ಲ. ಕೇಂದ್ರ ಸರಕಾರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕೇವಲ ಪ್ರಚಾರಕ್ಕೆ ಮಾತ್ರ ಸಿಮೀತವಾಗಿದೆ.

ಈಗಾಗಲೇ ಕೇಂದ್ರ ಸರಕಾರದ ನೋಟ್‍ಬ್ಯಾನ್ ಹಾಗೂ ಜನ ವಿರೋಧಿ ನೀತಿಗಳಿಂದ ಯುವಕರು ಉದ್ಯೋಗವನ್ನು ಕಳೆದುಕೊಳ್ಳುವಂತಾಗಿದೆ. ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತ್ತಿದೆ. ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಜಿಎಸ್ಟಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಯುವಕರು ಪಕೋಡ ಮಾರಿ ದಿನಕಳೆಯುವಂತೆ ಹೇಳಿರುವ ಪ್ರಧಾನಿಯವರ ಮಾತು ದೇಶದ ವಿದ್ಯಾವಂತ ಯುವ ಜನತೆಗೆ ಅವರು ಮಾಡಿದ ಅವಮಾನವಾಗಿದೆ. ಇನ್ನಾದರೂ ಪ್ರಧಾನಿಯವರು ವಿದೇಶದಲ್ಲಿ ಸುತ್ತುವುದನ್ನು ಬಿಟ್ಟು ದೇಶದ ಯುವಜನತೆ ಬಗ್ಗೆ ಸ್ವಲ್ಪ ಚಿಂತಿಸಲಿ ಎಂದು ಅವರು ಅಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಸರಕಾರವನ್ನು ಯುವಜನತೆ ಮನೆಗೆ ಕಳುಹಿಸುವುದು ಖಂಡಿತ ಎಂದು ಅವರು ತಿಳಿಸಿದ್ದಾರೆ.

ಈ ಬಾರಿಯ ಬಜೆಟ್‍ನಲ್ಲಿ ಕರ್ನಾಟಕ ರಾಜ್ಯಕ್ಕೆ ಕೂಡಾ ಅನ್ಯಾಯ ಆಗಿದೆ. ಯಾವುದೇ ರೀತಿಯ ಹೊಸ ಯೋಜನೆಗಳು ಬಜೆಟ್‍ನಲ್ಲಿ ನಮ್ಮ ರಾಜ್ಯಕ್ಕೆ ಬಂದಿಲ್ಲ. ಸಂಕಷ್ಟದಲ್ಲಿರುವ ರಾಜ್ಯದ ರೈತರ ನೆರವಿಗೆ ಧಾವಿಸುವಲ್ಲಿ ಕೂಡಾ ಕೇಂದ್ರ ಸರಕಾರ ವಿಫಲವಾಗಿದೆ. ಬಿಜೆಪಿಯ ಕೇಂದ್ರ ಸರಕಾರದಲ್ಲಿ ನಮ್ಮ ರಾಜ್ಯದ ನಾಲ್ಕು ಸಚಿವರಿದ್ದರೂ, ಅತ್ಯಧಿಕ ಸಂಖ್ಯೆಯ ಬಿಜೆಪಿ ಸಂಸದರು ಇದ್ದರೂ ಅವರು ರಾಜ್ಯದ ಪರವಾಗಿ ಸ್ವರ ಎತ್ತದೇ ಇರುವುದು ಕರ್ನಾಟಕದ ಜನತೆಗೆ ಅವರು ಮಾಡಿದ ಅನ್ಯಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ಬಗ್ಗೆ ಯುವ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಮೆಲ್ವಿನ್ ಡಿಸೋಜರವರು ತಿಳಿಸಿದ್ದಾರೆ.


Spread the love